ಬೆಂಗಳೂರು: ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸರ್ಕಾರಿ ನೌಕರರ ಸಂಘದ ಚುನಾವಣೆ ಕಾವೇರಿದ್ದು, ತಾಲ್ಲೂಕು ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಶಾಖೆಯಿಂದ ಆರಂಭಗೊಂಡು ರಾಜ್ಯ ಸಂಘದ ಅಧ್ಯಕ್ಷರು, ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆ ಸೆ. 17ರಿಂದ ಡಿ. 27ರವರೆಗೆ ವಿವಿಧ ಹಂತದಲ್ಲಿ ನಡೆಯುತ್ತಿದೆ. ಚುನಾವಣಾಧಿಕಾರಿಯಾಗಿ ಎ. ಹನುಮನರಸಯ್ಯ ಕಾರ್ಯನಿರ್ವಹಿಸುತ್ತಿದ್ದಾರೆ.
ಮೊದಲ ಹಂತದಲ್ಲಿ ಮೂರು ಶೈಕ್ಷಣಿಕ ಜಿಲ್ಲೆ ಒಳಗೊಂಡ 33 ಜಿಲ್ಲೆಗಳು ಹಾಗೂ 191 ತಾಲ್ಲೂಕುಗಳ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ಪ್ರಕ್ರಿಯೆಗಳು ಮುಕ್ತಾಯದ ಹಂತ ತಲುಪಿವೆ. ತಾಲ್ಲೂಕು ನಿರ್ದೇಶಕರ ಆಯ್ಕೆ ಪೂರ್ಣಗೊಂಡಿದ್ದು, ಆಯ್ಕೆಯಾಗಿರುವವರು ನ. 16ರಂದು ನಡೆಯುವ ಚುನಾವಣೆಯಲ್ಲಿ ಆಯಾ ತಾಲ್ಲೂಕು ಘಟಕದ ಅಧ್ಯಕ್ಷ, ಖಜಾಂಜಿ ಹಾಗೂ ರಾಜ್ಯ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ.
ಪ್ರತಿ ಜಿಲ್ಲಾ ಕೇಂದ್ರದಲ್ಲೂ ಜಿಲ್ಲಾ ಸಂಘದ 66 ಸ್ಥಾನಗಳಿಗೆ ನ.16ರಂದು ಚುನಾವಣೆ ನಡೆಯುತ್ತದೆ. ಈಗಾಗಲೇ ಪ್ರತಿ ಜಿಲ್ಲೆಯಲ್ಲೂ 35ರಿಂದ 55 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾಯಿತರಾದವರು ಡಿ. 4ರಂದು ನಡೆಯುವ ಚುನಾವಣೆಯಲ್ಲಿ ಆಯಾ ಜಿಲ್ಲಾ ಸಂಘದ ಅಧ್ಯಕ್ಷರು, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ.
ತಾಲ್ಲೂಕು, ಜಿಲ್ಲಾ ಸಂಘಗಳ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಹಣಾಹಣಿ ಏರ್ಪಟ್ಟಿದ್ದು, ಆಕಾಂಕ್ಷಿಗಳು ಆಯ್ಕೆಯಾಗಿರುವ ನಿರ್ದೇಶಕರ ಮನವೊಲಿಕೆಯ ಕಸರತ್ತು ಆರಂಭಿಸಿದ್ದಾರೆ. ರಾಜಕಾರಣಿಗಳು, ಜನಪ್ರತಿನಿಧಿಗಳು, ತಮ್ಮ ತಮ್ಮ ಇಲಾಖೆಯ ಉನ್ನತಾಧಿಕಾರಿಗಳ ಮೂಲಕವೂ ನೌಕರರ ಮೇಲೆ ಪ್ರಭಾವ ಬೀರುತ್ತಿದ್ದಾರೆ.
ಬೆಂಗಳೂರಿಗೆ 102 ರಾಜ್ಯ ಪರಿಷತ್ ಸ್ಥಾನ:
ಬೆಂಗಳೂರು ನಗರ ವ್ಯಾಪ್ತಿಯಿಂದಲೇ 102 ರಾಜ್ಯ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಪ್ರತಿ ಇಲಾಖೆ, ಸಚಿವಾಲಯ ಸೇರಿದಂತೆ ಈ ಆಯ್ಕೆಗಳು ನಡೆಯುತ್ತವೆ. ಸೆ. 17ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಈಗಾಗಲೇ 72 ಸ್ಥಾನಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಅವರಲ್ಲಿ 44 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 30 ಸ್ಥಾನಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.
ರಾಜ್ಯ ಸಂಘ: ಡಿ. 6ರಿಂದ ನಾಮಪತ್ರ
ತಾಲ್ಲೂಕು ಹಾಗೂ ಜಿಲ್ಲಾ ಸಂಘದ ಪದಾಧಿಕಾರಿಗಳ ಆಯ್ಕೆಯ ನಂತರ ರಾಜ್ಯ ಸಂಘದ ಅಧ್ಯಕ್ಷ ಹಾಗೂ ಖಜಾಂಚಿ ಚುನಾವಣೆ ಪ್ರಕ್ರಿಯೆಗಳು ನಡೆಯಲಿವೆ.
ಡಿ. 6ರಿಂದ ಈ ಎರಡೂ ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಹಾಲಿ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಮತ್ತೊಮ್ಮೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದು, ಈಗಾಗಲೇ ರಾಜ್ಯ ಪರಿಷತ್ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಅವರ ಎದುರಾಳಿ ಯಾರು ಎನ್ನುವುದು ಡಿ. 6ರ ನಂತರ ಸ್ಪಷ್ಟವಾಗಲಿದೆ. ಕೆಳ ಹಂತದಲ್ಲಿ ನಡೆದ ಚುನಾವಣೆಯಲ್ಲಿ ಯಾರ ಬಣ ಹೆಚ್ಚು ಸ್ಥಾನಗಳನ್ನು ಪಡೆಯುತ್ತದೆಯೇ ಅವರ ಗೆಲುವಿನ ಸಾಧ್ಯತೆಯೂ ಹೆಚ್ಚಾಗಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.