ಬೆಂಗಳೂರು: ಕೊರೊನಾ ಸೋಂಕಿತರ ಪತ್ತೆಯ ಜತೆಗೆ ಕೋವಿಡ್ ಲಸಿಕೆಯ ಬಗ್ಗೆ ಜಾಗೃತಿ ಮೂಡಿಸಲು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರ ನಾಲ್ಕು ತಿಂಗಳಿಂದ ಪ್ರೋತ್ಸಾಹ ಧನ ಬಿಡುಗಡೆ ಮಾಡಿಲ್ಲ. ಇಷ್ಟಾಗಿಯೂ ಆರೋಗ್ಯ ಇಲಾಖೆ ಅಧಿಕಾರಿಗಳು ಕೋವಿಡ್ ಕರ್ತವ್ಯಕ್ಕೆ ಸೂಚಿಸುತ್ತಿರುವುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ 42 ಸಾವಿರಆಶಾಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಕೋವಿಡ್ ಕಾಣಿಸಿಕೊಂಡ ಬಳಿಕ ಸೋಂಕಿತರ ಸಂಪರ್ಕ ಪತ್ತೆ, ಮನೆ–ಮನೆ ಸಮೀಕ್ಷೆ ಸೇರಿ ವಿವಿಧ ಜವಾಬ್ದಾರಿಗಳನ್ನು ಅವರಿಗೆ ವಹಿಸಲಾಗಿದೆ. ಕೋವಿಡ್ ಲಸಿಕೆಗೆ ಸಂಬಂಧಿಸಿದಂತೆ ಹಿರಿಯ ನಾಗರಿಕರು ಸೇರಿ ಫಲಾನುಭವಿಗಳನ್ನು ಆರೋಗ್ಯ ಕೇಂದ್ರಗಳಿಗೆ ಕರೆತರುವ ಹೊಣೆಯೂ ಇವರ ಮೇಲಿದೆ. ಸೋಂಕು ಪೂರ್ಣ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಾರದೇ ಇದ್ದುದರಿಂದ ಅವರನ್ನು ಈಗಲೂ ಕೋವಿಡ್ ಸಂಬಂಧಿ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ.
ಕೋವಿಡ್ ಮೊದಲ ಮೂರು ಅಲೆಗಳ ಅವಧಿಯಲ್ಲಿ ಕೇಂದ್ರ ಸರ್ಕಾರವು ತಿಂಗಳಿಗೆ ತಲಾ ₹ 1 ಸಾವಿರ ನೀಡಿತ್ತು. 2022ರ ಮಾರ್ಚ್ ಬಳಿಕ ಈ ಪ್ರೋತ್ಸಾಹ ಧನವನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದೆ. ರಾಜ್ಯದಲ್ಲಿ ಕೋವಿಡ್ ನಾಲ್ಕನೇ ಅಲೆಯ ಮುನ್ನೆಚ್ಚರಿಕೆ ಹಾಗೂ ಲಸಿಕೆ ವಿತರಣೆಗೆ ವೇಗ ಒದಗಿಸಲು ಅವರ ಸೇವೆಯನ್ನು ಆರು ತಿಂಗಳು ಮುಂದುವರಿಸಿದ್ದ ರಾಜ್ಯ ಸರ್ಕಾರ, ತಲಾ ₹1 ಸಾವಿರ ಪ್ರೋತ್ಸಾಹಧನ ಒದಗಿಸುವ ಬಗ್ಗೆ ಅಧಿ
ಸೂಚನೆ ಹೊರಡಿಸಿತ್ತು. ಆದರೆ, ಕೋವಿಡ್ ಸೇವೆಯಲ್ಲಿ ನಿರತರಾಗಿರುವ ಆಶಾ ಕಾರ್ಯಕರ್ತೆಯರಿಗೆ ಈವರೆಗೂ ಪ್ರೋತ್ಸಾಹಧನ ಬಿಡುಗಡೆ ಮಾಡಿಲ್ಲ. ಇದರಿಂದಾಗಿ ಆಶಾ ಕಾರ್ಯಕರ್ತೆಯರು ಗೊಂದಲಕ್ಕೆ ಒಳಗಾಗಿದ್ದಾರೆ.
