ADVERTISEMENT

‘ಮೊದಲೇ ರಾಜೀನಾಮೆ ನೀಡಿದ್ದರೆ ಪಕ್ಷದ ನೈತಿಕತೆ ಹೆಚ್ಚುತ್ತಿತ್ತು’

ಜೆಡಿಎಸ್‌ ಮುಖಂಡ ವೈ.ಎಸ್‌.ವಿ. ದತ್ತ

​ಪ್ರಜಾವಾಣಿ ವಾರ್ತೆ
Published 27 ಜುಲೈ 2019, 19:55 IST
Last Updated 27 ಜುಲೈ 2019, 19:55 IST
ವೈ.ಎಸ್.ವಿ. ದತ್ತ
ವೈ.ಎಸ್.ವಿ. ದತ್ತ   

ಸಾಗರ: ‘ಲೋಕಸಭೆ ಚುನಾವಣೆ ಫಲಿತಾಂಶ ನಮ್ಮ ವಿರುದ್ಧ ಬಂದಾಗಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನಾನು ಸಲಹೆ ನೀಡಿದ್ದೆ. ಆಗಲೇ ಅವರು ಈ ಮಾರ್ಗ ಅನುಸರಿಸಿದ್ದರೆ ನೈತಿಕವಾಗಿ ಪಕ್ಷ ಮತ್ತಷ್ಟು ಗಟ್ಟಿಯಾಗಿರುತ್ತಿತ್ತು’ ಎಂದು ಜೆಡಿಎಸ್‌ ಮುಖಂಡ ವೈ.ಎಸ್.ವಿ. ದತ್ತ ಹೇಳಿದರು.

‘15 ಶಾಸಕರು ರಾಜೀನಾಮೆ ನೀಡಿರುವ ಪ್ರಕರಣ ಇತ್ಯರ್ಥವಾಗುವ ಮುನ್ನವೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಬಿ.ಎಸ್. ಯಡಿಯೂರಪ್ಪ ಅವರ ಸ್ಥಿತಿ ಕುಮಾರಸ್ವಾಮಿ ಅವರಿಗಿಂತ ಭಿನ್ನವಾಗಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘14 ತಿಂಗಳಿನಿಂದ ರಾಜ್ಯದಲ್ಲಿ ರಾಜಕೀಯ ಅನಿಶ್ಚಿತತೆ ತಲೆದೋರಿತ್ತು. ಈಗಲೂ ಸುಭದ್ರ ಸರ್ಕಾರ ನಿರ್ಮಾಣವಾಗುತ್ತದೆ ಎಂಬ ವಾತಾವರಣವಿಲ್ಲ. ಯಡಿಯೂರಪ್ಪ ಸೋಮವಾರ ವಿಶ್ವಾಸ ಮತದಲ್ಲಿ ಗೆಲುವು ಸಾಧಿಸಿದರೂ ಅವರ ಭವಿಷ್ಯದ ಹಾದಿ ಸುಗಮವಾಗಿಲ್ಲ’ ಎಂದರು.

ADVERTISEMENT

‘ಯಡಿಯೂರಪ್ಪ ಅವರು ತಂತಿ ಮೇಲಿನ ನಡಿಗೆಯಲ್ಲೇ ಸಾಗುವುದು ಅನಿವಾರ್ಯ. ಜೆಡಿಎಸ್ ಸೇರಿ ಎಲ್ಲಾ ಪಕ್ಷಗಳು ಆಂತರಿಕ ಪ್ರಜಾಪ್ರಭುತ್ವ, ಸೈದ್ಧಾಂತಿಕ ಬದ್ಧತೆ ಮರೆತು ಕಂಡಕಂಡವರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡಿವೆ. ಅನ್ಯ ಮಾರ್ಗದಿಂದ ಆರಿಸಿ ಬಂದ ಶಾಸಕ
ರಿಂದ ನೈತಿಕತೆ ನಿರೀಕ್ಷಿಸಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.ಬಿಜೆಪಿಗೆ ಬಾಹ್ಯ ಬೆಂಬಲ ನೀಡುವುದು ಸೂಕ್ತ ಎಂಬ ಜಿ.ಟಿ. ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಈ ಹಿಂದೆ ಒಮ್ಮೆ ನಮ್ಮ ಪಕ್ಷ ಬಿಜೆಪಿಗೆ ಬೆಂಬಲ ನೀಡಿದ್ದರಿಂದಲೇ ದಕ್ಷಿಣ ಭಾರತದ ಹೆಬ್ಬಾಗಿಲು ಆ ಪಕ್ಷಕ್ಕೆ ತೆರೆದುಕೊಂಡಿದೆ. ಇಂತಹ ಪ್ರಮಾದವನ್ನು ಮತ್ತೆ ಮಾಡುವುದು ಸೂಕ್ತವಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.