ಬೆಂಗಳೂರು: ಕೋವಿಡ್ ಕಾರಣ ಇದೇ ಡಿ.30 ರಿಂದ 2021ರ ಜ.2ರವರಗೆ ಕ್ಲಬ್, ಪಬ್, ರೆಸ್ಟೋರೆಂಟ್ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಡಿಜೆ ನೃತ್ಯ, ವಿಶೇಷ ಪಾರ್ಟಿ ಸೇರಿದಂತೆ ಒಂದೆಡೆ ಜನ ಸೇರುವ ವಿವಿಧ ಕಾರ್ಯಕ್ರಮಗಳನ್ನು ಸರ್ಕಾರವು ನಿಷೇಧಿಸಿದೆ.
ಕ್ರಿಸ್‌ಮಸ್ ಹಬ್ಬ ಹಾಗೂ ಹೊಸ ವರ್ಷ ಆಚರಣೆಯ ಕಾರಣ ಸರ್ಕಾರವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ರಾಜ್ಯದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ, ಹೆಚ್ಚು ಜನ ಸೇರುವ ವಸತಿ ಸಮುಚ್ಛಯಗಳಲ್ಲಿ ಹಾಗೂ ಜನ ಸೇರುವ ಸ್ಥಳಗಳಲ್ಲಿ ಸಾಮೂಹಿಕ ಕೂಟಗಳನ್ನು ನಿಷೇಧಿಸಿ, ಆದೇಶ ಹೊರಡಿಸಲಾಗಿದೆ.
ಆಚರಣೆಯ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸಲು ಅವಕಾಶ ನೀಡಲಾಗಿದ್ದು, ಕೋವಿಡ್ ಹರಡುವಿಕೆ ತಡೆಯುವ ಸಂಬಂಧ ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಯನ್ನು ಸರಳವಾಗಿ ಮತ್ತು ಅರ್ಥಗರ್ಭಿತವಾಗಿ ಆಚರಿಸುವಂತೆ ಸರ್ಕಾರವು ಆದೇಶದಲ್ಲಿ ತಿಳಿಸಿದೆ.
ಚರ್ಚ್‌ಗಳಲ್ಲಿ ಹೆಚ್ಚು ಜನರು ಗುಂಪು ಸೇರದಂತೆ ಹಾಗೂ ಅಂತರ ಕಾಯ್ದುಕೊಳ್ಳುವಂತೆ ಮೇಲ್ವಿಚಾರಕರು ಮತ್ತು ಆಯೋಜಕರು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಹಸ್ತಲಾಘವ ಮತ್ತು ಆಲಿಂಗನವನ್ನು ನಿಷೇಧಿಸಲಾಗಿದೆ.
ಹೊಸ ವರ್ಷದ ಸಂದರ್ಭದಲ್ಲಿ ಕ್ಲಬ್, ಪಬ್, ರೆಸ್ಟೋರೆಂಟ್‌ಗಳು ಸಾಮಾನ್ಯ ದಿನಗಳಂತೆ ವ್ಯವಹಾರ ನಡೆಸಲು ಅವಕಾಶವಿದೆ. ಮದ್ಯ ಮಾರಾಟದ ಮೇಲೆ ನಿರ್ಬಂಧವಿಲ್ಲ. ಆದರೆ, ವಿಶೇಷ ಪಾರ್ಟಿ ಹಾಗೂ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ಜನರು ಒಂದೆಡೆ ಸೇರುವ ಹಾಗಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ರಸ್ತೆಗಳಲ್ಲಿ ಜನ ಸೇರುವಿಕೆ ನಿಷೇಧ
* ಹೊಸ ವರ್ಷಾಚರಣೆ ಸಂಬಂಧ ಸಾರ್ವಜನಿಕ ಸ್ಥಳಗಳಲ್ಲಿ, ಮುಖ್ಯ ರಸ್ತೆಗಳಲ್ಲಿ ಸಾಮಾಜಿಕ ಅಂತರವಿಲ್ಲದೆಯೇ ಹೆಚ್ಚು ಜನರು ಸೇರುವಿಕೆ ಹಾಗೂ ಸಂಭ್ರಮಾಚರಣೆಯನ್ನು ನಿಷೇಧಿಸಲಾಗಿದೆ.
*ಸಾರ್ವಜನಿಕ ಸ್ಥಳಗಳಲ್ಲಿ, ಮುಖ್ಯ ರಸ್ತೆಗಳಲ್ಲಿ ಪ್ರತಿನಿತ್ಯದ ಸಾಮಾನ್ಯ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲು ಅವಕಾಶ ನೀಡಲಾಗಿದೆ.
*ಆಯ್ದ ರಸ್ತೆಗಳಿಗೆ ಸ್ಥಳೀಯ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳು ಹೆಚ್ಚಿನ ನಿರ್ಬಂಧ ವಿಧಿಸಬಹುದಾಗಿದೆ.
*65 ವರ್ಷ ಮೇಲ್ಪಟ್ಟವರು ಹಾಗೂ 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿಯೇ ಇರತಕ್ಕದ್ದು.
*ಹೋಟೆಲ್, ಮಾಲ್‌ಗಳು, ಪಬ್, ರೆಸ್ಟೋರೆಂಟ್ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಹಾಗೂ ಸೋಂಕು ನಿವಾರಕ ದ್ರಾವಣದ ವ್ಯವಸ್ಥೆ ಇರಬೇಕು.
*ಹೋಟೆಲ್, ಮಾಲ್‌ಗಳು, ಪಬ್, ರೆಸ್ಟೋರೆಂಟ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಮಾಲೀಕರು ಕೋವಿಡ್ ಮಾರ್ಗಸೂಚಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.