ADVERTISEMENT

‘ಲೋಕಾ’ ಪ್ರಕರಣ: ಸಮಗ್ರ ಮಾಹಿತಿ ಕೇಳಿದ ರಾಜ್ಯಪಾಲ

ಪ್ರಾಸಿಕ್ಯೂಷನ್‌ಗೆ ಸರ್ಕಾರಕ್ಕೆ ಪ್ರಸ್ತಾವ: ಮಾಹಿತಿಗೆ ಸಿ.ಎಸ್‌ಗೆ ಸೂಚನೆ

ರಾಜೇಶ್ ರೈ ಚಟ್ಲ
Published 14 ಸೆಪ್ಟೆಂಬರ್ 2024, 20:04 IST
Last Updated 14 ಸೆಪ್ಟೆಂಬರ್ 2024, 20:04 IST
ಥಾವರಚಂದ್‌ ಗೆಹಲೋತ್‌
ಥಾವರಚಂದ್‌ ಗೆಹಲೋತ್‌   

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ದಿನದಿಂದ ಈವರೆಗೆ ಅಧಿಕಾರಿ, ನೌಕರರ ವಿರುದ್ಧ ಪ್ರಾಸಿಕ್ಯೂಷನ್‌ ಮಂಜೂರಾತಿಗೆ ಅನುಮತಿ ಕೇಳಿ ಲೋಕಾಯುಕ್ತದಿಂದ ಬಂದ ಪ್ರಸ್ತಾವಗಳ ಸಮಗ್ರ ಮಾಹಿತಿ ನೀಡುವಂತೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ನಿರ್ದೇಶನ ನೀಡಿದ್ದಾರೆ.

ರಾಜ್ಯಪಾಲರ ನಿರ್ದೇಶನವನ್ನು ‘ತುರ್ತು’ ಎಂದು ಪರಿಗಣಿಸಿ, ಅವರ ಪತ್ರದ ಜೊತೆ ನೀಡಿರುವ ನಮೂನೆಯಲ್ಲಿ ಎಲ್ಲ ಮಾಹಿತಿಯನ್ನು ಒದಗಿಸುವಂತೆ ಎಲ್ಲ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳಿಗೆ ಮುಖ್ಯ ಕಾರ್ಯದರ್ಶಿ ಟಿಪ್ಪಣಿ ಹೊರಡಿಸಿದ್ದಾರೆ.

ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ತಮ್ಮ ವಿರುದ್ಧ ತನಿಖೆಗೆ ರಾಜ್ಯಪಾಲ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ ರಿಟ್‌ ಅರ್ಜಿ ಹೈಕೋರ್ಟ್‌ನಲ್ಲಿರುವ ಸಂದರ್ಭದಲ್ಲಿಯೇ ರಾಜ್ಯಪಾಲರು ಈ ಮಾಹಿತಿ ಕೇಳಿದ್ದಾರೆ.

ADVERTISEMENT

ಮುಖ್ಯಮಂತ್ರಿ ವಿರುದ್ಧ ತನಿಖೆಗೆ ತರಾತುರಿಯಲ್ಲಿ ಅನುಮತಿ ನೀಡಿರುವ ರಾಜ್ಯಪಾಲರು, ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಮುರುಗೇಶ ನಿರಾಣಿ, ಶಾಸಕರಾದ ಶಶಿಕಲಾ ಜೊಲ್ಲೆ, ಜನಾರ್ದನ ರೆಡ್ಡಿ ವಿರುದ್ಧದ ಪ್ರಕರಣಗಳಲ್ಲಿ ಕ್ರಮ ತೆಗೆದುಕೊಳ್ಳುವಂತೆ ಈ ಹಿಂದೆಯೇ ಲೋಕಾಯುಕ್ತವು ಕೋರಿಕೆ ಸಲ್ಲಿಸಿದ್ದರೂ ಪರಿಗಣಿಸಿಲ್ಲ ಎಂದು ಪ್ರತಿಭಟಿಸಿ ರಾಜ್ಯ ಕಾಂಗ್ರೆಸ್‌ ನಾಯಕರು ಇತ್ತೀಚೆಗೆ ರಾಜಭವನ ಚಲೋ ನಡೆಸಿದ್ದರು. ರಾಜ್ಯಪಾಲರು ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದೂ ಆಪಾದಿಸಿದ್ದರು.

