ಬೆಂಗಳೂರು: ಕಾಮಗಾರಿಗಳಲ್ಲಿನ ಅವ್ಯವಹಾರ, ಹಣ ದುರುಪಯೋಗ ಪ್ರಕರಣಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಜೊತೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರನ್ನೂ ಹೊಣೆಗಾರರನ್ನಾಗಿ ಮಾಡಲು ಗ್ರಾಮೀಣಾಭಿವೃದ್ಧಿ ಇಲಾಖೆ ಮುಂದಾಗಿದೆ.
ಈ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉನ್ನತಾಧಿಕಾರಿಗಳ ಸಭೆಯಲ್ಲಿ ನಡಾವಳಿ ರೂಪಿಸಲಾಗಿದ್ದು, ರಾಜ್ಯದ ಎಲ್ಲ ಜಿಲ್ಲಾ ಪಂಚಾಯಿತಿ ಸಿಇಒಗಳಿಂದ ವರದಿ ಕೇಳಲಾಗಿದೆ.
ಅವ್ಯವಹಾರ, ಹಣ ದುರುಪಯೋಗ ಪ್ರಕರಣಗಳಲ್ಲಿ ಅಧ್ಯಕ್ಷ ಹಾಗೂ ಸದಸ್ಯರ ವಿರುದ್ಧ ಯಾವುದೇ ಪ್ರಕರಣ
ದಾಖಲು ಮಾಡುತ್ತಿಲ್ಲ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮಾತ್ರ ದಂಡನೆ ವಿಧಿಸಲಾಗುತ್ತಿದೆ. ನಿಮ್ಮ ವ್ಯಾಪ್ತಿಯ ಪಂಚಾಯಿತಿಗಳಲ್ಲಿ ಹಿಂದೆ ನಡೆದ ಹಣಕಾಸು ದುರ್ಬಳಕೆ ಪ್ರಕರಣಗಳ ಸ್ವರೂಪ, ಕಾನೂನು ಕ್ರಮಗಳ ಕುರಿತು ಸಮಗ್ರ ಮಾಹಿತಿ ನೀಡಬೇಕು.
ಪಂಚಾಯಿತಿಗಳಲ್ಲಿ ನಡೆದ ಹಣಕಾಸು ಅವ್ಯವಹಾರಗಳಲ್ಲಿ ಅಧ್ಯಕ್ಷರು ಹಾಗೂ ಸದಸ್ಯರ ಪಾತ್ರ, ಅವರ ಪಾಲುದಾರಿಕೆ ಹಾಗೂ ಕೈಗೊಳ್ಳಬಹುದಾದ ಕ್ರಮಗಳ ಕುರಿತು ವರದಿ ಸಲ್ಲಿಸಬೇಕು ಎಂದು ಸಿಇಒಗಳಿಗೆ ಸೂಚಿಸಲಾಗಿದೆ.
ಪ್ರಸ್ತುತ ರಾಜ್ಯದ ಯಾವುದೇ ಗ್ರಾಮ ಪಂಚಾಯಿತಿಗಳಲ್ಲಿ ನಡೆಯುವ ಆರ್ಥಿಕ ಅಪರಾಧಕ್ಕೆ ಪಿಡಿಒ, ಕಾರ್ಯದರ್ಶಿ ಸೇರಿದಂತೆ ಅಧಿಕಾರಿ, ಸಿಬ್ಬಂದಿಯನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ. ಹಗರಣ ಬೆಳಕಿಗೆ ಬಂದ ತಕ್ಷಣ ಅಧಿಕಾರಿ, ಸಿಬ್ಬಂದಿಯನ್ನು ಅಮಾನತು ಮಾಡಿ, ವಿಚಾರಣೆಗೆ ಆದೇಶಿಸಲಾಗುತ್ತಿದೆ. ಆರೋಪ ಸಾಬೀತಾದರೆ ಕಾನೂನು ಅನುಸಾರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಗೆ (ಗ್ರಾಮ ಪಂಚಾಯಿತಿ ಆಯವ್ಯಯ ಮತ್ತು ಲೆಕ್ಕಪತ್ರಗಳ ನಿಯಮ 2006) ತಂದಿದ್ದ ತಿದ್ದುಪಡಿಯಂತೆ ಗ್ರಾಮ ಪಂಚಾಯಿತಿಯ ಹಣಕಾಸಿನ ವ್ಯವಹಾರವನ್ನು ಸರ್ಕಾರ ಸೂಚಿಸುವ ಅಧಿಕಾರಿಗಳು ಅಥವಾ ಪ್ರಾಧಿಕಾರ ನಿರ್ವಹಿಸಬಹುದು. ಇಂತಹ ಅಧಿಕಾರವನ್ನು ಸ್ಥಳೀಯ ಆಡಳಿತದ ಚುನಾಯಿತ ಮುಖ್ಯಸ್ಥರಾಗಿರುವ ಅಧ್ಯಕ್ಷರಿಗೂ ನೀಡಲಾಗಿದೆ.
ಉದ್ಯೋಗ ಖಾತ್ರಿ, ವಿವಿಧ ವಸತಿ ಯೋಜನೆಗಳ ಅನುಷ್ಠಾನ, ಹಣಕಾಸಿನ ನಿಧಿ, ಪಂಚಾಯಿತಿ ತೆರಿಗೆ, ಖರ್ಚು ವೆಚ್ಚಗಳ ಎಲ್ಲ ಚೆಕ್‌ಗಳಿಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಹಿಂದೆ ಕಾರ್ಯದರ್ಶಿ) ಹಾಗೂ ಅಧ್ಯಕ್ಷರ ಜಂಟಿ ಸಹಿ ಕಡ್ಡಾಯವಾಗಿದೆ. ವಿವಿಧ ಯೋಜನೆಗಳು, ಕಾರ್ಯಕ್ರಮಗಳ ಬಿಲ್ ಪಾವತಿಗೂ ಸಹಿ ಮಾಡುವ ಅಧಿಕಾರ ಹೊಂದಿದ್ದಾರೆ. ಆದರೆ, ಅಧ್ಯಕ್ಷರು ಚುನಾಯಿತ ಪ್ರತಿನಿಧಿಯಾಗಿದ್ದು, ಹಣಕಾಸಿನ ವ್ಯವಹಾರಗಳಿಗೆ ಹೊಣೆಗಾರರನ್ನಾಗಿ ಮಾಡಲು ಇಲ್ಲಿಯವರೆಗೂ ಅವಕಾಶ ಇರಲಿಲ್ಲ.
ಆರ್ಥಿಕ ಅಪರಾಧಕ್ಕೆ ಚುನಾಯಿತ ಪ್ರತಿನಿಧಿಗಳನ್ನೂ ಹೊಣೆ ಮಾಡಿದರೆ ಒತ್ತಡ ಕಡಿಮೆಯಾಗುತ್ತದೆ. ಪಿಡಿಒಗಳ ಆತ್ಮಹತ್ಯೆ ತಡೆಗೂ ಸಹಕಾರಿಯಾಗುತ್ತದೆ. ಸಂಘದ ಮನವಿಗೆ ಸರ್ಕಾರ ಸ್ಪಂದಿಸಿದೆರಾಜು ವಾರದ, ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.