ADVERTISEMENT

ಚಲನಚಿತ್ರ ಸಂಸ್ಥೆಗೆ ಗ್ರಹಣ: ಪುನಶ್ಚೇತನಕ್ಕೆ ಸರ್ಕಾರದ ನಿರಾಸಕ್ತಿ

ಪ್ರವೇಶ ಪಡೆಯಲು ವಿದ್ಯಾರ್ಥಿಗಳ ಹಿಂದೇಟು

ಚಂದ್ರಹಾಸ ಹಿರೇಮಳಲಿ
Published 5 ಜುಲೈ 2023, 23:30 IST
Last Updated 5 ಜುಲೈ 2023, 23:30 IST
ಬೆಂಗಳೂರಿನ ಹೆಸರಘಟ್ಟದಲ್ಲಿರುವ ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ
ಬೆಂಗಳೂರಿನ ಹೆಸರಘಟ್ಟದಲ್ಲಿರುವ ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ   

ಬೆಂಗಳೂರು: ಸಿನಿಮಾ ಕ್ಷೇತ್ರಕ್ಕೆ ಪ್ರತಿಭಾವಂತ ತಂತ್ರಜ್ಞರನ್ನು ಪರಿಚಯಿಸಲು ಸರ್‌.ಎಂ. ವಿಶ್ವೇಶ್ವರಯ್ಯ ಅವರು ಸ್ಥಾಪಿಸಿದ್ದ ‘ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ’ ಬಾಗಿಲು ಮುಚ್ಚುವ ಸ್ಥಿತಿ ತಲುಪಿದೆ.

1943ರಲ್ಲಿ ವಿಶ್ವೇಶ್ವರಯ್ಯ ಅವರು ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ ಸ್ಥಾಪಿಸಿದ್ದರು. ರಾಜ್ಯದಲ್ಲಿ ಚಿತ್ರೋದ್ಯಮ ನೆಲೆಯೂರುವ ಮೊದಲೇ ಚಲನಚಿತ್ರ ಮತ್ತು ಮಾಧ್ಯಮದ ಅಗತ್ಯಗಳನ್ನು ಮನಗಂಡು ಈ ಪಾಲಿಟೆಕ್ನಿಕ್‌ನಲ್ಲಿ ‘ಸಿನಿಮಾಟೋಗ್ರಫಿ, ಸೌಂಡ್‌ ರೆಕಾರ್ಡಿಂಗ್ ಮತ್ತು ಎಂಜಿನಿಯರಿಂಗ್‘ ಕೋರ್ಸ್‌ಗಳನ್ನು ಪರಿಚಯಿಸಿದ್ದರು. 1996ರಲ್ಲಿ ಈ ಎರಡೂ ಕೋರ್ಸ್‌ಗಳಿಗಾಗಿಯೇ ಹೆಸರಘಟ್ಟದಲ್ಲಿ ‘ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ’ ಆರಂಭಿಸಲಾಗಿತ್ತು.

ಬಹು ಬೇಡಿಕೆ ಹೊಂದಿದ್ದ ಸಂಸ್ಥೆಗೆ ಸೇರಲು ಹಲವು ದಶಕಗಳು ವಿದ್ಯಾರ್ಥಿಗಳ ನಡುವೆ ಪೈಪೋಟಿ ಇತ್ತು. ಹೊರ ರಾಜ್ಯದ ವಿದ್ಯಾರ್ಥಿಗಳೂ ಅಧಿಕ ಸಂಖ್ಯೆಯಲ್ಲಿ ಪ್ರವೇಶ ಪಡೆಯುತ್ತಿದ್ದರು. ಸಂಸ್ಥೆಯಲ್ಲಿ ಕಲಿತ ಹಲವರು ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಚಿತ್ರೋದ್ಯಮದಲ್ಲಿ ಅತ್ಯುತ್ತಮ ತಂತ್ರಜ್ಞರಾಗಿ ಹೆಸರು ಮಾಡಿದ್ದಾರೆ. ದೃಶ್ಯ ಮಾಧ್ಯಮ ಕ್ಷೇತ್ರಗಳಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ. ಆದರೆ, ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಸರ್ಕಾರಿ ತಾಂತ್ರಿಕ ಶಿಕ್ಷಣ ಸಂಸ್ಥೆ ಆಧುನೀಕರಣಗೊಳ್ಳದೆ ಬೇಡಿಕೆ ಕಳೆದುಕೊಂಡಿದೆ. ಪ್ರತಿ ವರ್ಷವೂ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ.

ADVERTISEMENT

ಎಸ್‌ಎಸ್‌ಎಲ್‌ಸಿ ನಂತರ ಮೂರು ವರ್ಷಗಳ ಡಿಪ್ಲೊಮಾ, ಪಿಯು ನಂತರ ಪ್ರವೇಶ ಪಡೆದರೆ ಎರಡು ವರ್ಷಗಳ ಕಲಿಕೆಗೆ ಅಲ್ಲಿ ಅವಕಾಶವಿದೆ. ಮೂರು ವರ್ಷಗಳ  ಆರೂ ಸೆಮಿಸ್ಟರ್‌ ಸೇರಿ ಪ್ರಸ್ತುತ ಇರುವ ವಿದ್ಯಾರ್ಥಿಗಳ ಸಂಖ್ಯೆ 54. ಅಂತಿಮ ವರ್ಷದಲ್ಲಿ 9 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯವಾದ ಉಪಕರಣಗಳು ಇಲ್ಲ. ಕ್ಯಾಮೆರಾ ಸೇರಿದಂತೆ ದಶಕಗಳ ಹಿಂದೆ ಖರೀದಿಸಿದ ಚಿತ್ರೋದ್ಯಮದ ತಾಂತ್ರಿಕ ಉಪಕರಣಗಳು ಉಪಯೋಗಕ್ಕೆ ಬಾರದಂತಾಗಿವೆ. ಕೆಲವು ತುಕ್ಕು ಹಿಡಿದಿವೆ. ಹೊಸ ಉಪಕರಣಗಳನ್ನು ಖರೀದಿಸಲು ಸರ್ಕಾರ ಅಗತ್ಯ ಅನುದಾನವನ್ನೇ ನೀಡಿಲ್ಲ. 25 ಎಕರೆ ಪ್ರದೇಶದಲ್ಲಿ ನೆಲೆಗೊಂಡಿರುವ ಸಂಸ್ಥೆಯ ಕಟ್ಟಡಗಳಷ್ಟೇ ಸುಸ್ಥಿತಿಯಲ್ಲಿವೆ.

