ಬೆಂಗಳೂರು: ರಾಜ್ಯದಲ್ಲಿ ನೀರಾವರಿ ಯೋಜನೆಗಳ ನಾಲೆಗಳಿಂದ ನೀರು ಕಳವು ಮಾಡುವುದನ್ನು ನಿಯಂತ್ರಿಸಲು ಅವಕಾಶ ಕಲ್ಪಿಸುವ ಮಸೂದೆಯನ್ನು ಶೀಘ್ರದಲ್ಲಿ ವಿಧಾನಮಂಡಲದಲ್ಲಿ ಮಂಡಿಸಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನಸಭೆಯಲ್ಲಿ ಬಿಜೆಪಿಯ ಜಗದೀಶ ಗುಡಗಂಟಿ ಅವರ ಪ್ರಶ್ನೆಗೆ ಮಂಗಳವಾರ ಉತ್ತರಿಸಿದ ಸಚಿವರು, ‘ನಮ್ಮ ರಾಜ್ಯದಲ್ಲಿನ ಬಹುತೇಕ ನೀರಾವರಿ ಯೋಜನೆಗಳಲ್ಲಿ ನಾಲೆಗಳ ಕೊನೆಯವರೆಗೂ ನೀರು ತಲುಪುತ್ತಿಲ್ಲ. ಮಾರ್ಗ ಮಧ್ಯದಲ್ಲಿ ಪಂಪ್ ಅಳವಡಿಸಿ, ನಾಲೆಗಳ ಪಕ್ಕದಲ್ಲಿ ಕೊಳವೆ ಬಾವಿಗಳನ್ನು ಕೊರೆದು ನೀರು ಕಳವು ಮಾಡಲಾಗುತ್ತಿದೆ. ಅದನ್ನು ನಿಯಂತ್ರಿಸದಿದ್ದರೆ ನಮ್ಮ ಯಾವ ಯೋಜನೆಗಳೂ ಗುರಿ ತಲುಪಲು ಸಾಧ್ಯವಿಲ್ಲ’ ಎಂದರು.
ಎತ್ತಿನಹೊಳೆ ಯೋಜನೆಗೆ ₹25,000 ಕೋಟಿ ವೆಚ್ಚವಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಮಾರ್ಗಮಧ್ಯೆ ನೀರೆತ್ತುವುದನ್ನು ನಿಯಂತ್ರಿಸದೇ ಇದ್ದರೆ ತುಮಕೂರಿನವರೆಗೆ ನೀರು ತರುವುದಕ್ಕೂ ಅಸಾಧ್ಯ ಎಂಬ ಪರಿಸ್ಥಿತಿ ಇದೆ. ರಾಜ್ಯದ ಎಲ್ಲ ಭಾಗಗಳಲ್ಲೂ ನಾಲೆಗಳ ಕೊನೆಯ ಭಾಗಕ್ಕೆ ನೀರು ಹರಿಯುತ್ತಿಲ್ಲ. ಇದನ್ನು ನಿಯಂತ್ರಿಸಲು ಶಾಸಕರು ಸಂಪೂರ್ಣ ಸಹಕಾರ ನೀಡಬೇಕು. ಶಾಸಕರು ಒಪ್ಪಿದರೆ ಮುಂದಿನ ವಾರವೇ ಮಸೂದೆ ಮಂಡಿಸಲಾಗುವುದು ಎಂದು ಹೇಳಿದರು.
ತುಂಗಳ–ಸಾವಳಗಿ ಏತ ನೀರಾವರಿ ಯೋಜನೆಯ ನಾಲೆಗಳಲ್ಲಿ ಮಾರ್ಗಮಧ್ಯೆ ನೀರು ತೆಗೆಯುವುದನ್ನು ನಿಯಂತ್ರಿಸುವಂತೆ ಜಗದೀಶ ಗುಡಗಂಟಿ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.