ADVERTISEMENT

ಪಂಚಾಯತಿಗಳಲ್ಲಿ ಪರಿಣಾಮಕಾರಿ ಕೆಲಸ ಆಗುತ್ತಿಲ್ಲ: RDPR ಸಚಿವ ಪ್ರಿಯಾಂಕ್‌ ಅಸಮಾಧಾನ

ಪಂಚಾಯತ್ ರಾಜ್‌ ಅಧಿಕಾರಿಗಳ ಸಮ್ಮೇಳನದಲ್ಲಿ ಸಚಿವ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 8:28 IST
Last Updated 19 ಅಕ್ಟೋಬರ್ 2024, 8:28 IST
<div class="paragraphs"><p>ಪ್ರಿಯಾಂಕ್‌ ಖರ್ಗೆ</p></div>

ಪ್ರಿಯಾಂಕ್‌ ಖರ್ಗೆ

   

ಬೆಂಗಳೂರು: ‘ಪಂಚಾಯತ್ ರಾಜ್‌ ಇಲಾಖೆಯಲ್ಲಿ ಎಲ್ಲ ಸವಲತ್ತು ಇದೆ, ಸಿಬ್ಬಂದಿಯೂ ಇದ್ದಾರೆ. ಆದರೆ ಸರಿಯಾದ ರೀತಿಯಲ್ಲಿ ಮತ್ತು ಸರಿಯಾದ ಸಮಯದಲ್ಲಿ ಕೆಲಸಗಳು ಆಗುತ್ತಿಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರು ನಗರದಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ಪಂಚಾಯತ್ ರಾಜ್‌ ಅಧಿಕಾರಿಗಳ ಸಮ್ಮೇಳನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ನಿರೀಕ್ಷಿತ ಮಟ್ಟದಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ, ಕೆಲಸವೂ ಆಗುತ್ತಿಲ್ಲ. ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಒಂದೂವರೆ ವರ್ಷದ ಅವಧಿಯಲ್ಲಿ ಗಮನಿಸಲಾಗಿದೆ. ಪ್ರತಿ ತಿಂಗಳೂ ಪರಿಶೀಲನಾ ಸಭೆ ನಡೆಸಿ, ಸಲಹೆ ನೀಡಲಾಗುತ್ತಿದೆ. ಆದರೂ ಕಾರ್ಯವೈಖರಿಯಲ್ಲಿ ಸುಧಾರಣೆಯಾಗಿಲ್ಲ. ಹೀಗಾಗಿಯೇ ಈ ಸಮ್ಮೇಳನ ಆಯೋಜಿಸಲಾಗಿದೆ’ ಎಂದರು.

‘ನಾವು ನಮ್ಮ ಕರ್ತವ್ಯದ ಬಗ್ಗೆ ಆಸಕ್ತಿ ವಹಿಸದೇ ಇದ್ದರೆ ಜನರ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ. ಪ್ರತಿದಿನ ಜನರೊಂದಿಗೆ ವ್ಯವಹಿರಿಸುವ ಇಲಾಖೆ ನಮ್ಮದು. ಆದರೆ ನಮ್ಮ ಅಧಿಕಾರಿಗಳಿಗೆ ಕೇಳಿಸಿಕೊಳ್ಳುವ ಪ್ರವೃತ್ತಿಯೇ ಇಲ್ಲ ಎಂಬುದನ್ನು ಹಲವು ಬಾರಿ ಗಮನಿಸಿದ್ದೇನೆ. ಅಧಿಕಾರಿಗಳು ಆಳುವ ಮನಸ್ಥಿಯಿಂದ ಹೊರಗೆ ಬರಬೇಕು ಮತ್ತು ಆಲಿಸುವ ಪ್ರವೃತ್ತಿಯನ್ನು ರೂಢಿಸಿಕೊಳ್ಳಬೇಕು’ ಎಂದರು.

