ADVERTISEMENT

ವಿಧಾನಸಭೆ: ಭೋಜನಾ ವೆಚ್ಚ ಹೆಚ್ಚಳಕ್ಕೆ ಪ್ರಸ್ತಾವ

ಸಮಾಜಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯಗಳು

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2023, 14:34 IST
Last Updated 13 ಡಿಸೆಂಬರ್ 2023, 14:34 IST
<div class="paragraphs"><p>ಡಾ.ಎಚ್‌.ಸಿ. ಮಹದೇವಪ್ಪ</p></div>

ಡಾ.ಎಚ್‌.ಸಿ. ಮಹದೇವಪ್ಪ

   

ವಿಧಾನಸಭೆ: ಪ್ರಸ್ತುತ ಮಾರುಕಟ್ಟೆ ದರಗಳಿಗೆ ಅನುಗುಣವಾಗಿ ಸಮಾಜ ಕಲ್ಯಾಣ ಇಲಾಖೆ ಅಧೀನದ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳ ಭೋಜನಾ ವೆಚ್ಚವನ್ನು ಹೆಚ್ಚಿಸುವ ಪ್ರಸ್ತಾವವಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ತಿಳಿಸಿದರು.

ಕಾಂಗ್ರೆಸ್‌ನ ಪಿ.ಎಂ. ನರೇಂದ್ರಸ್ವಾಮಿ ಅವರ ಪ್ರಶ್ನೆಗೆ ಬುಧವಾರ ಉತ್ತರ ನೀಡಿದ ಸಚಿವರು, ‘ವಸತಿ ಶಾಲೆಗಳಲ್ಲಿ ಪ್ರತಿ ವಿದ್ಯಾರ್ಥಿಗೆ ಮಾಸಿಕ ₹ 1,450, ಸರ್ಕಾರಿ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ನಿಲಯಗಳಲ್ಲಿ ಮಾಸಿಕ ₹ 1,650, ಸರ್ಕಾರಿ ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಮಾಸಿಕ ₹ 1,750, ಖಾಸಗಿ ಅನುದಾನಿತ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ನಿಲಯಗಳಲ್ಲಿ ಮಾಸಿಕ ₹ 1,350 ಮತ್ತು ಖಾಸಗಿ ಅನುದಾನಿತ ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಮಾಸಿಕ ₹ 1,450 ಭೋಜನಾ ವೆಚ್ಚ ನೀಡಲಾಗುತ್ತಿದೆ. ಅದನ್ನು ಹೆಚ್ಚಿಸುವ ಪ್ರಸ್ತಾವ ಪರಿಶೀಲನೆಯಲ್ಲಿದೆ’ ಎಂದರು.

ADVERTISEMENT

ಪ್ರತಿ ತಿಂಗಳಿಗೆ ಬಾಲಕರಿಗೆ ₹ 93 ವೆಚ್ಚದಲ್ಲಿ ಹಾಗೂ ಬಾಲಕಿಯರಿಗೆ ₹ 134 ವೆಚ್ಚದಲ್ಲಿ ಶುಚಿ ಕಿಟ್‌ ನೀಡಲಾಗುತ್ತಿದೆ. ಕೇಂದ್ರೀಯ ಆಹಾರ ಸಂಶೋಧನಾ ಸಂಸ್ಥೆಯ ಮಾನದಂಡಗಳ ಪ್ರಕಾರ ಗುಣಮಟ್ಟದ ಆಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

‘ಪ್ರಸ್ತುತ ಮಾರುಕಟ್ಟೆ ದರಗಳಿಗೆ ಹೋಲಿಸಿದರೆ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಭೋಜನಾ ವೆಚ್ಚ ಅತ್ಯಂತ ಕಡಿಮೆ ಇದೆ. ಶುಚಿ ಕಿಟ್‌ಗೆ ನೀಡುತ್ತಿರುವ ದರವೂ ಸಾಲದು. ಆದ್ದರಿಂದ ದರ ಹೆಚ್ಚಿಸಬೇಕು. ಅನುದಾನದ ಕೊರತೆ ಇದ್ದರೆ ಪರಿಶಿಷ್ಟ ಜಾತಿ ಉಪ ಯೋಜನೆಯ ಅನುದಾನದಲ್ಲಿ ಕೆಲವು ಇಲಾಖೆಗಳಲ್ಲಿ ಬಳಕೆಯಾಗದೇ ಉಳಿಯುವ ಮೊತ್ತವನ್ನು ಹಿಂಪಡೆದು ಈ ಉದ್ದೇಶಕ್ಕೆ ವಿನಿಯೋಗಿಸಬೇಕು’ ಎಂದು ನರೇಂದ್ರಸ್ವಾಮಿ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.