ADVERTISEMENT

ಸಿಬಿಐ ತನಿಖೆಯಿಂದ ಡಿಕೆಶಿಗೆ ರಕ್ಷಣೆ: ವಿಪಕ್ಷ ಆಪಾದನೆ

ಆದಾಯಕ್ಕಿಂತ ಹೆಚ್ಚು ಆಸ್ತಿ* ನಡೆಸುತ್ತಿರುವ ಪ್ರಕರಣ ವಾಪಸ್ ನಿರ್ಣಯ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2023, 16:16 IST
Last Updated 24 ನವೆಂಬರ್ 2023, 16:16 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದ ಕುರಿತು ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆಯುವ ಮೂಲಕ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರವು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ರಕ್ಷಣೆ ನೀಡಲು ಯತ್ನಿಸುತ್ತಿದೆ ಎಂದು ವಿರೋಧ ಪಕ್ಷಗಳು ಮುಗಿಬಿದ್ದಿವೆ.

ಶಿವಕುಮಾರ್‌ ಮೇಲೆ ಸಿಬಿಐ ತನಿಖೆಗೆ 2019ರ ಸೆಪ್ಟೆಂಬರ್‌ 25ರಂದು ನೀಡಿದ್ದ ಅನುಮತಿಯನ್ನು ಹಿಂಪಡೆಯಲು ಗುರುವಾರ ನಡೆದ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಸರ್ಕಾರದ ನಡೆಯನ್ನು ವಿರೋಧ ‍ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ತೀವ್ರವಾಗಿ ವಿರೋಧಿಸಿವೆ.

ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆಯುವ ವಿಚಾರ ಶುಕ್ರವಾರ ಇಡೀ ದಿನ ರಾಜ್ಯದ ಉದ್ದಗಲಕ್ಕೆ ಸದ್ದು ಮಾಡಿತು. ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ, ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಸೇರಿದಂತೆ ಹಲವು ಮುಖಂಡರು ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು.

ADVERTISEMENT

ಕಾನೂನು ಪ್ರಕ್ರಿಯೆಗಳನ್ನು ಸಮರ್ಪಕವಾಗಿ ನಡೆಸದೇ ಶಿವಕುಮಾರ್‌ ವಿರುದ್ಧ ಸಿಬಿಐ ತನಿಖೆಗೆ ವಹಿಸಲಾಗಿತ್ತು ಎಂಬ ರಾಜ್ಯ ಸರ್ಕಾರದ ಆರೋಪವನ್ನು ತಳ್ಳಿಹಾಕಿದ ಯಡಿಯೂರಪ್ಪ, ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಬರೆದಿದ್ದ ಪತ್ರವನ್ನು ಮಾಧ್ಯಮಗಳ ಎದುರು ಓದಿದರು.

ಸರ್ಕಾರದ ತೀರ್ಮಾನವನ್ನು ಟೀಕಿಸಿದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ‘ಇಡೀ ಸಂಪುಟ ಡಿ.ಕೆ. ಶಿವಕುಮಾರ್‌ ಪಾದದಡಿಯಲ್ಲಿದೆ’ ಎಂದು ಆರೋಪಿಸಿದರು.

ಪ್ರತಿಭಟನೆಗೆ ಬಿಜೆಪಿ ಸಜ್ಜು: ಸಂಪುಟದ ತೀರ್ಮಾನವನ್ನು ವಿರೋಧಿಸಿ ಶನಿವಾರ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ರಾಜ್ಯ ಘಟಕ ಪ್ರಕಟಿಸಿದೆ. ರಾಜ್ಯದೆಲ್ಲೆಡೆ ಸರಣಿ ಪ್ರತಿಭಟನೆಗಳನ್ನು ನಡೆಸುವುದಕ್ಕೂ ವಿರೋಧ ‍ಪಕ್ಷ ಸಜ್ಜಾಗುತ್ತಿದೆ.

