ADVERTISEMENT

ಬೇಡಿಕೆ ಈಡೇರಿಸಲು ಪ್ರಿಯಾಂಕ್‌ ಖರ್ಗೆ ಸಮ್ಮತಿ: ಗ್ರಾ. ಪಂ. ನೌಕರರ ಮುಷ್ಕರ ಅಂತ್ಯ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 16:23 IST
Last Updated 10 ಅಕ್ಟೋಬರ್ 2024, 16:23 IST
<div class="paragraphs"><p>ಬೆಂಗಳೂರಿನಲ್ಲಿ ಗುರುವಾರ ಗ್ರಾಮ ಪಂಚಾಯಿತಿಯ ಎಲ್ಲ ವೃಂದದ ಸಂಘಟನೆಗಳ ಮುಖಂಡರ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ&nbsp; ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿದರು. ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಉಮಾ ಮಹಾದೇವನ್, ಆಯುಕ್ತೆ ಅರುಂಧತಿ ಚಂದ್ರಶೇಖರ್‌ ಉಪಸ್ಥಿತರಿದ್ದರು</p></div>

ಬೆಂಗಳೂರಿನಲ್ಲಿ ಗುರುವಾರ ಗ್ರಾಮ ಪಂಚಾಯಿತಿಯ ಎಲ್ಲ ವೃಂದದ ಸಂಘಟನೆಗಳ ಮುಖಂಡರ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ  ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿದರು. ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಉಮಾ ಮಹಾದೇವನ್, ಆಯುಕ್ತೆ ಅರುಂಧತಿ ಚಂದ್ರಶೇಖರ್‌ ಉಪಸ್ಥಿತರಿದ್ದರು

   

ಪ್ರಜಾವಾಣಿ ಚಿತ್ರ 

ಬೆಂಗಳೂರು: ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗಳನ್ನು ‘ಬಿ’ ಗುಂಪಿನ ಹುದ್ದೆಗಳಾಗಿ ಉನ್ನತೀಕರಿಸಲು ಗ್ರಾಮೀಣಾಭಿವೃದ್ಧಿ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ ನೌಕರರ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ರಚಿಸುವುದೂ ಸೇರಿದಂತೆ ಹಲವು ಬೇಡಿಕೆ ಈಡೇರಿಸಲು ಸಚಿವ ಪ್ರಿಯಾಂಕ್‌ ಖರ್ಗೆ ಸಮ್ಮತಿಸಿದರು.

ADVERTISEMENT

ರಾಜ್ಯ ಸರ್ಕಾರಿ ನೌಕರರ ಸಂಘ, ಗ್ರಾಮೀಣಾಭಿವೃದ್ಧಿ ಇಲಾಖೆಯ ವಿವಿಧ ಸಂಘಟನೆಗಳ ಪ್ರಮುಖರ ಜತೆ ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಇಲಾಖೆಯ ಉನ್ನತಾಧಿಕಾರಿಗಳು ನಡೆಸಿದ ಮಾತುಕತೆ ಫಲಪ್ರದವಾದ ಕಾರಣ ಗ್ರಾಮ ಪಂಚಾಯಿತಿ ಅಧಿಕಾರಿಗಳು, ನೌಕರರು ಮತ್ತು ಸದಸ್ಯರು ಅ.4ರಿಂದ ನಡೆಸುತ್ತಿದ್ದ ಧರಣಿಯನ್ನು ಮುಕ್ತಾಯಗೊಳಿಸುವುದಾಗಿ ಘೋಷಿಸಿದರು.

ರಾಜ್ಯದ ವಿವಿಧ ಜಿಲ್ಲೆಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಕರ ವಸೂಲಿಗಾರರು, ಕ್ಲರ್ಕ್‌ ಮತ್ತು ಡಾಟಾ ಎಂಟ್ರಿ ಅಪರೇಟರ್‌ಗಳು, ನೀರಗಂಟಿಗಳು, ಜವಾನರು, ಸ್ವಚ್ಛತಾ ಕೆಲಸಗಾರರು, ದ್ವಿತೀಯ ದರ್ಜೆ ಸಹಾಯಕರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗೆಜೆಟೆಡ್‌ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಸದಸ್ಯರ ಹಲವು ಸಮಸ್ಯೆಗಳನ್ನು ಆದ್ಯತೆಯ ಮೇಲೆ ಬಗೆಹರಿಸಲಾಗುವುದು. ಜ್ಯೇಷ್ಠತೆಯ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿ, ಬಡ್ತಿ ನೀಡಲಾಗುವುದು ಎಂದು ಖರ್ಗೆ ಭರವಸೆ ನೀಡಿದರು.

ಮೊದಲ ಹಂತದಲ್ಲಿ 2,166 ಪಿಡಿಒಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು, ನಂತರ ಉಳಿದವರಿಗೂ ಅವಕಾಶ ಕಲ್ಪಿಸಲಾಗುವುದು. ವರದಿ ನೀಡಲು ಸಮಿತಿಗೆ ಮೂರು ತಿಂಗಳ ಗಡುವು ನೀಡಲಾಗಿದೆ. ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಕ್ರಮವಹಿಸಲಾಗುವುದು, ಈಗಾಗಲೇ ಪ್ರಕಟಿಸಿರುವ ವರ್ಗಾವಣೆ ಕರಡು ಅಧಿಸೂಚನೆಯಲ್ಲಿನ ನ್ಯೂನತೆಗಳನ್ನು ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಲಾಗುವುದು. ಖಾಲಿ ಹುದ್ದೆಗಳ ಭರ್ತಿಗೆ ಚಾಲನೆ ನೀಡಲಾಗುವುದು ಎಂದರು.

ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನ ಹೆಚ್ಚಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಚರ್ಚಿಸಲಾಗುವುದು. ನೌಕರರ ಮೇಲಿನ ಒತ್ತಡ ಕುರಿತು ಅಧ್ಯಯನ ಮಾಡಲು ತಜ್ಞರ ಸಮಿತಿ ನೇಮಕ ಮಾಡಲಾಗುವುದು ಎಂದು ಹೇಳಿದರು.

ಪಂಚಾಯತ್ ರಾಜ್ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಉಮಾ ಮಹದೇವನ್, ಅಂಜುಂ ಪರ್ವೇಜ್‌, ಆಯುಕ್ತೆ ಅರುಂಧತಿ ಚಂದ್ರಶೇಖರ್‌, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.