ADVERTISEMENT

ಪರಿಷತ್ತಿನಲ್ಲಿ ಸರ್ಕಾರಕ್ಕೆ ಮುಖಭಂಗ: ಸೌಹಾರ್ದ ಸಹಕಾರಿ ತಿದ್ದುಪಡಿ ಮಸೂದೆಗೆ ಸೋಲು

ಪರಿಶೀಲನಾ ಸಮಿತಿಗೆ ಒಪ್ಪಿಸುವ ಪರ 'ಬಹುಮತ’

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2024, 20:22 IST
Last Updated 21 ಫೆಬ್ರುವರಿ 2024, 20:22 IST
ವಿಧಾನಸಭೆ ಕಲಾಪ
ವಿಧಾನಸಭೆ ಕಲಾಪ   

ಬೆಂಗಳೂರು: ವಿಧಾನಸಭೆಯಲ್ಲಿ ಅಂಗೀಕಾರ ಪಡೆದ ‘ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ಮಸೂದೆ’ಗೆ ಮೇಲ್ಮನೆಯಲ್ಲಿ ಸೋಲುಂಟಾಗಿದ್ದು, ಮಸೂದೆಯನ್ನು ಪರಿಶೀಲನಾ ಸಮಿತಿಗೆ ಒಪ್ಪಿಸುವ ಸಂಬಂಧ ನಡೆದ ಮತದಾನದಲ್ಲಿ ವಿರೋಧ ಪಕ್ಷಗಳು ಮೇಲುಗೈ ಸಾಧಿಸಿವೆ.

‘ಮಸೂದೆಯಲ್ಲಿನ ಕೆಲವು ಅಂಶಗಳ ಬಗ್ಗೆ ಹೆಚ್ಚಿನ ವಿವರಣೆಯ ಅಗತ್ಯವಿದೆ. ತರಾತುರಿಯಲ್ಲಿ ಒಪ್ಪಿಗೆ ನೀಡುವ ಅಗತ್ಯವಿಲ್ಲ. ಆದ್ದರಿಂದ, ಮಸೂದೆಯನ್ನು ಪರಿಶೀಲನಾ ಸಮಿತಿಗೆ ಒಪ್ಪಿಸಲೇಬೇಕು’ ಎಂದು ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ಪಟ್ಟು ಹಿಡಿದರು. ಇದಕ್ಕೆ ಸರ್ಕಾರ ಮಣಿಯದೇ ಇದ್ದಾಗ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಪ್ರಸ್ತಾವನೆಯನ್ನು ವಿಭಜನಾ ಮತಕ್ಕೆ ಹಾಕಿದರು.

ಪರಿಶೀಲನಾ ಸಮಿತಿಗೆ ಒಪ್ಪಿಸುವುದರ ಪರವಾಗಿ 33 ಮತಗಳು ಚಲಾವಣೆಗೊಂಡರೆ, ವಿರುದ್ಧವಾಗಿ 21 ಮತಗಳ ಚಲಾವಣೆಗೊಂಡವು. ಮಸೂದೆಯನ್ನು ಪರಿಶೀಲನಾ ಸಮಿತಿಗೆ ಒಪ್ಪಿಸಬೇಕು ಎಂಬುದರ ಪರ ಸಭೆ ಒಪ್ಪಿಗೆ ನೀಡಿದೆ ಎಂದು ಪ್ರಾಣೇಶ್‌ ಪ್ರಕಟಿಸಿದರು.

ADVERTISEMENT

‘ಸರ್ಕಾರ ನಾಮ ನಿರ್ದೇಶನದ ಮೂಲಕ ಸಹಕಾರಿ ಕ್ಷೇತ್ರವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಹೊರಟಿದೆ. ಈ ಮೂಲಕ ಸಂಸ್ಥೆ ಕಟ್ಟಿ ಬೆಳೆಸಿದವರನ್ನು ಮೂಲೆ ಗುಂಪು ಮಾಡಿ ಆಡಳಿತದ ಮೇಲೆ ನಿಯಂತ್ರಣ ಸಾಧಿಸುವುದೇ ಸರ್ಕಾರದ ಉದ್ದೇಶ. ಚುನಾವಣಾ ಪ್ರಾಧಿಕಾರ ರದ್ದು ಮಾಡಿ ಪ್ರತ್ಯೇಕ ಚುನಾವಣಾ ವಿಭಾಗ ಸೃಷ್ಟಿಸಲು ಮುಂದಾಗಿರುವುದರಿಂದ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸುವ ಸಾಧ್ಯತೆ ಇದ್ದೇ ಇದೆ’ ಎಂದು ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸಪೂಜಾರಿ ಹೇಳಿದರು.

