ನವದೆಹಲಿ: ಮಹದಾಯಿ (ಕಳಸಾ–ಬಂಡೂರಿ) ಯೋಜನೆಗೆ ಶೀಘ್ರ ಅನುಮೋದನೆ ನೀಡುವಂತೆ ಕೋರಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಕರ್ನಾಟಕದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಗುರುವಾರ ಮನವಿ ಸಲ್ಲಿಸಿದರು.
ಇಲ್ಲಿನ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ನಿವಾಸದಲ್ಲಿ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಮಹದಾಯಿ ಯೋಜನೆಯ ಜಾರಿ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಒಂದು ವೇಳೆ ರ‍್ಯಾಲಿ ಯಶಸ್ವಿಯಾದರೆ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂಬುದು ಬಿಜೆಪಿ ನಾಯಕರ ಆತಂಕ. ಹೀಗಾಗಿ, ಜಲಸಂಪನ್ಮೂಲ ಸಚಿವರು ಕೇಂದ್ರ ಸಚಿವರನ್ನು ಭೇಟಿ ಮಾಡಿ ಒತ್ತಡ ತಂದರು ಎಂದು ಮೂಲಗಳು ತಿಳಿಸಿವೆ.
ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡ, ಸುತ್ತಮುತ್ತಲಿನ ಪಟ್ಟಣಗಳು ಹಾಗೂ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಗುರಿ ಹೊಂದಿರುವ ಮಹದಾಯಿ ಯೋಜನೆಯ ಅನುಷ್ಠಾನಕ್ಕೆ 500 ಹೆಕ್ಟೇರ್ ಅರಣ್ಯ ಭೂಮಿ ಬೇಕಿತ್ತು. ಕಾಲುವೆಗಳ ಮೂಲಕ ನೀರು ಹರಿಸಲು ಯೋಜಿಸಲಾಗಿತ್ತು. ಈ ಪ್ರಸ್ತಾವಕ್ಕೆ ಅನುಮೋದನೆ ಸಿಗುವುದು ತಡವಾಗುತ್ತದೆ ಎಂಬ ಕಾರಣಕ್ಕೆ ಕರ್ನಾಟಕ ಸರ್ಕಾರ ಯೋಜನಾ ಸ್ವರೂಪವನ್ನು ಬದಲಿಸಿದೆ. ಪರಿಷ್ಕೃತ ಕಾರ್ಯ ಸಾಧ್ಯತಾ ವರದಿಯನ್ನು ಜಲಶಕ್ತಿ ಸಚಿವಾಲಯಕ್ಕೆ ಸಲ್ಲಿಸಿದೆ. ಈ ವರದಿಯ ಪ್ರಕಾರ, ಯೋಜನೆಯ ಅನುಷ್ಠಾನಕ್ಕೆ 49.7 ಹೆಕ್ಟೇರ್ ಅರಣ್ಯ ಭೂಮಿ ಬೇಕಿದೆ. ಜತೆಗೆ, ಕಾಲುವೆ ನಿರ್ಮಾಣ ಪ್ರಸ್ತಾವವನ್ನು ಕೈಬಿಡಲಾಗಿದೆ. ಕಾರಜೋಳ ಅವರು ಈ ವಿಚಾರವನ್ನು ಕೇಂದ್ರ ಸಚಿವರ ಗಮನಕ್ಕೆ ತಂದು ಶೀಘ್ರ ಅನುಮೋದನೆ ನೀಡುವಂತೆ ವಿನಂತಿಸಿದರು.
‘ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು. ಮಹದಾಯಿ ಯೋಜನೆಯ ಅನುಮೋದನೆ ಶೀಘ್ರದಲ್ಲಿಯೇ ದೊರಕುವ ನಿರೀಕ್ಷೆ ಇದೆ’ ಎಂದು ಕಾರಜೋಳ ತಿಳಿಸಿದರು.
ರಾಜ್ಯದ ಪ್ರಮುಖ ಯೋಜನೆಗಳಾದ ಮೇಕೆದಾಟು, ಕೃಷ್ಣಾ ಮೇಲ್ದಂಡೆ ಯೋಜನೆಗೆ ಶೀಘ್ರ ಒಪ್ಪಿಗೆ ನೀಡುವಂತೆ ಮನವಿ ಸಲ್ಲಿಸಲಾಯಿತು. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವಂತೆ ಒತ್ತಾಯಿಸಿದರು.
‘ಭದ್ರಾ ಮೇಲ್ದಂಡೆ ಯೋಜನೆಯ ಪ್ರಸ್ತಾವನೆ ಹಂತದಲ್ಲಿದ್ದು ಈ ಯೋಜನೆಗೆ ಮುಂದಿನ ಕೇಂದ್ರ ಸಚಿವ ಸಂಪುಟದ ಸಭೆ
ಯಲ್ಲಿ ಅನುಮೋದನೆ ದೊರೆಯುವ ವಿಶ್ವಾಸವಿದೆ’ ಎಂದು ಕಾರಜೋಳ ತಿಳಿಸಿದರು.
ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸಲು ಕೇಂದ್ರ ಹಣಕಾಸು ಸಚಿವಾಲಯ ಈಗಾಗಲೇ ಒಪ್ಪಿಗೆ ನೀಡಿದೆ. ಈ ಯೋಜನೆಗೆ ಕೇಂದ್ರ ಸರ್ಕಾರವು ₹9,675 ಕೋಟಿ ಮೊತ್ತವನ್ನು ನೀಡಲಿದೆ. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ 29.90 ಟಿಎಂಸಿ ಅಡಿ ನೀರು (ತುಂಗಾ ನದಿಯಿಂದ 17.40 ಟಿಎಂಸಿ ಅಡಿ ಹಾಗೂ ಭದ್ರಾ ಜಲಾಶಯದಿಂದ 12.50 ಟಿಎಂಸಿ ಅಡಿ) ಬಳಕೆ ಮಾಡಲಾಗುತ್ತದೆ. ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಗಳ 2,25,515 ಹೆಕ್ಟೇರ್ (5,57,022 ಎಕರೆ ) ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತದೆ. ಜತೆಗೆ, ಈ ಜಿಲ್ಲೆಗಳ 367 ಕೆರೆಗಳನ್ನು ತುಂಬಿಸುವ ಯೋಜನೆ ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.