ಬೆಂಬಲಕ್ಕೆ ನಿಂತ ಕಾಂಗ್ರೆಸ್‌: ವಿರೋಧ ಪಕ್ಷಗಳ ಟೀಕಾಪ್ರಹಾರದ ಮಧ್ಯೆಯೇ ಸರ್ಕಾರದ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಳ್ಳುವ ಪ್ರಯತ್ನವನ್ನು ಕಾಂಗ್ರೆಸ್‌ ಮಾಡಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಜಿ. ಪರಮೇಶ್ವರ, ಪ್ರಿಯಾಂಕ್‌ ಖರ್ಗೆ ಸೇರಿದಂತೆ ಹಲವು ಪ್ರಮುಖರು ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆಯುವ ನಿರ್ಧಾರ ಕಾನೂನುಬದ್ಧ ಎಂದು ವಾದಿಸಿದರು.

ಡಿ.ಕೆ. ಶಿವಕುಮಾರ್
ಗುರುವಾರ ಸಂಪುಟ ಸಭೆಗೆ ನಾನು ಹೋಗಿರಲಿಲ್ಲ. ತೀರ್ಮಾನದ ಬಗ್ಗೆ ಪತ್ರಿಕೆಗಳಲ್ಲಿ ಓದಿರುವೆ. ಈ ಬಗ್ಗೆ ಯಾರು ಮಾತನಾಡಬೇಕೋ ಅವರು ಮಾತನಾಡುತ್ತಾರೆ
–ಡಿ.ಕೆ. ಶಿವಕುಮಾರ್‌ ಉಪ ಮುಖ್ಯಮಂತ್ರಿ

ಸ್ಥಳೀಯ ಪೊಲೀಸರಿಂದ ತನಿಖೆಗೆ ಎ.ಜಿ ಸಲಹೆ

‘ಡಿ.ಕೆ. ಶಿವಕುಮಾರ್‌ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಸಿಬಿಐನಿಂದ ಹಿಂಪಡೆದು ಸ್ಥಳೀಯ ಪೊಲೀಸರು ಅಥವಾ ಲೋಕಾಯುಕ್ತ ಪೊಲೀಸರ ತನಿಖೆಗೆ ವಹಿಸಬಹುದು’ ಎಂದು ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಸರ್ಕಾರಕ್ಕೆ ನೀಡಿದ ಸಲಹೆಯಲ್ಲಿ ಪ್ರತಿಪಾದಿಸಿದ್ದಾರೆ. ಶಿವಕುಮಾರ್‌ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿಯು ಅಡ್ವೊಕೇಟ್‌ ಜನರಲ್‌ ಅಭಿಪ್ರಾಯ ಕೋರಿದ್ದರು. ಮಂಗಳವಾರ (ನವೆಂಬರ್‌ 21) ಸಲಹೆಯನ್ನು ಸಲ್ಲಿಸಿರುವ ಅವರು ‘ಶಿವಕುಮಾರ್‌ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ನೀಡಿ 2019ರ ಸೆಪ್ಟೆಂಬರ್‌ 25ರಂದು ಹೊರಡಿಸಿದ್ದ ಆದೇಶ ಕಾನೂನುಬದ್ಧವಾಗಿಲ್ಲ’ ಎಂದು ಉಲ್ಲೇಖಿಸಿದ್ದಾರೆ. ‘2019ರ ಸೆ. 19ರಂದು ಜಾರಿ ನಿರ್ದೇಶನಾಲಯವು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು. ಅದರಲ್ಲಿ ಸಿಬಿಐ ತನಿಖೆ ನಡೆಸಬೇಕೆಂಬ ಕೋರಿಕೆ ಇರಲಿಲ್ಲ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆ ಅಗತ್ಯವಿದೆ ಎಂಬ ಉಲ್ಲೇಖವಷ್ಟೇ ಇತ್ತು. ಈ ಪ್ರಕರಣದ ತನಿಖೆ ನಡೆಸಲು ರಾಜ್ಯದ ಪೊಲೀಸರು/ ಲೋಕಾಯುಕ್ತ/ ಸಿಐಡಿ ಪೊಲೀಸರು ಅಸಮರ್ಥರಾಗಿದ್ದರು ಎಂಬುದನ್ನು ನಿರೂಪಿಸುವ ಯಾವ ದಾಖಲೆಯೂ ಇಲ್ಲ.