‘ಕಲಿಕೆಗೆ ಅಗತ್ಯವಾದ ತಾಂತ್ರಿಕ ಉಪಕರಣಗಳು ಇಲ್ಲ. ₹ 4 ಸಾವಿರ ಶುಲ್ಕ ನೀಡಿ ಪ್ರವೇಶ ಪಡೆಯುತ್ತೇವೆ. ಅಂತಿಮ ವರ್ಷದಲ್ಲಿ ಪ್ರಾಜೆಕ್ಟ್‌ ವರ್ಕ್‌ ಮಾಡಲು ಕ್ಯಾಮೆರಾ ಬಾಡಿಗೆಗೆ ದಿನಕ್ಕೆ ₹ 30 ಸಾವಿರ ಖರ್ಚು ಮಾಡಬೇಕು. 50 ಸೆಕೆಂಡ್‌ನಿಂದ ಗರಿಷ್ಠ 30 ನಿಮಿಷದ ಕಿರುಚಿತ್ರ ನಿರ್ಮಿಸಲು ₹ 1.50 ಲಕ್ಷ ಖರ್ಚು ಮಾಡಿಸುತ್ತಾರೆ. ಪ್ರಾಜೆಕ್ಟ್‌ ಬದಲು ಚಲನಚಿತ್ರ ನಿರ್ಮಾಣ ಸಂಸ್ಥೆಗಳಲ್ಲಿ ಮೂರು ತಿಂಗಳು ಇಂಟರ್ನ್‌ಶಿಪ್‌ಗೆ ಅವಕಾಶವಿದ್ದರೂ ಪ್ರಾಂಶುಪಾಲರು ಒಪ್ಪುತ್ತಿಲ್ಲ. ಖರ್ಚು ಭರಿಸಲು ಸಾಧ್ಯವಾಗದೇ ವಿದ್ಯಾರ್ಥಿಗಳು ಅರ್ಧಕ್ಕೆ ಕಾಲೇಜು ತೊರೆಯಯತ್ತಿದ್ದಾರೆ’ ಎನ್ನುತ್ತಾರೆ ಪೋಷಕರಾದ ಕೆ.ಎಚ್‌.ಕುಮಾರ್.

ಸಂಸ್ಥೆ ಉನ್ನತೀಕರಿಸಲು ಸಮಿತಿಯೊಂದನ್ನು ರಚಿಸಲಾಗಿತ್ತು. ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಅಗತ್ಯ ಅನುದಾನ ದೊರೆತ ತಕ್ಷಣ ಆಧುನಿಕ ಉಪಕರಣ ಖರೀದಿಸಲಾಗುವುದು.
–ಪ್ರದೀಪ್‌ ಕೆ ಆಯುಕ್ತ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ.
ಪ್ರಾಜೆಕ್ಟ್‌ ವರ್ಕ್‌ ಭಾಗವಾಗಿ ಕಿರುಚಿತ್ರ ನಿರ್ಮಿಸಲು ಸಂಸ್ಥೆ ಹಣ ಪಡೆಯುವುದಿಲ್ಲ. ಉಪಕರಣಗಳ ಬಾಡಿಗೆಗೆ ವಿದ್ಯಾರ್ಥಿಗಳು ವೆಚ್ಚ ಮಾಡುತ್ತಾರೆ ಅಷ್ಟೆ. 
–ಟಿ.ಜಿ.ರವಿಕಿರಣ್‌ ಪ್ರಭಾರ ಪ್ರಾಂಶುಪಾಲ ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ.

ಇಡೀ ಕಾಲೇಜಿಗೆ ಇಬ್ಬರೇ ನೌಕರರು 

ಹಿಂದೆ ಕೆಲಸ ಮಾಡುತ್ತಿದ್ದ ಉಪನ್ಯಾಸಕರಲ್ಲಿ ಅನೇಕರು ನಿವೃತ್ತರಾಗಿದ್ದಾರೆ. ಹುದ್ದೆಗಳು ಖಾಲಿ ಇದ್ದರೂ ಸರ್ಕಾರ ಹಲವು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆಯನ್ನೇ ಮಾಡಿಲ್ಲ. ಮೂರು ವರ್ಷಗಳ ಹಿಂದೆ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮೂಲಕ ನೇಮಕಾತಿಗೆ ಅರ್ಜಿ ಆಹ್ವಾನಿಸಿದರೂ ಅರ್ಹ ಉಪನ್ಯಾಸಕರು ದೊರೆಯದೇ ನೇಮಕಾತಿ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಸದ್ಯಕ್ಕೆ ಪ್ರಾಂಶುಪಾಲರೂ ಸೇರಿ ಇಬ್ಬರೇ ಅಲ್ಲಿನ ಕಾಯಂ ಉದ್ಯೋಗಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.