ADVERTISEMENT

ಲಾಕ್‌ಡೌನ್ ಸಡಿಲಿಕೆ: ಆರು ಜಿಲ್ಲೆಗಳು ಒಂದೇ ಘಟಕ

​ಪ್ರಜಾವಾಣಿ ವಾರ್ತೆ
Published 11 ಮೇ 2020, 19:49 IST
Last Updated 11 ಮೇ 2020, 19:49 IST
ಲಾಕ್‌ಡೌನ್‌ ಸಡಿಲಿಕೆ ಹಿನ್ನೆಲೆಯಲ್ಲಿ ಹೆದದಾರಿಗಳಲ್ಲಿ ವಾಹನ ಸಂಚಾರ
ಲಾಕ್‌ಡೌನ್‌ ಸಡಿಲಿಕೆ ಹಿನ್ನೆಲೆಯಲ್ಲಿ ಹೆದದಾರಿಗಳಲ್ಲಿ ವಾಹನ ಸಂಚಾರ    

ಬೆಂಗಳೂರು: ಲಾಕ್‌ಡೌನ್‌ ಸಡಿಲಿಕೆ ಬೆನ್ನಲ್ಲೇ ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಐದು ಜಿಲ್ಲೆಗಳನ್ನುಒಂದೇ ಘಟಕವಾಗಿ ಪರಿಗಣಿಸಲು ತೀರ್ಮಾನಿಸಿರುವ ರಾಜ್ಯ ಸರ್ಕಾರ, ಉಡುಪಿ– ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸಹ ಒಂದೇ ಘಟಕವಾಗಿ ಮಾಡಿದೆ.

ಈ ಸಂಬಂಧ ಆದೇಶ ಹೊರಡಿಸಿರುವ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ.ಕೆ.ಅನಿಲ್‌ಕುಮಾರ್, ‘ಸರ್ಕಾರದ ಮಾರ್ಗಸೂಚಿ ಅನ್ವಯ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ತುಮಕೂರು ಜಿಲ್ಲೆಗಳನ್ನು ಒಂದು ಘಟಕವಾಗಿ ಪರಿಗಣಿಸಲಾಗಿದೆ. ಅದೇ ರೀತಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳನ್ನೂ ಒಂದೇ ಘಟಕವಾಗಿ ಪರಿಗಣಿಸಿ ಹಗಲು ವೇಳೆಯಲ್ಲಿ (ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ) ಆರ್ಥಿಕ ಚಟುವಟಿಕೆಗೆ ಅವಕಾಶ ನೀಡಲಾಗಿದೆ’ ಎಂದಿದ್ದಾರೆ.

‘ರಾಜ್ಯ ಕಾರ್ಯಕಾರಿ ಸಮಿತಿ ಅಧ್ಯಕ್ಷರ ನಿರ್ದೇಶನ ಮೇರೆಗೆ ಈ ಆದೇಶ ಹೊರಡಿಸಲಾಗಿದೆ.ಘಟಕ ಎಂದು ತೀರ್ಮಾನಿಸಲಾದ ಜಿಲ್ಲೆಗಳ ನಡುವೆ ನಿಗದಿತ ಸಮಯದಲ್ಲಿ ಸಂಚರಿಸಲು ಯಾವುದೇ ಪಾಸ್‌ಗಳ ಅಗತ್ಯ ಇರುವುದಿಲ್ಲ. ಉದ್ಯೋಗಿಗಳು ತಾವು ಕೆಲಸ ಮಾಡುತ್ತಿರುವ ಸಂಸ್ಥೆ ನೀಡಿರುವ ಗುರುತಿನ ಚೀಟಿ ಅಥವಾ ಪತ್ರ ತೋರಿಸಿದರೆ ಇದ್ದರೆ ಸಾಕು’ ಎಂದೂ ಆದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

‘ಇತರ ಜಿಲ್ಲೆಗಳಲ್ಲಿ ಅನುಮತಿ ನೀಡಿರುವ ಆರ್ಥಿಕ ಚಟುವಟಿಕೆಗೆ ಅಂತರ ಜಿಲ್ಲೆಗಳ ಸಂಚಾರ ಪಾಸ್‌ಗಳ ಅಗತ್ಯವಿದೆ. ಈ ಪಾಸ್‌ಗಳನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ, ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಉಪ ಪೊಲೀಸ್‌ ಕಮಿಷನರ್‌ (ಡಿಸಿಪಿ) ವಿತರಿಸುತ್ತಾರೆ.’

‘ಅಗತ್ಯ ಸೇವೆ ಒದಗಿಸುವವರು ಈಗಾಗಲೇ ನೀಡಿದ ಪಾಸ್‌ ಅನ್ನು ರಾತ್ರಿ ಅವಧಿಯಲ್ಲಿ ಓಡಾಡಲು (ಸಂಜೆ 7 ಗಂಟೆಯಿಂದ ಬೆಳಿಗ್ಗೆ 7 ಗಂಟೆವರೆಗೆ) ಬಳಸಬಹುದು. ಐಟಿ–ಬಿಟಿ ಕಂಪನಿಗಳು, ಕೈಗಾರಿಕೆಗಳಿಗೆ ಪಾಸ್‌ ನೀಡಲು ಸಂಬಂಧಿಸಿದ ಇಲಾಖೆಗಳ ಕಾರ್ಯದರ್ಶಿಗಳು ಶಿಫಾರಸು ಮಾಡಬಹುದು’ ಎಂದೂ ಅವರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.