‘ಇದು ಯಾರೊ ಒಬ್ಬ ಸಚಿವ, ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿಗೆ ಅನ್ವಯವಾಗುದಿಲ್ಲ. ಇಲಾಖೆಯ ಪ್ರತಿ ಸಿಬ್ಬಂದಿಯೂ ಇದನ್ನು ರೂಢಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಪರಿಣಾಮಕಾರಿಯಾಗಿ ಕೆಲಸ ಮಾಡಿದರೆ ಮಾತ್ರ ಜನರಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ. ಅದರಿಂದ ಇಲಾಖೆಗೂ ಒಳ್ಳೆಯದಾಗುತ್ತದೆ. ಸರ್ಕಾರದ ಯೋಜನೆ ಮತ್ತು ಕಲ್ಯಾಣ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರುತ್ತವೆ’ ಎಂದರು.

ಕಿಯೋನಿಕ್ಸ್‌ ಅಧ್ಯಕ್ಷ ಶರತ್ ಬಚ್ಚೇಗೌಡ ಮಾತನಾಡಿ, ‘ಪಂಚಾಯತಿಗಳ ಕೆಲಸಗಳನ್ನು ಸುಲಭ ಮತ್ತು ಸರಳವಾಗಿಸಲು ಹಲವು ತಂತ್ರಾಂಶ ಮತ್ತು ಪೋರ್ಟಲ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅವುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ, ಸೇವೆಯನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯವಿದೆ’ ಎಂದರು.

ಪಂಚಾಯತಿ ಸಿಇಒಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಜಿಲ್ಲಾ–ತಾಲ್ಲೂಕು–ಗ್ರಾಮ ಪಂಚಾಯತಿಯ ಇತರ ಅಧಿಕಾರಿಗಳು ಸೇರಿ ಸಾವಿರ ಮಂದಿ ಸಮ್ಮೇಳನದಲ್ಲಿ ಭಾಗಿಯಾಗಿದ್ದರು.

‘ಪರಿಣಾಮಕಾರಿ ಕೆಲಸಕ್ಕಾಗಿ ಪಂಚಸೂತ್ರ’

‘ಒಂದೂವರೆ ವರ್ಷದಲ್ಲಿ ಇಲಾಖೆಯ ಕಾರ್ಯವೈಖರಿಯನ್ನು ಗಮನಿಸಿ, ಅವುಗಳಲ್ಲಿ ಐದು ಪ್ರಮುಖ ಕೊರತೆಗಳನ್ನು ಗುರುತಿಸಲಾಗಿದೆ. ಆ ವಿಷಯಗಳಲ್ಲಿ ಸುಧಾರಿಸಿಕೊಳ್ಳಬೇಕು. ಅದಕ್ಕಾಗಿ ಪಂಚಸೂತ್ರವನ್ನು ರೂಪಿಸಲಾಗಿದೆ. ಅದನ್ನು ಎಲ್ಲರೂ ರೂಢಿಸಿಕೊಳ್ಳಬೇಕು’ ಎಂದರು.

‘1. ಸ್ಪಂದನೆ: ಜನರು ಏನು ಹೇಳುತ್ತಾರೆ ಎಂಬುದನ್ನು ಕೇಳಿಸಿಕೊಳ್ಳಬೇಕು. ಸರಿಯಾಗಿ ಕೇಳಿಸಿಕೊಂಡರೆ, ಅರ್ಧ ಸಮಸ್ಯೆ ಬಗೆಹರಿದುಹೋಗುತ್ತದೆ.

‘2. ಸಮನ್ವಯತೆ: ಒಂದು ಕಡತ ಎಲ್ಲಿಂದ ಎಲ್ಲಿಗೆ ಹೋಗಿದೆ, ಅದರ ಸ್ಥಿತಿ ಏನು ಎಂಬುದು ಅಧಿಕಾರಿಗಳಿಗೆ ಗೊತ್ತೇ ಇರುವುದಿಲ್ಲ. ಒದೇ ಕಟ್ಟಡದಲ್ಲಿ ಇದ್ದರೂ, ಒಬ್ಬ ಅಧಿಕಾರಿಯಿಂದ ಮತ್ತೊಬ್ಬ ಅಧಿಕಾರಿಗೆ ಕಡತ ಹೋಗಲು ಹಲವಾರು ತಿಂಗಳೇ ಆಗಿರುತ್ತದೆ. ಇದನ್ನು ತಪ್ಪಿಸಬೇಕು. ಕಡತಗಳನ್ನು ಕ್ಷಿಪ್ರವಾಗಿ ವಿಲೇವಾರಿ ಮಾಡಬೇಕು.

