ADVERTISEMENT

ಗ್ರಾ.ಪಂ. ಸದಸ್ಯರಿಗೆ ಗೌರವಧನ ಬಿಡುಗಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2023, 21:26 IST
Last Updated 4 ನವೆಂಬರ್ 2023, 21:26 IST
ದಿನೇಶ್‌ ಗೂಳಿಗೌಡ
ದಿನೇಶ್‌ ಗೂಳಿಗೌಡ   

ಬೆಂಗಳೂರು: ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರ ತಿಂಗಳ ಗೌರವಧನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರನ್ನು ವಿಧಾನ ಪರಿಷತ್ ಕಾಂಗ್ರೆಸ್‌ ಸದಸ್ಯ ದಿನೇಶ ಗೂಳಿಗೌಡ ಒತ್ತಾಯಿಸಿದ್ದಾರೆ.

ಈ ಬಗ್ಗೆ ಪತ್ರ ಬರೆದಿರುವ ಅವರು, ‘ರಾಜ್ಯದಲ್ಲಿ ಸದ್ಯ 6,022 ಗ್ರಾಮ ಪಂಚಾಯಿತಿಗಳಿದ್ದು, ಅಷ್ಟೇ ಸಂಖ್ಯೆಯ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸುಮಾರು 90 ಸಾವಿರದಷ್ಟು ಸದಸ್ಯರಿದ್ದಾರೆ. ಅವರಿಗೆ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಗೌರವಧನ ಬಿಡುಗಡೆ ಆಗಿಲ್ಲ. ಇದರಿಂದ ಸದಸ್ಯರಿಗೆ ತೀವ್ರ ಸಮಸ್ಯೆಯಾಗುತ್ತಿದೆ’ ಎಂದಿದ್ದಾರೆ.

‘ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮಾಸಿಕ ತಲಾ ₹ 6 ಸಾವಿರ, ಉಪಾಧ್ಯಕ್ಷರಿಗೆ ₹ 3 ಸಾವಿರ, ‌ಸದಸ್ಯರಿಗೆ ₹ 2 ಸಾವಿರ ಗೌರವಧನ ನೀಡಲಾಗುತ್ತಿದೆ. ಆರ್ಥಿಕವಾಗಿ ಸಬಲರಲ್ಲದ ಗ್ರಾಮೀಣ ಜನಪ್ರತಿನಿಧಿಗಳಿಗೆ ಈ ಮೊತ್ತವು ತುಂಬಾ ಅವಶ್ಯ. ಸದ್ಯ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳು ನಡೆಯದೇ ಇರುವ ಕಾರಣ ಗ್ರಾಮ ಪಂಚಾಯಿತಿ ಆಡಳಿತವೇ ಜನರಿಗೆ ಸ್ಪಂದಿಸಬೇಕಿದೆ. ಆರ್ಥಿಕ ಸಮಸ್ಯೆಯಿಂದ ದೂರದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಅವರು ಖುದ್ದು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಗೌರವಧನ ಬಿಡುಗಡೆ ಮಾಡುವ ಬಗ್ಗೆ ಸರ್ಕಾರ ತುರ್ತು ಗಮನಹರಿಸಬೇಕು’ ಎಂದೂ ಅವರು ಆಗ್ರಹಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.