ADVERTISEMENT

ರೈತರಿಗೆ ಬರ ಪರಿಹಾರ ವಿತರಿಸದ ಸರ್ಕಾರ: ಆರ್‌. ಅಶೋಕ ಟೀಕೆ

ವಿಧಾನಸಭೆಯ ವಿರೋಧ ಪಕ್ಷದ ಆರ್‌.ಅಶೋಕ

​ಪ್ರಜಾವಾಣಿ ವಾರ್ತೆ
Published 5 ಮೇ 2024, 15:44 IST
Last Updated 5 ಮೇ 2024, 15:44 IST
ಆರ್‌.ಅಶೋಕ
ಆರ್‌.ಅಶೋಕ   

ಬೆಂಗಳೂರು: ‘ಕೇಂದ್ರದಿಂದ ಬರ ಪರಿಹಾರ ಬಂದ ತಕ್ಷಣವೇ ರೈತರಿಗೆ ವಿತರಿಸುವುದಾಗಿ ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈವರೆಗೂ ಪರಿಹಾರವನ್ನು ವಿತರಿಸಿಲ್ಲ. ಕಾಂಗ್ರೆಸ್‌ ಸರ್ಕಾರ ಇನ್ನೂ ಕುಂಭಕರ್ಣ ನಿದ್ರೆಯಲ್ಲಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ಆರ್‌.ಅಶೋಕ ಟೀಕಿಸಿದರು.

‘ಕ್ಷಣಗಳು ಹೋಗಿ ಗಂಟೆಗಳಾಗಿ, ಈಗ ಹಲವು ದಿನಗಳೇ ಕಳೆದಿವೆ. ರೈತರು ಬಿಸಿಲ ಬೇಗೆಯಿಂದ ಕಂಗೆಟ್ಟು ಹೋಗಿದ್ದಾರೆ. ರೈತರ ಸಂಕಷ್ಟಕ್ಕೆ ಸ್ಪಂದಿಸದೇ ಬೇರೆಯದೇ ರಾಜಕಾರಣದಲ್ಲಿ ತೊಡಗಿರುವ ಕಟುಕ ಸರ್ಕಾರವಿದು’ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಮೇವು ಇಲ್ಲದೇ ಜಾನುವಾರುಗಳನ್ನು ಕಟುಕರಿಗೆ ಮಾರಾಟ ಮಾಡುವ ಸ್ಥಿತಿಗೆ ರೈತರು ಬರುತ್ತಿರುವುದು ಬೇಸರದ ಸಂಗತಿ. ಈ ಸರ್ಕಾರ ಬೂಟಾಟಿಕೆಯಲ್ಲಿ ತೊಡಗಿದೆ. ರೈತರ ಸಂಕಷ್ಟಕ್ಕೆ ಸ್ಪಂದಿಸುವ ಗಂಭೀರತೆ ಎಲ್ಲೂ ಕಾಣಿಸುತ್ತಿಲ್ಲ’ ಎಂದು ಅವರು ತಿಳಿಸಿದರು.

ADVERTISEMENT

‘ಕಳೆದ ವರ್ಷ ಮುಂಗಾರು, ಹಿಂಗಾರು ಮಳೆ ಕೈಕೊಟ್ಟಿತ್ತು. ಇಂಥ ಸಂದರ್ಭದಲ್ಲಿ ಉರಿಯುವ ಮನೆಯಲ್ಲಿ ಗಳ ಹಿರಿಯುವ ಕೆಲಸ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಇವರ ಯೋಗ್ಯತೆಗೆ ಇದುವರೆಗೆ ಒಂದು ನಯಾಪೈಸೆ ಕೂಡ ಬಿಡುಗಡೆ ಮಾಡಿಲ್ಲ. ಬರ ಪೀಡಿತ ಪ್ರದೇಶ ಘೋಷಣೆಯನ್ನೂ ವಿಳಂಬ ಮಾಡುತ್ತಾ ಹೋಗಿದ್ದರು. ಕೇಂದ್ರಕ್ಕೆ ಮೂರೂವರೆ ತಿಂಗಳು ತಡವಾಗಿ ಪರಿಹಾರಕ್ಕಾಗಿ ಮನವಿ ಪತ್ರ ಬರೆದರು’ ಎಂದು ಅಶೋಕ ಟೀಕಿಸಿದರು.

‘ಕೇಂದ್ರ ಸರ್ಕಾರ ಹಣವನ್ನು ಬಿಡುಗಡೆ ಮಾಡಿದ್ದರೂ ಕೂಡ  ರೈತರಿಗೆ ಕೊಟ್ಟಿಲ್ಲ. ಸರ್ಕಾರದ ಖಜಾನೆ ಬರಿದಾಗಿದೆ. ಈ ಹಣವನ್ನು ಗ್ಯಾರಂಟಿಗೆ ಬಳಸಿಕೊಳ್ಳುವಂತಿದೆ. ರೈತರಿಗೆ ₹2,000 ವನ್ನು ಕಳೆದ 2–3 ತಿಂಗಳಿಂದ ಬಿಡುಗಡೆ ಮಾಡಿಲ್ಲ. ಒಂದೇ ಸಲ ಬಿಡುಗಡೆ ಮಾಡಿ ರಾಜಕಾರಣ ಮಾಡುವ ಉದ್ದೇಶವನ್ನು ಹೊಂದಿದೆ’ ಎಂದರು.

‘ಬರ ಪರಿಹಾರದ ಮೊತ್ತವನ್ನು ಕೇಳಿದರೆ, ಕಾಂಗ್ರೆಸ್ ಸಚಿವರು ಮತ್ತು ಶಾಸಕರು ‘ನಿಮ್ಮ ಹೆಂಗಸ್ರಿಗೆ ₹2,000 ಕೊಟ್ಟಿಲ್ವ’ ಎಂದು ಧಮ್ಕಿ ಹಾಕುತ್ತಿದ್ದಾರೆ. ಎಷ್ಟು ದಿನ ಗ್ಯಾರಂಟಿ ಹೆಸರಿನಲ್ಲಿ ರೈತರು, ಜನರಿಗೆ ಮೋಸ ಮಾಡುತ್ತೀರಿ? ಕೇಂದ್ರದ ಹಣ ಸದ್ಭಳಕೆ ಮಾಡುವಂತೆ ಮುಖ್ಯಮಂತ್ರಿಯವರಿಗೆ ಪತ್ರ ಬರೆಯುತ್ತೇನೆ’ ಎಂದು ಅಶೋಕ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.