ADVERTISEMENT

ಪಿಲಿಕುಳ ಕಂಬಳ ಇನ್ನೂ ನಿರ್ಧರಿಸಿಲ್ಲ: ಹೈಕೋರ್ಟ್‌ಗೆ ಸರ್ಕಾರ

ಪ್ರಾಣಿ ಸಂಗ್ರಹಾಲಯದ ಪ್ರಾಣಿಗಳಿಗೆ ಧಕ್ಕೆ: ಪೆಟಾ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2024, 16:12 IST
Last Updated 12 ನವೆಂಬರ್ 2024, 16:12 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯ ಪಿಲಿಕುಳದಲ್ಲಿ ಇದೇ 17ರಂದು ಕಂಬಳ ಸ್ಪರ್ಧೆ ನಡೆಸುವ ಕುರಿತು ಇನ್ನೂ ಯಾವುದೇ ಆಖೈರು ನಿರ್ಧಾರ ಕೈಗೊಂಡಿಲ್ಲ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

‘ದಕ್ಷಿಣ ಕನ್ನಡ ಜಿಲ್ಲೆಯ ಪಿಲಿಕುಳ ಜೈವಿಕ ಉದ್ಯಾನದ ಬಳಿ ಕಂಬಳವನ್ನು ಇದೇ 17ಕ್ಕೆ ನಡೆಸಲಾಗುತ್ತಿದೆ. ಇದರಿಂದ ಅಲ್ಲಿನ ಪ್ರಾಣಿಗಳಿಗೆ ಸಮಸ್ಯೆಯಾಗುತ್ತದೆ’ ಎಂದು ಆಕ್ಷೇಪಿಸಿ, ‘ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಅನಿಮಲ್’ (ಪೆಟಾ) ಸ್ವಯಂ ಸೇವಾ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಪೆಟಾ ಪರ ಹಿರಿಯ ವಕೀಲ ಧ್ಯಾನ್‌ ಚಿನ್ನಪ್ಪ, ‘ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಯಾವುದೇ ಭಾಗದಲ್ಲಿ ಕಂಬಳ ಸ್ಪರ್ಧೆಗೆ ನಮ್ಮ ಆಕ್ಷೇಪವಿಲ್ಲ. ಆದರೆ, ಇದೇ 17ರಂದು ಪಿಲಿಕುಳ ಜೈವಿಕ ಉದ್ಯಾನದ ಪ್ರಾಣಿ ಸಂಗ್ರಹಾಲಯದ ಸಮೀಪ ಕಂಬಳವನ್ನು ಆಯೋಜಿಸಲಾಗಿದೆ. ಇದರಿಂದ ಅಲ್ಲಿರುವ ವನ್ಯಜೀವಿಗಳಿಗೆ ಸಮಸ್ಯೆಯಾಗುತ್ತದೆ. ಈ ಸಂಬಂಧ ಪ್ರಾಣಿ ಸಂಗ್ರಹಾಲಯದ ನಿರ್ದೇಶಕರು ಸ್ಥಳೀಯ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ADVERTISEMENT

ಇದಕ್ಕೆ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ್‌ ಶೆಟ್ಟಿ ಅವರು, ‘ಪಿಲಿಕುಳದಲ್ಲಿ ಇದೇ 17ರಂದು ಕಂಬಳ ಓಟದ ಸ್ಪರ್ಧೆ ನಡೆಸುವ ಬಗ್ಗೆ ಇನ್ನೂ ಆಖೈರು ತೀರ್ಮಾನವಾಗಿಲ್ಲ. ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಸ್ಥಳದಲ್ಲಿ ಕಂಬಳ ಸ್ಪರ್ಧೆ ಆಯೋಜಿಸಲಾಗುತ್ತದೆ. ಅವರು ವರದಿ ನೀಡಬೇಕು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಂಬಳ ಸ್ಪರ್ಧೆ ಉಸ್ತುವಾರಿಯಾಗಿರುತ್ತಾರೆ. ಹೀಗಾಗಿ, ಅವರನ್ನೂ ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಮಾಡಬೇಕು’ ಎಂದು ಕೋರಿದರು.

ಇದನ್ನು ಪರಿಗಣಿಸಿದ ನ್ಯಾಯಪೀಠ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಪಿಲಿಕುಳ ಪ್ರಾಣಿ ಸಂಗ್ರಹಾಲಯದ ಅಧಿಕಾರಿಯನ್ನು ಪ್ರಕರಣದಲ್ಲಿ ಪ್ರತಿವಾದಿಯನ್ನಾಗಿ ಸೇರ್ಪಡೆ ಮಾಡುವಂತೆ ಅರ್ಜಿದಾರರಿಗೆ ಸೂಚಿಸಿ ವಿಚಾರಣೆ ಮುಂದೂಡಿತು. 'ಬೆಂಗಳೂರು ಕಂಬಳ ಸಮಿತಿ' ಪರ ಹೈಕೋರ್ಟ್‌ ವಕೀಲ ಬಿ.ವಿನೋದ್ ಕುಮಾರ್ ಹಾಜರಿದ್ದರು.

ಆಕ್ಷೇಪ: ‘ಈ ಮೊದಲು ಪೆಟಾ ಬೆಂಗಳೂರು ಮಹಾನಗರದಲ್ಲಿ ನವೆಂಬರ್‌ 5ರಂದು ಕಂಬಳ ಆಯೋಜಿಸಲು ಬೆಂಗಳೂರು ಕಂಬಳ ಸಮಿತಿಗೆ ಅನುಮತಿ ನೀಡದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ರಾಜ್ಯ ಸರ್ಕಾರ, ‘ಬೆಂಗಳೂರಿನಲ್ಲಿ ಕಂಬಳ ಆಯೋಜಿಸುವ ಬಗ್ಗೆ ನಿರ್ಧಾರವಾಗಿಲ್ಲ. ಪಿಲಿಕುಳದಲ್ಲಿ ನವೆಂಬರ್‌ 17ರಂದು ಸ್ಪರ್ಧೆ ನಡೆಸಲಾಗುವುದು’ ಎಂದು ತಿಳಿಸಿತ್ತು.

ಇದಕ್ಕೆ ಪೆಟಾ, ‘ಪಿಲಿಕುಳದಲ್ಲಿ ಕಂಬಳ ನಡೆಸಲು ಉದ್ದೇಶಿಸಲಾಗಿರುವ ಸ್ಥಳವು  ಪ್ರಾಣಿ ಸಂಗ್ರಹಾಲಯಕ್ಕೆ ಸಮೀಪದಲ್ಲಿದೆ. ಇದರಿಂದ ಅಲ್ಲಿನ ಪ್ರಾಣಿಗಳಿಗೆ ಸಮಸ್ಯೆಯಾಗಲಿದೆ. ಆದ್ದರಿಂದ, ಸ್ಪರ್ಧೆಯ ಸ್ಥಳ ಬದಲಾಯಿಸಬೇಕು’ ಎಂದು ಕೋರಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.