ADVERTISEMENT

ಭೂಕಬಳಿಕೆ: ಗ್ರಾಮೀಣ ಪ್ರದೇಶದ ಒತ್ತುವರಿಗೆ ವಿನಾಯಿತಿ

ಬದಲಾವಣೆಯೊಂದಿಗೆ ಗುರುವಾರ ಅಂಗೀಕಾರದ ಪ್ರಸ್ತಾವ ಮಂಡನೆಗೆ ಒಪ್ಪಿದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 20:30 IST
Last Updated 21 ಸೆಪ್ಟೆಂಬರ್ 2022, 20:30 IST
   

ಬೆಂಗಳೂರು: ರೈತರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳನ್ನು ಹಿಂಪಡೆಯುವುದು ಮತ್ತು ಅವರಿಗೆ ಕಿರುಕುಳ ತಪ್ಪಿಸುವ ಉದ್ದೇಶದಿಂದ ಭೂ ಕಬಳಿಕೆ ನಿಷೇಧ ಕಾಯ್ದೆ–2011ಯ ವ್ಯಾಪ್ತಿಯಿಂದ ಗ್ರಾಮೀಣ ಪ್ರದೇಶಗಳನ್ನಷ್ಟೇ ಹೊರಗಿಡುವ ತಿದ್ದುಪಡಿ ತರಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಬದಲಾವಣೆಯೊಂದಿಗೆ ತಿದ್ದುಪಡಿ ಮಸೂದೆ ಅಂಗೀಕಾರಕ್ಕಾಗಿ ಗುರುವಾರ ಮಂಡನೆಯಾಗಲಿದೆ.

ಬಿಬಿಎಂಪಿ ಮತ್ತು ಇತರ ಮಹಾನಗರ ಪಾಲಿಕೆಗಳ ವ್ಯಾಪ್ತಿ ಹೊರತುಪಡಿಸಿ ಎಲ್ಲ ಪ್ರದೇಶವನ್ನೂ ಭೂ ಕಬಳಿಕೆ ನಿಷೇಧ ಕಾಯ್ದೆ ವ್ಯಾಪ್ತಿಯಿಂದ ಹೊರಗಿಡುವ ತಿದ್ದುಪಡಿ ಮಸೂದೆಯನ್ನು ವಿಧಾನಸಭೆಯಲ್ಲಿ ಅಂಗೀಕಾರಕ್ಕಾಗಿ ಮಂಡಿಸಲಾಗಿದೆ. ಮಸೂದೆ ಕುರಿತು ಬುಧವಾರ ವಿಸ್ತೃತ ಚರ್ಚೆ ನಡೆಯಿತು.

‘ಭೂ ಕಬಳಿಕೆ ನಿಷೇಧ ಕಾಯ್ದೆಯ ದುರ್ಬಳಕೆಯಿಂದ ಪ್ರತಿ ಹಳ್ಳಿಯಲ್ಲೂ ನೂರಾರು ಮಂದಿ ಬೆಂಗಳೂರಿನ ನ್ಯಾಯಾಲಯಕ್ಕೆ ಅಲೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ತಕ್ಷಣ ಮಸೂದೆಗೆ ಒಪ್ಪಿಗೆ ನೀಡಬೇಕು. ಜೀವನೋಪಾಯಕ್ಕಾಗಿ ಸರ್ಕಾರಿ ಜಮೀನು ಒತ್ತುವರಿ ಮಾಡಿರುವವರನ್ನು ಸಂಕಷ್ಟದಿಂದ ಪಾರು ಮಾಡಬೇಕು’ ಎಂದು ಬಿಜೆಪಿಯ ಕೆ.ಜಿ. ಬೋಪಯ್ಯ, ದೊಡ್ಡನಗೌಡ ಪಾಟೀಲ, ಕೆ.ಬಿ. ಅಶೋಕ್‌ ನಾಯ್ಕ್‌, ಹರತಾಳು ಹಾಲಪ್ಪ, ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡ ಆಗ್ರಹಿಸಿದರು.