ಆಗಿನ ಮುಖ್ಯಮಂತ್ರಿಯವರು ನೀಡಿದ್ದ ಮೌಖಿಕ ಸೂಚನೆಯಷ್ಟನ್ನೇ ಆಧರಿಸಿ ಸಿಬಿಐ ತನಿಖೆಗೆ ಆದೇಶಿಸಲಾಗಿತ್ತು’ ಎಂದು ಎ.ಜಿ ತಮ್ಮ ಅಭಿಪ್ರಾಯದಲ್ಲಿ ತಿಳಿಸಿದ್ದಾರೆ. ‘ಸಿಬಿಐ ತನಿಖೆಗೆ ಆದೇಶಿಸುವ ಕುರಿತು ಆಗಿನ ಎ.ಜಿಯವರ ಅಭಿಪ್ರಾಯವನ್ನೇ ಪಡೆದಿರಲಿಲ್ಲ. ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿ ಪ್ರಕಾರ ನಿಗದಿತ ನಮೂನೆಯಲ್ಲಿ ಪ್ರಕರಣದ ವಿವರವನ್ನೂ ಒದಗಿಸಿರಲಿಲ್ಲ. ಕರ್ನಾಟಕ ಲೋಕಾಯುಕ್ತವು ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಂದಿನ ಹಾಲಿ ಮುಖ್ಯಮಂತ್ರಿ ಹಾಗೂ ಸಚಿವರ ವಿರುದ್ಧವೂ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದರು. ಆದರೆ ಶಿವಕುಮಾರ್‌ ವಿರುದ್ಧದ ಪ್ರಕರಣವನ್ನು ತರಾತುರಿಯಲ್ಲಿ ಸಿಬಿಐಗೆ ವಹಿಸಲಾಗಿತ್ತು’ ಎಂದೂ ಹೇಳಿದ್ದಾರೆ. ‘ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲೇಬೇಕಾದ ಯಾವ ವಿಶೇಷ ಸಂದರ್ಭ ಮತ್ತು ಕಾರಣಗಳಿದ್ದವು ಎಂಬುದನ್ನು ರಾಜ್ಯ ಸರ್ಕಾರವು ತಿಳಿಸಿರಲಿಲ್ಲ. ಕಾನೂನಿನ ಅಗತ್ಯಗಳನ್ನು ಸಮರ್ಪಕವಾಗಿ ಪೂರೈಸದೇ ನಿರ್ಧಾರ ಕೈಗೊಳ್ಳಲಾಗಿತ್ತು’ ಎಂದು ಉಲ್ಲೇಖಿಸಿದ್ದಾರೆ.

ಸಿಬಿಐ ತನಿಖೆಗೆ ಕೊಟ್ಟಿದ್ದೇ ಕಾನೂನುಬಾಹಿರ’

