ADVERTISEMENT

ಕಾಂಗ್ರೆಸ್‌ ಸುಳ್ಳುಗಳಿಗೆ ತಿರುಗೇಟು ನೀಡಬೇಕು: ಕಾರಜೋಳ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 22:28 IST
Last Updated 19 ನವೆಂಬರ್ 2024, 22:28 IST
ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಸಂವಿಧಾನ ಸನ್ಮಾನ ಅಭಿಯಾನ’ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಸಂಸದ ಗೋವಿಂದ ಕಾರಜೋಳ ಉದ್ಘಾಟಿಸಿದರು. ಪಕ್ಷದ ಮುಖಂಡರಾದ ಎನ್.ಮಹೇಶ್‌, ಛಲವಾದಿ ನಾರಾಯಣಸ್ವಾಮಿ, ಸಿಮೆಂಟ್‌ ಮಂಜು, ಎನ್‌.ರವಿಕುಮಾರ್, ಪಿ.ರಾಜೀವ್‌ ಮತ್ತು ಮಾಳವಿಕ ಅವಿನಾಶ್‌ ಭಾಗವಹಿಸಿದ್ದರು.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಸಂವಿಧಾನ ಸನ್ಮಾನ ಅಭಿಯಾನ’ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಸಂಸದ ಗೋವಿಂದ ಕಾರಜೋಳ ಉದ್ಘಾಟಿಸಿದರು. ಪಕ್ಷದ ಮುಖಂಡರಾದ ಎನ್.ಮಹೇಶ್‌, ಛಲವಾದಿ ನಾರಾಯಣಸ್ವಾಮಿ, ಸಿಮೆಂಟ್‌ ಮಂಜು, ಎನ್‌.ರವಿಕುಮಾರ್, ಪಿ.ರಾಜೀವ್‌ ಮತ್ತು ಮಾಳವಿಕ ಅವಿನಾಶ್‌ ಭಾಗವಹಿಸಿದ್ದರು.   

ಬೆಂಗಳೂರು: ಕಾಂಗ್ರೆಸ್‌ನ ಅಪಪ್ರಚಾರ ಮತ್ತು ಸುಳ್ಳುಗಳಿಗೆ ತಕ್ಕ ಉತ್ತರ ನೀಡಬೇಕು ಎಂದು ಬಿಜೆಪಿ ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.

ಜಗನ್ನಾಥಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಸಂವಿಧಾನ ಸನ್ಮಾನ ಅಭಿಯಾನ’ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಸಂವಿಧಾನ ಬದಲಿಸುವ ಬಗ್ಗೆ ಅಪಪ್ರಚಾರ ನಡೆಸುತ್ತಿರುವ ಕಾಂಗ್ರೆಸ್‌ ಪಕ್ಷ ತನ್ನ ಅಧಿಕಾರದ ಅವಧಿಯಲ್ಲಿ ಒಟ್ಟು 75 ಬಾರಿ ಸಂವಿಧಾನವನ್ನು ಬದಲಾಯಿಸಿದೆ. ಈವರೆಗೆ ಒಟ್ಟು 106 ಬಾರಿ ಸಂವಿಧಾನ ತಿದ್ದುಪಡಿ ಆಗಿದ್ದು, ಅತಿ ಹೆಚ್ಚು ಬಾರಿ ಸಂವಿಧಾನ ಬದಲಿಸಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ. ಕಾಂಗ್ರೆಸ್ಸೇತರ ಸರ್ಕಾರಗಳು 31 ಬಾರಿ ತಿದ್ದುಪಡಿ ಮಾಡಿವೆ ಎಂದರು.

ADVERTISEMENT

‘ಬಿಜೆಪಿಯವರು ಸಂವಿಧಾನ ಬದಲಿಸುತ್ತಾರೆ ಎಂದು ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ನವರು ಅಪಪ್ರಚಾರ ಮಾಡಿದ್ದರು. ಕಾಂಗ್ರೆಸ್‌ನ ಈ ಸುಳ್ಳಿನ ಕಂತೆಯನ್ನು ಎಸ್‌ಸಿ, ಎಸ್‌ಟಿ ಮಾತ್ರವಲ್ಲ ಒಬಿಸಿಗಳೂ ನಂಬಿದ್ದರು. ಹಲವು ಯುವಕರು ಸಂವಿಧಾನ ಬದಲಾವಣೆ ಕುರಿತು ನನ್ನನ್ನು ಪ್ರಶ್ನಿಸಿದ್ದರು. ನಾವು ವಾಸ್ತವ ತಿಳಿಸಲು ಹೋದರೂ ಅದು ಅವರ ತಲೆಯೊಳಗೆ ಹೋಗಲಿಲ್ಲ. ಪಕ್ಷ ಇಂತಹ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಅದರ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಕಾರಜೋಳ ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ವಿ.ಸುನಿಲ್‌ಕುಮಾರ್‌, ಪಿ.ರಾಜೀವ್‌, ವಿಧಾನಪರಿಷತ್ ಸದಸ್ಯರಾದ ಎನ್‌.ರವಿಕುಮಾರ್‌, ಸಿ.ಟಿ.ರವಿ, ಉಪಾಧ್ಯಕ್ಷರಾದ ಎನ್‌. ಮಹೇಶ್‌, ಮಾಳವಿಕ ಅವಿನಾಶ್‌, ಎಸ್‌ಟಿ ಮೋರ್ಚಾ ಅಧ್ಯಕ್ಷ ಸಿಮೆಂಟ್‌ ಮಂಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.