ADVERTISEMENT

ಸರ್ಕಾರಿ ಭೂ ಕಬಳಿಕೆ ತನಿಖೆ ಎಸ್ಐಟಿಗೆ : ‘ಪ್ರಜಾವಾಣಿ’ ಬಯಲಿಗೆಳೆದ ಅಕ್ರಮಗಳು

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2022, 20:32 IST
Last Updated 7 ಮಾರ್ಚ್ 2022, 20:32 IST
   

ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಭೂಮಿಯನ್ನು ಲಪಟಾಯಿಸಿರುವ ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಂಗಳೂರು ನಗರ ಜಿಲ್ಲೆ ಬೇಗೂರು ಹೋಬಳಿಯ ಹುಳಿಮಾವು ಮತ್ತು ಇತರ ಗ್ರಾಮಗಳಲ್ಲಿ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆವಿಧಾನಸಭೆಯಲ್ಲಿ ಜೆಡಿಎಸ್‌ನ ಎ.ಟಿ.ರಾಮಸ್ವಾಮಿ ಅವರು ನಿಯಮ 69 ರಡಿ ಪ್ರಸ್ತಾಪಿಸಿದಾಗ, ಸರ್ಕಾರಿ ಭೂಮಿಯನ್ನು ಮರಳಿ ವಶಕ್ಕೆ ತೆಗೆದುಕೊಳ್ಳಲು ಸಮರೋಪಾದಿಯಲ್ಲಿ ಸರ್ಕಾರ ಕೆಲಸ ಮಾಡಲಿದೆ ಎಂದರು. ಈ ಅಕ್ರಮಗಳ ಕುರಿತು ‘ಪ್ರಜಾವಾಣಿ’ ಸರಣಿ ವರದಿಯನ್ನು ಪ್ರಕಟಿಸಿತ್ತು.

ಈ ವಿಶೇಷ ತನಿಖಾ ತಂಡವು ನಕಲಿ ದಾಖಲೆಗಳ ಮೂಲಕ ಭೂಕಬಳಿಕೆಯ ವಿಚಾರವನ್ನಷ್ಟೇ ಕೇಂದ್ರೀಕರಿಸಿ ತನಿಖೆ ನಡೆಸಲಿದೆ. ಈ ರೀತಿಯ ಎಲ್ಲ ಪ್ರಕರಣಗಳನ್ನು ಎಸ್‌ಐಟಿಗೆ ವರ್ಗಾಯಿಸಲಾಗುವುದು. ಇದರಲ್ಲಿ ಭಾಗಿಯಾದ ಅಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು ಮತ್ತು ಸರ್ಕಾರಿ ಜಮೀನು ಕಬಳಿಕೆಗೆ ಪೂರ್ಣ ವಿರಾಮ ಹಾಕಲಾಗುವುದು ಎಂದು ಬೊಮ್ಮಾಯಿ ಹೇಳಿದರು.

ADVERTISEMENT

ಉಪವಿಭಾಗಾಧಿಕಾರಿ ಕೆ.ರಂಗನಾಥ್‌ ವಿರುದ್ಧದ ಪ್ರಕರಣ ಡಿಪಿಆರ್‌ನಲ್ಲಿದೆ. ಈ ಪ್ರಕರಣದ ಹಿಂದೆ ಯಾರೆಲ್ಲ ಇದ್ದಾರೆ, ಫಲಾನುಭವಿಗಳು ಯಾರು ಎಂಬುದನ್ನು ಪತ್ತೆ ಮಾಡಲಾಗುವುದು. ಅಲ್ಲದೆಕೆ.ರಂಗನಾಥ್‌ ಅವರನ್ನು ಅಮಾನತುಗೊಳಿಸಲಾಗುವುದು ಎಂದೂ ತಿಳಿಸಿದರು.

‘ಭೂಮಾಫಿಯಾ ಮತ್ತು ಅಧಿಕಾರಿಗಳ ಅಪವಿತ್ರ ಮೈತ್ರಿಯನ್ನು ಕಡಿದು ಹಾಕುತ್ತೇವೆ. ಇಂತಹ ಅಕ್ರಮಗಳು ನಡೆದರೆ ಸಂಬಂಧಿಸಿದ ವಿಭಾಗಾಧಿಕಾರಿ ಅಥವಾ ಜಿಲ್ಲಾಧಿಕಾರಿಗಳನ್ನು ಅವರ ಹೆಸರಿನಲ್ಲೇ ಹೊಣೆಗಾರರನ್ನಾಗಿ ಮಾಡಲಾಗುವುದು’ ಎಂದರು.

