ಬೆಂಗಳೂರು: ‘ರೈತರು ಹಾಗೂ ಇತರೆ ಆಸ್ತಿಗಳನ್ನು ವಕ್ಫ್ ಮಂಡಳಿಯ ಹೆಸರಿಗೆ ಖಾತೆ ಮಾಡಬಾರದು. ಮುಟೇಷನ್ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು’ ಎಂದು ಕಂದಾಯ ಇಲಾಖೆ ಶನಿವಾರ ಆದೇಶ ಹೊರಡಿಸಿದೆ.
ವಕ್ಫ್ ಆಸ್ತಿಯ ವಿವಾದ ಮುನ್ನೆಲೆಗೆ ಬಂದ ಬಳಿಕ ಅಧಿಕಾರಿಗಳ ಸಭೆ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲವು ನಿರ್ದೇಶನ ನೀಡಿದ್ದರು. ಅವರ ಸೂಚನೆಯ ಅನುಸಾರ, ರೈತರ ಜಮೀನು ಮತ್ತು ಇತರೆ ಆಸ್ತಿಗಳನ್ನು ಮುಟೇಷನ್ ಮಾಡಲು ಯಾವುದೇ ಕಚೇರಿ ಅಥವಾ ಪ್ರಾಧಿಕಾರ ನೀಡಿದ ನಿರ್ದೇಶನಗಳನ್ನು ತಕ್ಷಣ ಹಿಂಪಡೆಯಬೇಕು. ರೈತರಿಗೆ ನೀಡಲಾದ ಎಲ್ಲ ನೋಟಿಸ್‌ಗಳನ್ನೂ ಹಿಂಪಡೆಯಬೇಕು. ಸದರಿ ಜಮೀನುಗಳಲ್ಲಿ ಉಳುಮೆ ಮಾಡುತ್ತಿರುವ ರೈತರ ವಿರುದ್ಧ ಕ್ರಮ ಜರುಗಿಸಬಾರದು ಎಂದು ಆದೇಶ ಹೇಳಿದೆ.
ವಕ್ಫ್ ಆಸ್ತಿ ಕುರಿತು ಹಿಂದೆ ಹೊರಡಿಸಿದ್ದ ಎಲ್ಲ ಸುತ್ತೋಲೆಗಳನ್ನು ಹಿಂಪಡೆಯಲಾಗಿತ್ತು. ಮುಖ್ಯಮಂತ್ರಿ ಆದೇಶವಿದ್ದರೂ, ಮೇಲಧಿಕಾರಿಗಳ ಅನುಮತಿ, ಅನುಮೋದನೆ ಇಲ್ಲದೆ ನೆನಪೋಲೆ–2 ಹೊರಡಿಸಿದ ಅಧಿಕಾರಿಯ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ವಿವರಿಸಲಾಗಿದೆ.
ವಿಜಯಪುರ ಜಿಲ್ಲೆಯಿಂದ ಆರಂಭವಾದ ವಕ್ಫ್ ಆಸ್ತಿಯ ಖಾತೆ ಪ್ರಕ್ರಿಯೆ ವಿವಾದದ ಸ್ವರೂಪ ಪಡೆದಿತ್ತು. ಇದು ಸದ್ದು ಮಾಡಿದ ಬೆನ್ನಲ್ಲೇ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ರೈತರಿಗೆ, ಮಠಗಳಿಗೆ, ಖಾಸಗಿ ಆಸ್ತಿಗಳಿಗೆ ನೋಟಿಸ್ ನೀಡಲಾಗಿದೆ ಎಂಬ ಸಂಗತಿ ಹೊರಬಿದ್ದಿತ್ತು. ವಿರೋಧ ಪಕ್ಷ ಬಿಜೆಪಿ ನಾನಾ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿತ್ತು.
ಈ ಬೆಳವಣಿಗೆಯ ಬೆನ್ನಲ್ಲೇ, ನೋಟಿಸ್ ನೀಡದಂತೆ, ನೀಡಿರುವ ನೋಟಿಸ್ ವಾಪಸ್ ಪಡೆಯುವಂತೆ ನಿರ್ದೇಶನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಆದರೆ, ವಾಪಸ್
ಆಗಿಲ್ಲ ಎಂದು ದೂರಿದ್ದ ಬಿಜೆಪಿ ನಾಯಕರು, 1974ರ ವಕ್ಫ್ ಕಾಯ್ದೆ ವಾಪಸ್ ಪಡೆಯುವವರೆಗೂ ಹೋರಾಟ ಮುಂದುವರಿಸುವುದಾಗಿ ಪಟ್ಟು ಹಿಡಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.