ADVERTISEMENT

ಅನ್ನಭಾಗ್ಯ ಯೋಜನೆ: ಛತ್ತೀಸಗಡ, ತೆಲಂಗಾಣದಿಂದ ಅಕ್ಕಿ ಖರೀದಿಗೆ ಮಾತುಕತೆ –ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2023, 16:18 IST
Last Updated 30 ಸೆಪ್ಟೆಂಬರ್ 2023, 16:18 IST
ಸಚಿವ ಕೆ.ಎಚ್‌. ಮುನಿಯಪ್ಪ
ಸಚಿವ ಕೆ.ಎಚ್‌. ಮುನಿಯಪ್ಪ   

ಬೆಂಗಳೂರು: ‘ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿಯಾಗಿ ತಲಾ ಐದು ಕೆಜಿ ಅಕ್ಕಿ ಪೂರೈಸಲು ಅಗತ್ಯವಾದ ಅಕ್ಕಿ ಖರೀದಿಗೆ ಛತ್ತೀಸಗಡ ಮತ್ತು ತೆಲಂಗಾಣ ಸರ್ಕಾರಗಳ ಜೊತೆ ಮಾತುಕತೆ ಬಹುತೇಕ ಅಂತಿಮವಾಗಿದೆ. ಮುಂದಿನ ತಿಂಗಳಿನಿಂದ (ಅಕ್ಟೋಬರ್‌) ನಗದು ಬದಲು ಅಕ್ಕಿ ಪೂರೈಸಲು ಯತ್ನಿಸಲಾಗುವುದು’ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಅಕ್ಕಿ ನೀಡಲು ಹರಿಯಾಣ ಮತ್ತು ಪಂಜಾಬ್ ರಾಜ್ಯಗಳು ಕೂಡಾ ಮುಂದೆ ಬಂದಿವೆ. ಆದರೆ, ದೂರ, ಸಾಗಣೆ ವೆಚ್ಚ ದುಬಾರಿ ಎಂಬ ಕಾರಣಕ್ಕೆ ಅವೆರಡೂ ರಾಜ್ಯಗಳ ಪ್ರಸ್ತಾವನೆ ಕೈಬಿಡಲಾಗಿದೆ’ ಎಂದರು.

‘ಕೋರಿಕೆಯಷ್ಟು ಅಕ್ಕಿಯನ್ನು ಎಫ್‌ಸಿಐ ನಿಗದಿತ ದರದಲ್ಲಿ ಪೂರೈಸಲು ಛತ್ತೀಸಗಡ ಮತ್ತು ತೆಲಂಗಾಣ ರಾಜ್ಯ ಸರ್ಕಾರಗಳು ಒಪ್ಪಿವೆ. ಪ್ರತಿ ಕೆಜಿಗೆ ₹34 ದರ ಆಗಲಿದ್ದು, ಸಾಗಣೆ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಬೇಕಾಗುತ್ತದೆ’ ಎಂದೂ ಹೇಳಿದರು.

ADVERTISEMENT

‘ತಲಾ ಐದು ಕೆಜಿ ಹೆಚ್ಚುವರಿ ಅಕ್ಕಿ ವಿತರಿಸಲು ಅಗತ್ಯ ಇರುವಷ್ಟು ಅಕ್ಕಿ ಸಕಾಲಕ್ಕೆ ಲಭ್ಯವಾಗದ ಕಾರಣ, ಅಕ್ಕಿ ಬದಲು ತಲಾ ಫಲಾನುಭವಿಗಳ ಖಾತೆಗೆ ₹170 ಜಮೆ ಮಾಡಲಾಗುತ್ತಿದೆ. ಅಕ್ಕಿ ಒದಗಿಸಲು ಮುಂದೆ ಬಂದ ರಾಜ್ಯ ಸರ್ಕಾರಗಳ ಜತೆಗೆ ನೇರ ಮಾತುಕತೆ ನಡೆಸಲಾಗಿದೆ. ಹೀಗಾಗಿ, ಟೆಂಡರ್ ಕರೆಯುವ ಪ್ರಶ್ನೆ ಉದ್ಭವಿಸುವುದಿಲ್ಲ. ಖಾಸಗಿ ಕಂಪನಿ ಅಥವಾ ಮುಕ್ತ ಮಾರುಕಟ್ಟೆಯಿಂದ ಖರೀದಿಸುವ ಸಂದರ್ಭದಲ್ಲಿ ಟೆಂಡರ್ ಕರೆಯಬೇಕಾಗುತ್ತದೆ’ ಎಂದು ವಿವರಿಸಿದರು.

‘ಹೆಚ್ಚುವರಿಯಾಗಿ ಐದು ಕೆಜಿಯಂತೆ ವಿತರಿಸಲು ತಿಂಗಳಿಗೆ 2.40 ಲಕ್ಷ ಟನ್ ಅಕ್ಕಿ ಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗೆ ಚರ್ಚಿಸಿದ ನಂತರ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.