‘ಸಭಾಧ್ಯಕ್ಷರ ಅನುಮತಿ ಪಡೆಯದೇ ಡಿ.ಕೆ. ಶಿವಕುಮಾರ್ ವಿರುದ್ಧದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ. ಇದು ಕಾನೂನುಬಾಹಿರವಾಗಿತ್ತು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸುದ್ದಿಗಾರರ ಜೊತೆ ಶುಕ್ರವಾರ ಮಾತನಾಡಿದ ಅವರು ‘ಅಡ್ವೊಕೇಟ್ ಜನರಲ್ (ಎ.ಜಿ) ಅವರ ಅಭಿಪ್ರಾಯ ಹಾಗೂ ಅನುಮತಿ ಪಡೆದುಕೊಂಡು ಇದೀಗ ಪ್ರಕರಣವನ್ನು ವಾಪಸು ಪಡೆದಿದ್ದೇವೆ’ ಎಂದರು. ‘ಡಿ.ಕೆ. ಶಿವಕುಮಾರ್ ಅವರು ಶಾಸಕರು. ಅವರ ವಿರುದ್ಧದ ಪ್ರಕರಣವನ್ನು ಸಿಬಿಐಗೆ ವಹಿಸುವ ಮುನ್ನ ಸಭಾಧ್ಯಕ್ಷರ ಅನುಮತಿ ಹಾಗೂ ಅಡ್ವೊಕೇಟ್ ಜನರಲ್ ಅಭಿಪ್ರಾಯ ಪಡೆಯಬೇಕಿತ್ತು. ಇದನ್ನು ಪಡೆಯದೇ ಅಂದಿನ ಮುಖ್ಯಮಂತ್ರಿ ಮೌಖಿಕವಾಗಿ ಆದೇಶ ಹೊರಡಿಸಿದ್ದರು’ ಎಂದು ಹೇಳಿದರು. ‘ನ್ಯಾಯಾಲಯದಲ್ಲಿ ಮೊಕದ್ದಮೆ ಏನಾಗಿದೆ ಎಂಬುದು ಗೊತ್ತಿಲ್ಲ. ಹಿಂದಿನ‌ ಸರ್ಕಾರ ನೀಡಿದ್ದ ಅನುಮತಿ ಕಾನೂನುಬದ್ಧವಾಗಿರಲಿಲ್ಲ. ಹೀಗಾಗಿ ಸಚಿವ ಸಂಪುಟದ ಮೂಲಕ ಅನುಮತಿ ಹಿಂಪಡೆಯುವ ತೀರ್ಮಾನ ತೆಗೆದುಕೊಂಡಿದ್ದೇವೆ’ ಎಂದು ತಿಳಿಸಿದರು.

ಬಿ.ಎಸ್‌. ಯಡಿಯೂರಪ್ಪ

‘ನ್ಯಾಯಾಲಯದಲ್ಲಿ ಹೋರಾಟಕ್ಕೆ ಸಿದ್ಧ’