ಮಜಾಯಿಷಿ ನೀಡಿದ ಸಹಕಾರ ಸಚಿವ ಕೆ.ಎನ್‌.ರಾಜಣ್ಣ, ‘ ಸೌಹಾರ್ದ ಸಹಕಾರಿ ಕ್ಷೇತ್ರದಲ್ಲಿ ಈಗಾಗಲೇ ಮೀಸಲಾತಿ ಇದೆ. ಅದನ್ನು ಇನ್ನಷ್ಟು ವಿಸ್ತರಿಸಲು ಉದ್ದೇಶಿಸಲಾಗಿದೆ. ಇಲ್ಲಿಯವರೆಗೆ ಯಾವ ವರ್ಗಕ್ಕೆ ಪ್ರಾತಿನಿಧ್ಯ ಸಿಕ್ಕಿಲ್ಲವೋ ಅವರಿಗೆ ಪ್ರಾತಿನಿಧ್ಯ ನೀಡಲಾಗುವುದು. ಸಹಕಾರಿ ಬ್ಯಾಂಕ್‌ಗಳ ಸದಸ್ಯರಲ್ಲಿರುವ ಆ ವರ್ಗದವರನ್ನೇ ನಾಮನಿರ್ದೇಶನಕ್ಕೆ ಅವಕಾಶ ನೀಡಲಾಗುವುದು. ಅವರಿಗೆ ಮತದಾನದ ಹಕ್ಕು ನೀಡಲಾಗುವುದು’ ಎಂದು ಹೇಳಿದರು.

ವಿರೋಧ ಪಕ್ಷದ ಮುಖ್ಯಸಚೇತಕ ಎನ್‌.ರವಿಕುಮಾರ್ , ‘ಸರ್ಕಾರವು ಸಹಕಾರ ಕ್ಷೇತ್ರವನ್ನು ಸರ್ಕಾರೀಕರಣ ಮಾಡಲು ಹೊರಟಿದೆ. ಇದು ಸಹಕಾರ ಕ್ಷೇತ್ರದ ಬೆಳವಣಿಗೆಯನ್ನು ಮೊಟುಕುಗೊಳಿಸುತ್ತದೆ. ಮಸೂದೆಯನ್ನು ಪರಿಶೀಲನಾ ಸಮಿತಿಗೆ ಒಪ್ಪಿಸಬೇಕು’ ಎಂದು ಆಗ್ರಹಿಸಿದರು.

ಜೆಡಿಎಸ್‌ನ ಕೆ.ಎ.ತಿಪ್ಪೇಸ್ವಾಮಿ, ಈ ತಿದ್ದುಪಡಿಯಿಂದ ಸೌಹಾರ್ದ ಸಹಕಾರ ವಲಯದಲ್ಲಿ ತೀವ್ರ ಸ್ವರೂಪದ ಪರಿಣಾಮ ಬೀರಲಿದೆ ಮತ್ತು ಗೊಂದಲಗಳಿಗೂ ಕಾರಣವಾಗುತ್ತದೆ ಎಂದರು.

ಮಸೂದೆಯ ಕುರಿತು ಬಿಜೆಪಿಯ ಹಣಮಂತಪ್ಪ ನಿರಾಣಿ, ತೇಜಸ್ವಿನಿ ಗೌಡ, ಪ್ರತಾಪ್‌ ಸಿಂಹ ನಾಯಕ್, ಕಾಂಗ್ರೆಸ್‌ನ ನಜೀರ್ ಅಹಮದ್‌, ಹರೀಶ್‌ ಕುಮಾರ್, ಅನಿಲ್‌ಕುಮಾರ್‌, ಜೆಡಿಎಸ್‌ನ ಭೋಜೇಗೌಡ, ಟಿ.ಎ.ಶರವಣ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.