‘3. ಸಮಯಪ್ರಜ್ಞೆ: ಯಾವುದೇ ಯೋಜನೆ ಅಥವಾ ಕಾರ್ಯಕ್ರಮಗಳಿಗೆ ಕೇಂದ್ರ ಕಚೇರಿಯಿಂದ ಅನುದಾನ ಬಿಡುಗಡೆ ಆಗಿರುತ್ತದೆ. ಆದರೆ ಕಾಲಮಿತಿಯಲ್ಲಿ ಅದು ಫಲಾನುಭವಿಗಳಿಗೆ ತಲುಪಿರುವುದೇ ಇಲ್ಲ. ಕಾಲಮಿತಿಯಲ್ಲಿ ಕೆಲಸಗಳನ್ನು ಮಾಡಬೇಕು.

‘4. ಪರಿಣಾಮಕಾರಿ ಅನುಷ್ಠಾನ: ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ, ಪೂರ್ಣ ಪ್ರಮಾಣದಲ್ಲಿ ತಲುಪಿಸುವಂತೆ ಕೆಲಸ ಮಾಡಬೇಕು. ಕಾಮಗಾರಿಗಳು ಸರಿಯಾಗಿ ಆಗಬೇಕು.

‘5. ಹೊಣೆಗಾರಿಕೆ: ಹೊಣೆಗಾರಿಕೆ ಇಲ್ಲದೇ ಕೆಲಸ ಮಾಡಿದರೆ, ಯಾವುದೂ ಯಶಸ್ವಿ ಆಗುವುದಿಲ್ಲ. ಪ್ರತಿಯೊಬ್ಬರು ತಮಗೆ ವಹಿಸಿದ ಜವಾಬ್ದಾರಿಗಳನ್ನು ನಿರ್ವಹಿಸಬೇಕು’ ಎಂದರು.

ಮೊಬೈಲ್ ಬಳಕೆಗೆ ತರಾಟೆ

ಸಮ್ಮೇಳನದಲ್ಲಿ ಮೊಬೈಲ್‌ ಬಳಸುತ್ತಿದ್ದ ಅಧಿಕಾರಿಗಳನ್ನು ಸಚಿವ ಪ್ರಿಯಾಂಕ್‌ ಖರ್ಗೆ ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡುವಾಗ ಮುಂದಿನ ಸಾಲಿನಲ್ಲಿ ಕುಳಿತಿದ್ದ ಕೆಲವರು ಮೊಬೈಲ್‌ ನೋಡುತ್ತಿದ್ದರು. ಅದನ್ನು ಗಮನಿಸಿದ ಅವರು, ‘ಇಂಥದ್ದನ್ನು ನೋಡಿದರೆ ನನಗೆ ಬೇಸರವಾಗುತ್ತದೆ. ಕೆಆರ್‌ಐಡಿಎಲ್‌ ಎಂ.ಡಿ ಬಸವರಾಜ್‌, ಮೊಬೈಲ್‌ ನೋಡುವುದನ್ನು ಬಿಡಿ. ಇಲ್ಲಿ ಕೇಳಿಸಿಕೊಳ್ಳಿ’ ಎಂದರು.

ಮತ್ತೂ ಹಲವರು ಮೊಬೈಲ್‌ ನೋಡುತ್ತಿರುವುದನ್ನು ಗಮನಿಸಿದ ಅವರು, ‘ಕ್ರಿಕೆಟ್‌ ಸ್ಕೋರ್‌ ನೋಡುವುದನ್ನು ಬಿಡಿ. ಕೇಳಿಸಿಕೊಳ್ಳುವ ವ್ಯವಧಾನವೇ ಇಲ್ಲದಿದ್ದರೆ ಹೇಗೆ ಕೆಲಸ ಮಾಡುತ್ತೀರಿ? ಮುಂದಿನ ಬಾರಿ ಎಲ್ಲರ ಮೊಬೈಲ್‌ಗಳನ್ನು ಹೊರಗಿಟ್ಟು ಬರುವ ವ್ಯವಸ್ಥೆ ಮಾಡಿ’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.