‘ಜಾರಿ ನಿರ್ದೇಶನಾಲಯದ ಕೋರಿಕೆಯಂತೆ ಪ್ರಕರಣವನ್ನು ಡಿ.ಕೆ. ಶಿವಕುಮಾರ್‌ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಲಾಗಿತ್ತು. ಈಗ ಅನುಮತಿ ಹಿಂಪಡೆಯುವುದನ್ನು ವಿರೋಧಿಸಿ ಕಾನೂನು ಹೋರಾಟಕ್ಕೆ ನಾವೂ ಸಿದ್ಧ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಹೇಳಿದರು. ‘ಎ.ಜಿ ಅಭಿಪ್ರಾಯ ಪಡೆದು ಕಾನೂನು ಪ್ರಕಾರವೇ ನಾವು ನಿರ್ಧಾರ ಕೈಗೊಂಡಿದ್ದೆವು. ಈಗ ಶಿವಕುಮಾರ್‌ ಅವರನ್ನು ಸಿಬಿಐ ತನಿಖೆಯಿಂದ ರಕ್ಷಿಸಲು ಅನುಮತಿ ಹಿಂಪಡೆಯುವ ತೀರ್ಮಾನ ಕೈಗೊಳ್ಳಲಾಗಿದೆ’ ಎಂದರು. ಈಗ ಸರ್ಕಾರ ಹೇಳುತ್ತಿರುವುದನ್ನು ಶಿವಕುಮಾರ್‌ ಅವರೇ ಹೈಕೋರ್ಟ್‌ನಲ್ಲಿ ಪ್ರಸ್ತಾಪಿಸಿದ್ದರು. ನ್ಯಾಯಾಲಯ ಅದನ್ನು ತಳ್ಳಿಹಾಕಿತ್ತು. ಈಗಲೂ ಸರ್ಕಾರದ ತೀರ್ಮಾನವನ್ನು ನ್ಯಾಯಾಲಯ ಒಪ್ಪುವುದಿಲ್ಲ. ಅಗತ್ಯ ಕಂಡುಬಂದಲ್ಲಿ ನ್ಯಾಯಾಲಯಕ್ಕೆ ಹೆಚ್ಚಿನ ದಾಖಲೆ ಒದಗಿಸಲು ತಾವು ಸಿದ್ಧ ಎಂದು ಹೇಳಿದರು. ‘ಎ.ಜಿ ಹುದ್ದೆಯಲ್ಲಿರುವವರು ಕಾನೂನು ಪ್ರಕಾರ ನಡೆದುಕೊಳ್ಳಬೇಕು. ಈ ಪ್ರಕರಣದಲ್ಲಿ ಕಾನೂನು ಚೌಕಟ್ಟು ಮೀರಿ ಅಭಿಪ್ರಾಯ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರು ಅಕ್ಷಮ್ಯ ಅಪರಾಧ ಮಾಡಿದ್ದಾರೆ. ರಾಜ್ಯದ ಜನರು ಇದನ್ನು ಒಪ್ಪುವುದಿಲ್ಲ. ಈಗಲಾದರೂ ಸರ್ಕಾರ ತನ್ನ ನಿರ್ಧಾರವನ್ನು ಬದಲಿಸಬೇಕು’ ಎಂದು ಆಗ್ರಹಿಸಿದರು.

ಬಸನಗೌಡ ಪಾಟೀಲ ಯತ್ನಾಳ

‘ಡಿಕೆಶಿಗೆ ಎ.ಜಿ ವಕೀಲರಾಗಿದ್ದರು’

‘ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಡಿ.ಕೆ. ಶಿವಕುಮಾರ್‌ ಅವರ ವಕೀಲರಾಗಿ ಕೆ. ಶಶಿಕಿರಣ್‌ ಶೆಟ್ಟಿ ವಾದಿಸಿದ್ದರು. ಈಗ ಎ.ಜಿಯಾಗಿ ಶಿವಕುಮಾರ್‌ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆಯುವ ಶಿಫಾರಸು ಮಾಡಿದ್ದಾರೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ದೂರಿದ್ದಾರೆ. ಶಿವಕುಮಾರ್‌ ಅವರ ಪರ ಶಶಿಕಿರಣ್‌ ಶೆಟ್ಟಿ ವಾದ ಮಂಡಿಸಿರುವುದಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಹಂಚಿಕೊಂಡಿರುವ ಅವರು ‘ಪ್ರಭಾವಿ ರಾಜಕಾರಣಿಯ ವಕೀಲರು ಎ.ಜಿಯಾಗಿ ತನಿಖೆಗೆ ಅನುಮತಿ ಹಿಂಪಡೆಯುವ ಶಿಫಾರಸು ನೀಡುತ್ತಾರೆ. ಸಂಪುಟ ಸಭೆಯಲ್ಲಿ ಚರ್ಚೆಯೇ ಆಗದೆ ಅಂಗೀಕೃತವಾಗುತ್ತದೆ. ರಾಷ್ಟ್ರೀಯ ಕಾನೂನು ಶಾಲೆಯ ‘ಪ್ರತಿಭೆ’ ಶಶಿಕಿರಣ್‌ ಈ ರೀತಿ ವಿರೋಧಾಭಾಸದ ಪಾತ್ರಗಳನ್ನು ಮಾಡಬಾರದು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.