ಹುಬ್ಬಳ್ಳಿ: ‘ಹಳೇಹುಬ್ಬಳ್ಳಿ ಗಲಭೆ ಪ್ರಕರಣ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ನಡೆಸುತ್ತಿರುವಾಗ, ರಾಜ್ಯ ಸರ್ಕಾರಕ್ಕೆ ಪ್ರಕರಣ ಹಿಂಪಡೆಯುವ ಅಧಿಕಾರವಿಲ್ಲ. ಇದು ತುಷ್ಟೀಕರಣದ ಪರಮಾವಧಿಯಾಗಿದೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ದೇಶದ್ರೋಹ ಕಾಯ್ದೆಯಡಿ ದಾಖಲಾದ ಪ್ರಕರಣವನ್ನು ರಾಜ್ಯ ಸರ್ಕಾರ ಹಿಂಪಡೆಯುವ ನಿರ್ಧಾರ ಮಾಡಿದ್ದು ಸರಿಯಲ್ಲ. ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ್ದಾರೆ ಎಂದರೆ ರಾಜ್ಯದ ಮೇಲೆ ದಾಳಿ ಮಾಡಿದ್ದಾರೆ ಎಂದರ್ಥ. ಇದು ಗಂಭೀರ ಪ್ರಕರಣವೆಂದು ಪರಿಗಣಿಸಿ ಎನ್‌ಐಎಗೆ ವಹಿಸಿದ್ದು, ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಹ ಸಲ್ಲಿಕೆ ಆಗಿದೆ. ಎನ್‌ಐಎಗೆ ನೀಡಿರುವ ಪ್ರಕರಣ ಯಾವುದೇ ಕಾರಣಕ್ಕೂ ವಾಪಸ್ ಪಡೆಯಲು ಬರುವುದಿಲ್ಲ’ ಎಂದರು.
‘ಹಳೇಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆಯುವ ನಿರ್ಧಾರದ ಮೂಲಕ ರಾಜ್ಯ ಸರ್ಕಾರ ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತಿದೆ. ಡಿಜೆ ಹಳ್ಳಿ–ಕೆಜೆ ಹಳ್ಳಿ ಪ್ರಕರಣ, ಮಂಗಳೂರಿನಲ್ಲಿ ನಡೆದ ಗಲಭೆ, ಹಳೇಹುಬ್ಬಳ್ಳಿ ಗಲಭೆಗಳಲ್ಲಿ ಉದ್ರಿಕ್ತರು ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿದ್ದಾರೆ. ಇನ್ನು ಮುಂದೆ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದರೆ ಪೊಲೀಸರು ಏನೂ ಮಾಡುವಂತಿಲ್ಲವೇ’ ಎಂದು ಬೊಮ್ಮಾಯಿ ಪ್ರಶ್ನಿಸಿದರು.
‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ರಾಜ್ಯ ಸರ್ಕಾರ ತನ್ನ ರಕ್ಷಣೆಗಷ್ಟೇ ಮುಂದಾಗಿರುವುದರಿಂದ, ಬಾಲಿಶವಾಗಿ ವರ್ತಿಸುತ್ತಿದೆ. ತನ್ನ ತಪ್ಪು ಹಾಗೂ ಹಗರಣಗಳನ್ನು ಮುಚ್ಚಿಕೊಳ್ಳಲು ಇಂತಹ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ’ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರ ನೀಡಿದ್ದ ‘ದುಷ್ಟರ ಸಂಹಾರ’ ಜಾಹೀರಾತು ಕುರಿತು ಪ್ರತಿಕ್ರಿಯಿಸಿದ ಸಂಸದ ಬೊಮ್ಮಾಯಿ, ‘ಇದು ಅಪರಾಧಿ ಮನೋಭಾವದ ಸಂಕೇತ. ತಾವೇನೂ ತಪ್ಪು ಮಾಡಿಲ್ಲ ಎಂಬ ಭಾವನೆ ಮೂಡಿಸಲು ಹಾಗೂ ಇತರರು ದುಷ್ಟರು ಎಂದು ಬಿಂಬಿಸಲು ಆ ರೀತಿ ಜಾಹೀರಾತು ನೀಡಿದ್ದಾರೆ. ಸರ್ಕಾರಿ ಜಾಹೀರಾತನ್ನು ತಮ್ಮ ಸ್ವಂತ ರಾಜಕಾರಣಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದು ಇದೇ ಮೊದಲು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.