ADVERTISEMENT

‘ಮಸೂದೆಯನ್ನು ಯಥಾವತ್ತಾಗಿ ಅಂಗೀಕರಿಸಿದರೆ ಇತರ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಭೂಗಳ್ಳರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಭೂಕಬಳಿಕೆ ನಿಷೇಧ ಕಾಯ್ದೆಯನ್ನು ಭೂಗಳ್ಳರ ವಿರುದ್ಧ ಬಳಸಬೇಕು. ಜೀವನೋಪಾಯಕ್ಕಾಗಿ ಅನಧಿಕೃತ ಸಾಗುವಳಿ ಮಾಡುತ್ತಿರುವ ಒತ್ತುವರಿದಾರರ ವಿರುದ್ಧ ಅಲ್ಲ. ಬಿಬಿಎಂಪಿ, ಮಹಾನಗರ ಪಾಲಿಕೆಗಳು ಮಾತ್ರವಲ್ಲ, ಎಲ್ಲ ನಗರ ಸ್ಥಳೀಯ ಸಂಸ್ಥೆಗಳನ್ನೂ ಭೂಕಬಳಿಕೆ ನಿಷೇಧ ಕಾಯ್ದೆಯ ವ್ಯಾಪ್ತಿಯಲ್ಲಿಡಬೇಕು. ಇಲ್ಲವಾದರೆ ಭೂಗಳ್ಳರಿಗೆ ಹಸಿರು ಚೀಟಿ ಕೊಟ್ಟಂತಾಗುತ್ತದೆ’ ಎಂದು ಜೆಡಿಎಸ್‌ನ ಎ.ಟಿ. ರಾಮಸ್ವಾಮಿ ಆತಂಕ ವ್ಯಕ್ತಪಡಿಸಿದರು.

ವಿರೋಧ ಪಕ್ಷದ ಉಪ ನಾಯಕ ಯು.ಟಿ. ಖಾದರ್‌, ಜೆಡಿಎಸ್‌ನ ಕೆ.ಎಂ. ಶಿವಲಿಂಗೇಗೌಡ, ಎಚ್‌.ಕೆ. ಕುಮಾರಸ್ವಾಮಿ, ಕಾಂಗ್ರೆಸ್‌ನ ಆರ್‌.ವಿ. ದೇಶಪಾಂಡೆ, ಪಿ.ಟಿ. ಪರಮೇಶ್ವರ ನಾಯ್ಕ, ಯತೀಂದ್ರ ಸಿದ್ದರಾಮಯ್ಯ, ಬಿಜೆಪಿಯ ಗೂಳಿಹಟ್ಟಿ ಶೇಖರ್‌ ಮಾತನಾಡಿ, ‘ರೈತರಿಗೆ ಸೀಮಿತವಾಗಿ ತಿದ್ದುಪಡಿಯನ್ನು ಭಾಗಶಃ ಸ್ವಾಗತಿಸುತ್ತೇವೆ. ಆದರೆ, ನಗರ ಪ್ರದೇಶಗಳಲ್ಲಿ ಭೂಗಳ್ಳರಿಗೆ ವರವಾಗುವ ತಿದ್ದುಪಡಿ ಬೇಡ’ ಎಂದರು.

‘ನಗರ ಪ್ರದೇಶಗಳನ್ನು ಕಾಯ್ದೆ ವ್ಯಾಪ್ತಿಯಿಂದ ಹೊರಗಿಡುವುದು ಸರಿಯಲ್ಲ. ಗ್ರಾಮೀಣ ಪ್ರದೇಶದಲ್ಲೂ ಒಂದು ಕುಟುಂಬಕ್ಕೆ ಒಂದು ಬಾರಿ ಮಾತ್ರ ಸರ್ಕಾರಿ ಜಮೀನು ಮಂಜೂರು ಮಾಡುವುದಕ್ಕೆ ಮಿತಿ ವಿಧಿಸಬೇಕು’ ಎಂದು ಬಿಜೆಪಿಯ ಕುಮಾರ್‌ ಬಂಗಾರಪ್ಪ ಸಲಹೆ ನೀಡಿದರು.

ತಿದ್ದುಪಡಿಗೆ ಒಪ್ಪಿದ ಸಿಎಂ: ಚರ್ಚೆಯಲ್ಲಿ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಕೆಲವು ತಿದ್ದುಪಡಿಗಳೊಂದಿಗೆ ಮಸೂದೆಯನ್ನು ಅಂಗೀಕಾರಕ್ಕಾಗಿ ಗುರುವಾರ ಮಂಡಿಸುತ್ತೇವೆ. ಬಿಬಿಎಂಪಿಯಿಂದ 18 ಕಿ.ಮೀ., ಇತರ ಮಹಾನಗರ ಪಾಲಿಕೆಗಳ ವ್ಯಾಪ್ತಿಯಿಂದ 10 ಕಿ.ಮೀ., ನಗರಸಭೆ ಮತ್ತು ಪುರಸಭೆಗಳಿಂದ 5 ಕಿ.ಮೀ. ಮತ್ತು ಪಟ್ಟಣ ಪಂಚಾಯಿತಿಗಳಿಂದ 3 ಕಿ.ಮೀ.ವರೆಗಿನ ವ್ಯಾಪ್ತಿಗೆ ಭೂಕಬಳಿಕೆ ನಿಷೇಧ ಕಾಯ್ದೆಯನ್ನು ಅನ್ವಯಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.