ADVERTISEMENT

ಸಾರಿಗೆ ಬಸ್‌ಗಳ ಪ್ರಯಾಣ ದರ ಪರಿಷ್ಕರಣೆಗಾಗಿ ಪ್ರತ್ಯೇಕ ಆಯೋಗಕ್ಕೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2023, 16:14 IST
Last Updated 5 ನವೆಂಬರ್ 2023, 16:14 IST
   

ಬೆಂಗಳೂರು: ಬಸ್‌ಗಳ ಖರೀದಿ, ಬಿಡಿ ಭಾಗಗಳು ಹಾಗೂ ದುರಸ್ತಿ ವೆಚ್ಚ ಮತ್ತು ಇಂಧನ ದರ ಏರಿಕೆ ಆಧಾರದಲ್ಲಿ ಸರ್ಕಾರಿ ಸ್ವಾಮ್ಯದ ಸಾರಿಗೆ ನಿಗಮಗಳ ಬಸ್‌ ಪ್ರಯಾಣ ದರವನ್ನು ಪರಿಷ್ಕರಿಸಲು ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಮಾದರಿಯಲ್ಲಿ ಪ್ರತ್ಯೇಕ ಆಯೋಗವೊಂದನ್ನು ರಚಿಸುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಈ ಹಿಂದೆ ಇದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾರಿಗೆ ಇಲಾಖೆಯ ಅಧೀನದಲ್ಲಿರುವ ನಾಲ್ಕು ರಸ್ತೆ ಸಾರಿಗೆ ನಿಗಮಗಳನ್ನು ನಷ್ಟದಿಂದ ಪಾರು ಮಾಡುವ ಕುರಿತು ಅಧ್ಯಯನ ನಡೆಸಲು ನಿವೃತ್ತ ಐಎಎಸ್‌ ಅಧಿಕಾರಿ ಎಂ.ಆರ್‌. ಶ್ರೀನಿವಾಸಮೂರ್ತಿ ನೇತೃತ್ವದ ಸಮಿತಿ ರಚಿಸಲಾಗಿತ್ತು. ಬಸ್‌ ಪ್ರಯಾಣ ದರ ಪರಿಷ್ಕರಣೆಗೆ ಕೆಇಆರ್‌ಸಿ ಮಾದರಿಯಲ್ಲಿ ಆಯೋಗವೊಂದನ್ನು ನೇಮಿಸುವುದು ಸೂಕ್ತ ಎಂದು ಸಮಿತಿ ಶಿಫಾರಸು ಮಾಡಿತ್ತು.

‘ವಿವಿಧ ಕಾರಣಗಳಿಂದ ಸರ್ಕಾರವು ಬಸ್‌ ಪ್ರಯಾಣ ದರ ಹೆಚ್ಚಳಕ್ಕೆ ಹಿಂದೇಟು ಹಾಕುತ್ತದೆ. ಇದು ಸಾರಿಗೆ ನಿಗಮಗಳು ನಷ್ಟದ ಸುಳಿಗೆ ಸಿಲುಕಲು ಕಾರಣವಾಗುತ್ತದೆ. ಹಲವು ವರ್ಷಗಳವರೆಗೂ ಪ್ರಯಾಣ ದರ ಪರಿಷ್ಕರಣೆ ಆಗದೇ ಇರುವುದರಿಂದ ನಿಗಮಗಳು ನಷ್ಟದಲ್ಲಿವೆ. ಸ್ವತಂತ್ರ ಆಯೋಗ ನೇಮಿಸಿದರೆ ಹಸ್ತಕ್ಷೇಪ ಇಲ್ಲದ ದರ ಪರಿಷ್ಕರಣೆ ಸಾಧ್ಯವಾಗುತ್ತದೆ ಎಂಬುದನ್ನು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮನವರಿಕೆ ಮಾಡಲು ಹಣಕಾಸು ಅಧಿಕಾರಿಗಳು ಪ್ರಯತ್ನ ಮಾಡಿದ್ದಾರೆ. ವಿಷಯ ಇನ್ನೂ ಚರ್ಚೆಯಲ್ಲಿದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಮಾರುಕಟ್ಟೆಯಲ್ಲಿ ಡೀಸೆಲ್‌ ದರ ಏರಿಕೆ, ಹೊಸ ಬಸ್‌ ಖರೀದಿ, ದುರಸ್ತಿ ವೆಚ್ಚವನ್ನು ಆಧರಿಸಿ ಪ್ರತಿ ವರ್ಷವೂ ಸಾರಿಗೆ ನಿಗಮಗಳ ವರಮಾನದ ಬೇಡಿಕೆಯನ್ನು ಆಯೋಗದ ಮುಂದೆ ಮಂಡಿಸಿ, ಅನುಮೋದನೆ ಪಡೆಯಬೇಕು. ಕೊರತೆ ಉದ್ಭವಿಸುವ ಸಂದರ್ಭದಲ್ಲಿ ಆಯೋಗದ ಮೂಲಕವೇ ಪ್ರಯಾಣ ದರ ಪರಿಷ್ಕರಣೆ ಆದೇಶ ಪಡೆಯಬೇಕು. ದರ ಪರಿಷ್ಕರಣೆ ತೀರ್ಮಾನವನ್ನು ಹಿಂಪಡೆಯುವುದಕ್ಕೆ ಸರ್ಕಾರಕ್ಕೆ ಅವಕಾಶ ಇರದಂತೆ ರಕ್ಷಣೆ ಒದಗಿಸಬೇಕು ಎಂಬುದು ಚರ್ಚೆಯಲ್ಲಿದೆ.

‘ಚರ್ಚೆಯ ಹಂತದಲ್ಲೇ ಇದೆ’:

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ‘ಬಸ್‌ ಪ್ರಯಾಣ ದರ ಪರಿಷ್ಕರಣೆಗೆ ಪ್ರತ್ಯೇಕ ಆಯೋಗ ರಚಿಸಬೇಕೆಂಬ ವಿಷಯ ಇನ್ನೂ ಚರ್ಚೆಯ ಹಂತದಲ್ಲಿದೆ. ಸಾರಿಗೆ ಇಲಾಖೆ ಒಪ್ಪಿಗೆ ನೀಡಿದ ಬಳಿಕವಷ್ಟೇ ಮುಂದಿನ ಪ್ರಕ್ರಿಯೆ ಆರಂಭವಾಗಬೇಕು. ಸದ್ಯ ನಾವು ಯಾವುದೇ ತೀರ್ಮಾನ ಕೈಗೊಂಡಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.