ಕೆಲಸ ಹಂಚಿಕೆ:‘ಮನೆ ಮನೆ ಸಮೀಕ್ಷೆ ನಡೆಸುವ ಮೂಲಕ ಕೋವಿಡ್‌ಗೆ ಸಂಬಂಧಿಸಿದಂತೆ ಸಂಶಯಾಸ್ಪದ ವ್ಯಕ್ತಿಗಳನ್ನು ಗುರುತಿಸಿ, ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಕರೆದೊಯ್ಯಲಾಗುತ್ತಿದೆ. ಮುನ್ನೆಚ್ಚರಿಕೆ ಡೋಸ್ ಪಡೆಯದವರಿಗೆ ಲಸಿಕೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಕೋವಿಡ್ ಪ್ರೋತ್ಸಾಹಧನ ಬಿಡುಗಡೆಯಾಗದಿದ್ದರೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಕೋವಿಡ್ ಕರ್ತವ್ಯವನ್ನು ಹಂಚಿಕೆ ಮಾಡಲಾಗುತ್ತಿದೆ’ ಎಂದುಕರ್ನಾಟಕ ರಾಜ್ಯ ಸಂಯುಕ್ತಆಶಾಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಬೇಸರ ವ್ಯಕ್ತಪಡಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ದೂರವಾಣಿ ಸಂಪರ್ಕಕ್ಕೆ ಸಿಗಲಿಲ್ಲ.
‘ಆಶಾ ಕಾರ್ಯಕರ್ತೆಯರಿಗೆ ಹೆಚ್ಚುವರಿ ಹೊರೆ’
‘ಮನೆ ಮನೆ ಸಮೀಕ್ಷೆ ಸೇರಿ ವಿವಿಧ ಕರ್ತವ್ಯಗಳಿಗೆ ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಇಲಾಖೆಯಿಂದ ಮೊಬೈಲ್ ಅಥವಾ ಟ್ಯಾಬ್ ನೀಡಿಲ್ಲ. ಆದರೂ ವಿವಿಧ ರೀತಿಯ ಸಮೀಕ್ಷೆಗಳನ್ನು ಮೊಬೈಲ್ ಆ್ಯಪ್ ಮೂಲಕ ನಡೆಸುವಂತೆ ಒತ್ತಾಯಿಸಲಾಗುತ್ತಿದೆ. ‘ಕೋವಿನ್’ ಪೋರ್ಟಲ್‌ನಲ್ಲಿ ಲಸಿಕೆ ಬಗ್ಗೆ ಮಾಹಿತಿ ದಾಖಲು ಸೇರಿ ವಿವಿಧ ಹೆಚ್ಚುವರಿ ಕೆಲಸಗಳನ್ನೂ ಮಾಡಿಸಿಕೊಳ್ಳಲಾಗುತ್ತಿದೆ. ಈ ಕೆಲಸಗಳನ್ನು ಮಾಡಲು ನಿರಾಕರಿಸಿದಲ್ಲಿ ಕೆಲಸದಿಂದ ತೆಗೆಯುವುದಾಗಿ ಅಧಿಕಾರಿಗಳು ಬೆದರಿಕೆ ಹಾಕುತ್ತಾರೆ’ ಎಂದು ಡಿ. ನಾಗಲಕ್ಷ್ಮಿ ಹೇಳಿದರು.
ಪ್ರೋತ್ಸಾಹಧನಕ್ಕೆ ಪ್ರಸ್ತಾವ ಸಲ್ಲಿಕೆ
‘ಕೋವಿಡ್ ಕರ್ತವ್ಯಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರದಿಂದ 2022ರ ಮಾರ್ಚ್‌ವರೆಗೆ ಪ್ರೋತ್ಸಾಹ ಧನ ನೀಡಲಾಗಿದೆ. ಕೋವಿಡ್ ನಾಲ್ಕನೇ ಅಲೆ ತಡೆ, ಲಸಿಕಾ ಅಭಿಯಾನಕ್ಕೆ ವೇಗ ಒದಗಿಸಲು ಅವರನ್ನು ತೊಡಗಿಸಿಕೊಳ್ಳಲಾಗುತ್ತಿದೆ. 2022ರ ಏಪ್ರಿಲ್‌ನಿಂದ ಆರು ತಿಂಗಳ ಅವಧಿಗೆ ಪ್ರೋತ್ಸಾಹಧನ ಮಂಜೂರಾತಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಆರೋಗ್ಯ ಇಲಾಖೆಯ ಅಧಿಕಾರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.