ಬೆಂಗಳೂರು: ‘ಬೆಂಗಳೂರು ಒನ್’, ‘ಕರ್ನಾಟಕ ಒನ್’ ಮಾದರಿಯಲ್ಲೇ ಸರ್ಕಾರಿ ಸೇವೆಗಳನ್ನು ಗ್ರಾಮಸ್ಥರಿಗೆ ತಲುಪಿಸುವ ‘ಗ್ರಾಮ ಒನ್’ ಯೋಜನೆಯನ್ನು ರಾಜ್ಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಜಾರಿಗೊಳಿಸಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಈಗಾಗಲೇ ಮೊದಲ ಹಂತದಲ್ಲಿ 12 ಜಿಲ್ಲೆಗಳ 3,026 ಗ್ರಾಮ ಪಂಚಾಯಿತಿಗಳಲ್ಲಿ ಈ ಯೋಜನೆಗೆ ಜನವರಿಯಲ್ಲಿ ಚಾಲನೆ ನೀಡಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತ್ತೀಚೆಗೆ ಮಂಡಿಸಿದ ಬಜೆಟ್‌ನಲ್ಲಿ ಈ ಯೋಜನೆ ರಾಜ್ಯ ವ್ಯಾಪಿ ಜಾರಿಗೊಳಿಸುವುದಾಗಿ ಪ್ರಕಟಿಸಿದ್ದರು. ಇದರಿಂದ ಹೊಸದಾಗಿ 2,937 ಗ್ರಾಮ ಪಂಚಾಯಿತಿಗಳಲ್ಲಿ ಯೋಜನೆ ಜಾರಿ ಆಗಲಿದೆ. ಒಟ್ಟು 5963 ಗ್ರಾಮ ಪಂಚಾಯಿತಿಗಳು ಈ ಯೋಜನೆ ವ್ಯಾಪ್ತಿಗೆ ಒಳಪಡಲಿವೆ.
ಗ್ರಾಮ ಒನ್ ಸೇವೆಯಲ್ಲಿ ಸೇವಾ ಸಿಂಧುವಿನ ಎಲ್ಲ 750 ಕ್ಕೂ ಹೆಚ್ಚು ಸೇವೆಗಳೂ ಸಿಗುತ್ತವೆ. ಸಕಾಲ ಸೇವೆಗಳು, ಆರ್‌ಟಿಐ ಸೇವೆಗಳು, ಸಿಎಂಆರ್‌ಎಫ್ ಸೇವೆಗಳು, ಮೈಕ್ರೋ ಬ್ಯಾಂಕಿಂಗ್ ಸೇವೆಗಳು (ಅಲ್ಪಾವಧಿ ಠೇವಣಿ, ಹಿಂಪಡೆಯುವಿಕೆ, ಬಾಕಿ ವಿಚಾರಣೆ, ಆಧಾರ್ ನವೀಕರಣ ಸೇರಿ ವಿವಿಧ ಬ್ಯಾಂಕಿಂಗ್ ಸೇವೆಗಳು ಲಭ್ಯವಿರು
ತ್ತವೆ). ಆಯುಷ್ಮಾನ್ ಭಾರತ, ಆರ್‌ಟಿಸಿ, ಸಂಧ್ಯಾ ಸುರಕ್ಷಾ ಕಾರ್ಡ್, ರಹವಾಸಿ ಪ್ರಮಾಣಪತ್ರ ಮುಂತಾದ ಪ್ರಮಾಣ
ಪತ್ರಗಳನ್ನೂ ಪಡೆಯಬಹುದು.
ಕರ್ನಾಟಕ ವಿದ್ಯುತ್ ನಿಗಮಕ್ಕೆ ₹2,500 ಕೋಟಿ ಬ್ಯಾಂಕ್ ಪಡೆಯಲು ಸರ್ಕಾರದಿಂದ ಖಾತರಿ ನೀಡುವುದಕ್ಕೂ ಸಂಪುಟ ಸಭೆ ಒಪ್ಪಿಗೆ ನೀಡಿತು.
ವಿತ್ತೀಯ ಹೊಣೆಗಾರಿಕೆ ಮಸೂದೆಗೆ ಅಸ್ತು: ರಾಜ್ಯ ಸರ್ಕಾರ ಜಿಎಸ್‌ಡಿಪಿಯ ಮಿತಿ ಶೇ 25 ನ್ನೂ ಮೀರಿ ಹೆಚ್ಚು ಸಾಲವನ್ನು ಪಡೆಯುವ ಉದ್ದೇಶಕ್ಕಾಗಿ ‘ಕರ್ನಾಟಕ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ಮಸೂದೆ–2022 ಕ್ಕೆ ಒಪ್ಪಿಗೆ
ನೀಡಲಾಯಿತು. ಸದ್ಯಕ್ಕೆ ಆ ಮಿತಿ ಶೇ 27 ಇದೆ. ರಾಜ್ಯ ಸರ್ಕಾರ ಕಳೆದ ವರ್ಷವೂ ಹೆಚ್ಚು ಸಾಲ ಪಡೆಯಲು ಮಸೂದೆಗೆ ತಿದ್ದುಪಡಿ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.