ಬೆಂಗಳೂರು: ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್ ಲಸಿಕೆ ಪೂರೈಸುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮರೆಯಾಗಿರುವುದರಿಂದ ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡಲು ಸರ್ಕಾರ ನಿರ್ಧರಿಸಿದೆ. ಇನ್ನು ರಾಜ್ಯದ ಎಲ್ಲ ಖಾಸಗಿ ಆಸ್ಪತ್ರೆಗಳಿಗೂ ಸರ್ಕಾರದ ಮೂಲಕವೇ ಕೋವಿಡ್ ಲಸಿಕೆ ಪೂರೈಕೆಯಾಗಲಿದೆ.
ಐದು ವಾರಗಳಿಂದ ಖಾಸಗಿ ಆಸ್ಪತ್ರೆಗಳು ಉತ್ಪಾದಕರಿಂದ ನೇರವಾಗಿ ಲಸಿಕೆ ಖರೀದಿಸುತ್ತಿದ್ದವು. ಖಾಸಗಿ ಆಸ್ಪತ್ರೆಗಳು ಒಟ್ಟು ಉತ್ಪಾದನೆಯಾದ ಲಸಿಕೆಗಳಲ್ಲಿ ಶೇಕಡ 25ಕ್ಕಿಂತಲೂ ಹೆಚ್ಚು ಪ್ರಮಾಣದ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳು ಖರೀದಿಸಿರುವುದಕ್ಕೆ ಮೇ 27ರಂದು ಕಳವಳ ವ್ಯಕ್ತಪಡಿಸಿದ್ದ ಹೈಕೋರ್ಟ್, ಈ ಕುರಿತು ನಿಲುವು ಸ್ಪಷ್ಟಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.
ರಾಜ್ಯದಲ್ಲಿ ಈವರೆಗೆ ಶೇ 20.33ರಷ್ಟು ಜನರು ಮೊದಲ ಡೋಸ್ ಲಸಿಕೆ ಪಡೆದಿದ್ದು, ಶೇ 4.33ರಷ್ಟು ಮಂದಿ ಮಾತ್ರ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ. ಲಾಕ್‌ಡೌನ್ ಸಡಿಲಿಕೆ ಆರಂಭವಾದ ಬೆನ್ನಲ್ಲೇ ಕೋವಿಡ್ ಲಸಿಕೆಗೆ ಬೇಡಿಕೆಯೂ ಹೆಚ್ಚಿದೆ. ಆದರೆ, ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಪೂರೈಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಕೊರತೆ ಇರುವುದು ಕಂಡುಬಂದಿದೆ.
ರಾಜ್ಯ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂ ಸಂಘದ (ಫನಾ) ಪ್ರಕಾರ, ರಾಜ್ಯದಲ್ಲಿ ಕರ್ನಾಟಕ ವೈದ್ಯಕೀಯ ಸಂಸ್ಥೆಗಳ ಕಾಯ್ದೆಯಡಿ 6,000 ಸಂಸ್ಥೆಗಳು ನೋಂದಣಿಯಾಗಿವೆ. ಸುಮಾರು 200ಕ್ಕೂ ಹೆಚ್ಚು ಸಂಸ್ಥೆಗಳು ಖಾಸಗಿಯಾಗಿ ಕೋವಿಡ್ ಲಸಿಕೆ ನೀಡುತ್ತಿವೆ. ಖಾಸಗಿ ಆಸ್ಪತ್ರೆಗಳ ಮೂಲಕ 26.67 ಲಕ್ಷ ಡೋಸ್ ಲಸಿಕೆ ನೀಡಿದ್ದು, 15.63 ಲಕ್ಷ ಡೋಸ್ ಲಸಿಕೆಗೆ ಸಂಬಂಧಿಸಿದ ಅಂಕಿಅಂಶ ಮಾತ್ರ ಆರೋಗ್ಯ ಇಲಾಖೆಗೆ ಸಿಕ್ಕಿದೆ.
ಶೇ 25ರ ಮಿತಿ: ಇನ್ನು ಖಾಸಗಿ ಆಸ್ಪತ್ರೆಗಳಿಗೆ ಒಟ್ಟು ಉತ್ಪಾದನೆಯಾದ ಲಸಿಕೆಯಲ್ಲಿ ಶೇ 25ರಷ್ಟನ್ನು ಮಾತ್ರ ಖರೀದಿಸಲು ಅವಕಾಶ ನೀಡಲು ನಿರ್ಧರಿಸಲಾಗಿದೆ. ಜೂನ್ 21ರಿಂದ ಸರ್ಕಾರದ ಮೂಲಕವೇ ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್ ಲಸಿಕೆ ಪೂರೈಸುವ ತೀರ್ಮಾನವನ್ನೂ ಕೈಗೊಳ್ಳಲಾಗಿದೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ‘ಈ ಹಿಂದೆ ಕೇಂದ್ರ ಸರ್ಕಾರವೇ ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಪೂರೈಸುತ್ತಿತ್ತು. ಈ ಕಾರಣದಿಂದ ನಮ್ಮ ಬಳಿ ಅಂಕಿ–ಅಂಶ ಇಲ್ಲ. ಜೂನ್ 9ರವರೆಗೂ ಸಲ್ಲಿಸಿರುವ ಬೇಡಿಕೆಯನ್ನು ಆಧರಿಸಿ ಲಸಿಕೆ ಪೂರೈಕೆ ಮುಗಿದಿದೆ. ಸೋಮವಾರದಿಂದ ಸರ್ಕಾರದ ಮೂಲಕವೇ ಖಾಸಗಿ ಆಸ್ಪತ್ರೆಗಳಿಗೂ ಲಸಿಕೆ ಪೂರೈಕೆಯಾಗುತ್ತಿದೆ’ ಎಂದರು.
‘ಖಾಸಗಿ ಆಸ್ಪತ್ರೆಗಳಿಂದ ಆರೋಗ್ಯ ಇಲಾಖೆ ಬೇಡಿಕೆ ಪಟ್ಟಿಯನ್ನು ಸಂಗ್ರಹಿಸಿ, ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ. ಕೇಂದ್ರವು ಮಂಜೂರಾತಿ ನೀಡಿದ ಬಳಿಕ ಆರೋಗ್ಯ ಇಲಾಖೆ ಲಸಿಕೆ ಖರೀದಿಗೆ ನೋಡಲ್ ಏಜೆನ್ಸಿಯಂತೆ ಕೆಲಸ ಮಾಡುತ್ತದೆ’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.