ಬೆಂಗಳೂರು: ಕೋವಿಡ್ ಕಾರಣಕ್ಕೆ 2020–21ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯ ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಿದ್ದರಿಂದ, ರಾಜ್ಯದ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಗಣನೀಯವಾಗಿ ಹೆಚ್ಚಳಗೊಂಡಿದೆ. ಹೀಗಾಗಿ, ಎರಡು ಪಾಳಿಯಲ್ಲಿ ತರಗತಿ ನಡೆಸಬೇಕಾಗಿದೆ.
ಕಾಲೇಜುಗಳಲ್ಲಿ ಈಗಾಗಲೇ ನಿಗದಿಪಡಿಸಿದ ಸೀಟುಗಳಿಗಿಂತ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪ್ರವೇಶ ಬಯಸಿ ಬಂದರೆ ಬೆಳಿಗ್ಗೆ ಮತ್ತು ಮಧ್ಯಾಹ್ನ ಪಾಳಿಯಲ್ಲಿ ತರಗತಿ ನಡೆಸಲು ಕಾಲೇಜು ಆಡಳಿತ ಮಂಡಳಿಗಳು ಮುಂದಾಗಿವೆ. ಲಭ್ಯ ಮೂಲಸೌಲಭ್ಯವನ್ನು ಬಳಸಿಕೊಂಡು ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲು ಕಾಲೇಜುಗಳಿಗೆ ಅವಕಾಶ ನೀಡಲಾಗಿದೆ.
‘ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ದಾಖಲು ಮಾಡಿಕೊಂಡ ಕಾಲೇಜುಗಳು ಬೆಳಿಗ್ಗೆ 8 ಗಂಟೆಯಿಂದ 12 ಗಂಟೆಯವರೆಗೆ ಬೆಳಗ್ಗಿನ ಪಾಳಿ, ಮಧ್ಯಾಹ್ನ 12ರಿಂದ 4 ಗಂಟೆವರೆಗೆ ಸಂಜೆಯ ಪಾಳಿಯಲ್ಲಿ ತರಗತಿ ನಡೆಸಲು ಅವಕಾಶ ನೀಡಲಾಗಿದೆ’ ಎಂದು ಕಾಲೇಜು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
‘ಈ ಬಾರಿ ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಪದವಿಗೆ ಸೇರಲು ಸೀಟುಗಳ ಸಂಖ್ಯೆ ಕೊರತೆಯಾಗುವ ಸಾಧ್ಯತೆ ಇಲ್ಲ. ಯಾಕೆಂದರೆ, ಪ್ರತಿವರ್ಷ ಸುಮಾರು 1 ಲಕ್ಷ ಸೀಟುಗಳು ಪದವಿ ಪೂರ್ವ ಕಾಲೇಜುಗಳಲ್ಲಿ ಭರ್ತಿಯಾಗದೆ ಉಳಿಯುತ್ತಿವೆ. 11 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಈ ಬಾರಿ ಸಂಜೆ ಕಾಲೇಜು ಆರಂಭಿಸಲಾಗಿದೆ. ಜೊತೆಗೆ, ಪಾಳಿಯಲ್ಲಿ ತರಗತಿ ನಡೆಸಲು ಕಾಲೇಜುಗಳಿಗೆ ಅವಕಾಶ ನೀಡಲಾಗಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.
‘ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಶೇ 20ರಷ್ಟು ಹೆಚ್ಚು ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲು ಕಾಲೇಜು ಶಿಕ್ಷಣ ಇಲಾಖೆ ಈಗಾಗಲೇ ಸೂಚನೆ ನೀಡಿದೆ. ಕಾಲೇಜುಗಳು ಮನವಿ ಸಲ್ಲಿಸಿದರೆ ಮತ್ತಷ್ಟು ವಿದ್ಯಾರ್ಥಿಗಳ ದಾಖಲಾತಿಗೆ ಅವಕಾಶ ಮಾಡಿಕೊಡಲಾಗುವುದು‘ ಎಂದೂ ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.