ADVERTISEMENT

ಶಾಲೆಗಳಲ್ಲಿ ಧಾರ್ಮಿಕ ಪಠ್ಯ ಬೋಧಿಸದಂತೆ ನಿಗಾ ಇರಿಸಲಾಗುವುದು: ಬಿ.ಸಿ. ನಾಗೇಶ್‌

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2022, 11:26 IST
Last Updated 26 ಏಪ್ರಿಲ್ 2022, 11:26 IST
ಬಿ.ಸಿ. ನಾಗೇಶ್‌
ಬಿ.ಸಿ. ನಾಗೇಶ್‌   

ಬೆಂಗಳೂರು: ರಾಜ್ಯದ ಯಾವುದೇ ಶಾಲೆಗಳಲ್ಲಿ ಧಾರ್ಮಿಕ ಪಠ್ಯ ಬೋಧಿಸದಂತೆ ನಿಗಾ ಇರಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದರು.

ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ‘ಬೆಂಗಳೂರಿನ ರಿಚರ್ಡ್ಸ್‌ ಟೌನ್‌ನ ಕ್ಲಾರೆನ್ಸ್‌ ಶಾಲೆಯಲ್ಲಿ ಬೈಬಲ್‌ ಅಧ್ಯಯನ ಕಡ್ಡಾಯಗೊಳಿಸಿರುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಅದೇ ರೀತಿಯಲ್ಲಿ ರಾಜ್ಯದ ವಿವಿಧ ಕ್ರೈಸ್ತ ಧರ್ಮೀಯ ಆಡಳಿತ ಮಂಡಳಿಗಳ ಶಾಲೆಗಳೂ ಸೇರಿದಂತೆ ಎಲ್ಲ ಶಾಲೆಗಳ ಮೇಲೂ ನಿಗಾ ಇಡಲು ಸೂಚಿಸಲಾಗಿದೆ’ ಎಂದರು.

‘ಕರ್ನಾಟಕ ಶಿಕ್ಷಣ ಕಾಯ್ದೆ’ ಪ್ರಕಾರ ಶಾಲೆಗಳಲ್ಲಿ ಯಾವುದೇ ಧಾರ್ಮಿಕ ಪಠ್ಯ ಬೋಧಿಸಲು ಅವಕಾಶವಿಲ್ಲ. ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳಿಗೂ ಈ ಕಾಯ್ದೆ ಅನ್ವಯವಾಗುತ್ತದೆ. ಯಾವುದೇ ಶಾಲೆಗಳಲ್ಲಿ ಕರ್ನಾಟಕ ಶಿಕ್ಷಣ ಕಾಯ್ದೆಯ ಉಲ್ಲಂಘನೆ ಆಗಿದ್ದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ADVERTISEMENT

ಭಗವದ್ಗೀತೆ, ರಾಮಾಯಣ, ಮಹಾಭಾರತ, ಸತ್ಯ ಹರೀಶ್ಚಂದ್ರನ ಕತೆಗಳು ಹಿಂದೂ ಧಾರ್ಮಿಕ ಪಠ್ಯದ ವ್ಯಾಪ್ತಿಗೆ ಸೇರುವುದಿಲ್ಲ. ಆದರೆ, ಅವುಗಳನ್ನು ಬೋಧಿಸಲು ಮುಂದಾದರೆ ಬುದ್ಧಿಜೀವಿಗಳು ಎನಿಸಿಕೊಂಡವರು ತಕರಾರು ತೆಗೆಯುತ್ತಾರೆ. ಬೈಬಲ್‌ ಮತ್ತು ಕುರಾನ್‌ ಧಾರ್ಮಿಕ ಪಠ್ಯಗಳು. ಅವುಗಳ ಬೋಧನೆ ಮಾಡುವುದು ಕಣ್ಣೆದುರು ಕಂಡರೂ ಚಕಾರ ಎತ್ತುತ್ತಿಲ್ಲ ಎಂದು ಟೀಕಿಸಿದರು.

ಯಾವುದೇ ಶಾಲೆಗಳೂ ಧಾರ್ಮಿಕ ಪಠ್ಯವನ್ನು ಕಲಿಯುವಂತೆ ಒತ್ತಾಯ ಮಾಡುವಂತಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದೆ. ಯಾವುದೇ ಸಂಸ್ಥೆಗಳು ತಪ್ಪು ಮಾಡಿದರೂ ಕ್ರಮ ನಿಶ್ಚಿತ ಎಂದು ನಾಗೇಶ್‌ ತಿಳಿಸಿದರು.

ಕ್ಲಾರೆನ್ಸ್‌ ಶಾಲೆಯಲ್ಲಿ ಬೈಬಲ್‌ ಅಧ್ಯಯನ ಕಡ್ಡಾಯಗೊಳಿಸಿರುವ ಆರೋಪದ ಕುರಿತು ವರದಿ ನೀಡುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಅಧಿಕಾರಿಗಳು ಶಾಲಾ ಆಡಳಿತ ಮಂಡಳಿಗೆ ನೋಟಿಸ್‌ ನೀಡಿದ್ದಾರೆ. ಅವರಿಂದ ಉತ್ತರ ಬಂದ ಬಳಿಕ ಪರಿಶೀಲಿಸಿ, ಅಗತ್ಯ ಕ್ರಮಕ್ಕೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಗೆ (ಸಿಬಿಎಸ್‌ಇ)ಗೆ ಶಿಫಾರಸು ಮಾಡಲಾಗುವುದುಎ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸರ್ಕಾರದ ನಿಲುವಿಗೆ ಸಹಮತ: ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಬಿಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಈ ವಿಚಾರದಲ್ಲಿ ಸರ್ಕಾರದ ನಿಲುವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಬಲಿಸಲಿದೆ. ಜೂನ್‌ ಮತ್ತು ಜುಲೈನಲ್ಲಿ ಕೋವಿಡ್‌ ನಾಲ್ಕನೇ ಅಲೆ ಬರಬಹುದು ಎಂಬ ಅಂದಾಜಿದೆ. ಮಕ್ಕಳ ಕಲಿಕೆಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.