ರಾಜ್ಯಪಾಲರ ನಿರ್ದೇಶನವೇನು?:

‘ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳನ್ನು ಅವಲೋಕಿಸಿದಾಗ, ಲೋಕಾಯುಕ್ತ ಸಂಸ್ಥೆಯು ಪ್ರಾಸಿಕ್ಯೂಷನ್ ಮಂಜೂರಾತಿಗಾಗಿ ಕೋರಿದ ಕೆಲವು ಪ್ರಕರಣಗಳಲ್ಲಿ ನಿರ್ಧಾರ ತೆಗೆದುಕೊಂಡಿರುವುದನ್ನು ಗಮನಿಸಿದ್ದೇನೆ. ಲೋಕಾಯುಕ್ತದ ಕೆಲವು ಪ್ರಕರಣಗಳಲ್ಲಿನ ಪ್ರಸ್ತಾವಗಳನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ. ಕೆಲವು ಪ್ರಕರಣಗಳಲ್ಲಿ ಮಂಜೂರಾತಿ ನೀಡಲಾಗಿದೆ. ಅಲ್ಲದೆ, ಇನ್ನೂ ಕೆಲವು ಪ್ರಕರಣಗಳಲ್ಲಿ ಎಚ್ಚರಿಕೆ ನೀಡಿ ತಿರಸ್ಕರಿಸಲಾಗಿದೆ’.

‘ಈ ಹಿನ್ನೆಲೆಯಲ್ಲಿ, ಲೋಕಾಯುಕ್ತದಿಂದ ಸ್ವೀಕೃತವಾದ ಪ್ರಕರಣಗಳಲ್ಲಿ ಯಾವ ಆಧಾರದಲ್ಲಿ ಸಚಿವ ಸಂಪುಟ ಸಭೆ ತೀರ್ಮಾನಗಳನ್ನು ತೆಗೆದುಕೊಳ್ಳುತ್ತದೆ ಎಂಬ ವಿವರಗಳನ್ನು ತಿಳಿದುಕೊಳ್ಳಲು ನಾನು ಬಯುಸುತ್ತೇನೆ. ಹೀಗಾಗಿ, ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ 2023ರ ಮೇ 20ರಿಂದ ಇಲ್ಲಿಯವರೆಗೆ ಲೋಕಾಯುಕ್ತದಿಂದ ರಾಜ್ಯ ಸರ್ಕಾರವು ಸ್ವೀಕರಿಸಿದ ಎಲ್ಲ ಪ್ರಸ್ತಾವಗಳ ಸಮಗ್ರವಾದ ವಿವರಗಳನ್ನು ನಾನು ನೀಡಿರುವ ನಮೂನೆಯಲ್ಲಿ ಒದಗಿಸಬೇಕು’ ಎಂದು ರಾಜ್ಯಪಾಲರು ನಿರ್ದೇಶನ ನೀಡಿದ್ದಾರೆ.

ಕೇಳಿದ್ದು ಕಾಂಗ್ರೆಸ್‌ ಸರ್ಕಾರದ ಅವಧಿಯ ಮಾಹಿತಿ ಮಾತ್ರ
ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ಸರ್ಕಾರ 2023ರ ಮೇ 20ರಂದು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆ ದಿನದಿಂದ ಇಲ್ಲಿಯವರೆಗಿನ ಅವಧಿಯಲ್ಲಿ ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗಾಗಿ ಲೋಕಾಯುಕ್ತ ಸಂಸ್ಥೆ ಕೋರಿರುವ ಮಾಹಿತಿಯನ್ನು ಮಾತ್ರ ಒದಗಿಸುವಂತೆ ರಾಜ್ಯಪಾಲರು ಕೇಳಿದ್ದಾರೆ. 
ಕೇಳಿದ ಮಾಹಿತಿಗಳೇನು?
ತಮ್ಮ ನಿರ್ದೇಶನದ ಜೊತೆ ಪ್ರತ್ಯೇಕ ನಮೂನೆಯನ್ನೂ ನೀಡಿರುವ ರಾಜ್ಯಪಾಲರು ಅದೇ ಮಾದರಿಯಲ್ಲಿ ಮಾಹಿತಿ ನೀಡಬೇಕು ಎಂದು ಸೂಚಿಸಿದ್ದಾರೆ. ಪ್ರಾಸಿಕ್ಯೂಷನ್‌ಗೆ ಶಿಫಾರಸು ಮಾಡಿದ ವಿಷಯ ಪ್ರಸ್ತಾವ ಸಲ್ಲಿಸಿದ ದಿನಾಂಕ ಸಚಿವ ಸಂಪುಟ ಸಭೆ ತೆಗೆದುಕೊಂಡ ತೀರ್ಮಾನ (ತಿರಸ್ಕೃತವೇ? ಒಪ್ಪಿದೆಯೇ?) ಒಂದೊಮ್ಮೆ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದ್ದರೆ ಶಿಕ್ಷೆಯ ಸ್ವರೂಪ ತಿರಸ್ಕರಿಸಿದ್ದರೆ ಅದಕ್ಕೆ ಕಾರಣ ಎಂಬ ಮಾಹಿತಿಯನ್ನು ಕ್ರಮಬದ್ಧವಾಗಿ ಪಟ್ಟಿ ಮಾಡಿ ಒದಗಿಸಬೇಕು ಎಂದೂ ರಾಜ್ಯಪಾಲರು ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.