ಭೂಮಂಜೂರಾತಿ ಮಾಡುವ ಅಧಿಕಾರಿಗಳಿಗಿರುವ ಅರೆನ್ಯಾಯಿಕ ಅಧಿಕಾರ ಉಳಿಸಬೇಕೋ ಬೇಡವೋ ಎಂಬ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ಒಂದು ವೇಳೆ ಅಧಿಕಾರ ಮುಂದುವರಿಸಿದರೂ, ಮೇಲುಸ್ತುವಾರಿಯನ್ನು ಹಿರಿಯ ಅಧಿಕಾರಿಗಳಿಗೆ ನೀಡುವ ಬಗ್ಗೆಯೂ ಚಿಂತನೆ ನಡೆಸಲಾಗುವುದು. ಅಲ್ಲದೆ, ಸರ್ಕಾರಿ ಭೂಮಿ ವಿಲೇವಾರಿಗೆ ಕಠಿಣ ಮಾರ್ಗಸೂಚಿಯನ್ನೂ ರೂಪಿಸಲಾಗುವುದು ಎಂದು
ಹೇಳಿದರು.

ಸರ್ಕಾರಿ ಭೂಕಬಳಿಕೆ ತಡೆದು, ಮಟ್ಟ ಹಾಕಲು ಶಾಸಕ ಎ.ಟಿ.ರಾಮಸ್ವಾಮಿ ಅವರು ಬೆನ್ನು ಬಿಡದ ಬೇತಾಳನಂತೆ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು.

‘ಇವಿಷ್ಟೇ ಅಲ್ಲ, ಇನ್ನು ಯಾವುದಾದರೂ ಪ್ರಕರಣಗಳನ್ನು ಇದ್ದರೆ ಮಾಹಿತಿ ಕೊಡಿ. ಅವುಗಳ ಬಗ್ಗೆಯೂ ತನಿಖೆ ನಡೆಸಲಾಗುವುದು’ ಎಂದು ಅವರು ರಾಮಸ್ವಾಮಿ ಅವರಿಗೆ ಭರವಸೆ ನೀಡಿದರು.

ಗೃಹ ಸಚಿವರಿದ್ದಾಗ ಮಾದಕ ವಸ್ತುಗಳ ಮಾಫಿಯಾ ಮೇಲೆ ಸಮರ ಸಾರಿದ ಮಾದರಿಯಲ್ಲೇ ಈಗ ಭೂಮಾಫಿಯಾ ವಿರುದ್ಧವೂ ಸಮರ ಸಾರಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಲಹೆ ನೀಡಿದರು.

ಭೂಕಬಳಿಕೆ ಮೌಲ್ಯ ₹5 ಲಕ್ಷ ಕೋಟಿ?

ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಆ ಮೂಲಕ ಕಬಳಿಕೆ ಮಾಡಿರುವ ಸರ್ಕಾರಿ ಜಮೀನಿನ ಮೌಲ್ಯ ಸುಮಾರು ₹5 ಲಕ್ಷ ಕೋಟಿಯಷ್ಟು ಆಗಬಹುದು ಎಂದು ಜೆಡಿಎಸ್‌ ಶಾಸಕ ಎ.ಟಿ.ರಾಮಸ್ವಾಮಿ ಹೇಳಿದರು.

‘ಸಿದ್ಧಾಂತ, ಧರ್ಮದ ಹಾದಿಯಲ್ಲಿ ರಾಜಕಾರಣ ಮಾಡುತ್ತೇವೆ ಎನ್ನುತ್ತೀರಿ. ರಾಮರಾಜ್ಯ ಕಟ್ಟುವುದಾಗಿಯೂ ಹೇಳುತ್ತೀರಿ. ಭೂ ಕಬಳಿಕೆಯ ರಾಕ್ಷಸರ ಹಾವಳಿ ನಿಯಂತ್ರಿಸದಿದ್ದರೆ ರಾಮ ರಾಜ್ಯ ಹೇಗೆ ಕಟ್ಟುತ್ತೀರಿ’ ಎಂದು ಅವರು ಸರ್ಕಾರವನ್ನು ತಿವಿದರು.

‘ಬೇಗೂರು ಹೋಬಳಿ ಹುಳಿಮಾವು ಗ್ರಾಮ ಮತ್ತು ಇತರ ಕಡೆಗಳಲ್ಲಿ ನಡೆದಿರುವ ಸುಮಾರು 15 ಪ್ರಕರಣಗಳನ್ನು ಪ್ರಸ್ತಾಪಿಸಿದ ಅವರು, ನಕಲಿ ದಾಖಲೆಗಳ ಮೂಲಕ ಸರ್ಕಾರಿ ಜಮೀನು ಕಬಳಿಕೆ ಮಾಡುತ್ತಿರುವುದನ್ನು ನೋಡಿಕೊಂಡು ಸರ್ಕಾರ ಸುಮ್ಮನೆ ಕುಳಿತಿದೆ. ಕಂದಾಯ ಇಲಾಖೆಯ ಹಿಂದಿನ ಪ್ರಧಾನ ಕಾರ್ಯದರ್ಶಿಯವರು ನೀಡಿದ ವರದಿ ಮೇಲೂ ಕ್ರಮ ಆಗಿಲ್ಲ. ಈ ಅಕ್ರಮ ದಂಧೆ ಭೂಮಿಯ ಮೇಲೆ ನಡೆಯುತ್ತಿರುವ ಅತ್ಯಾಚಾರ, ಅನಾಚಾರ. ಇವೆಲ್ಲ ನೋಡಿದರೆ ಮನಸ್ಸು ಕುದಿಯುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.