ಬೆಂಗಳೂರು: ಆಶ್ರಯ ಮನೆಗಳ ಹಂಚಿಕೆಯಲ್ಲಿ ಅಕ್ರಮ ತಡೆಯುವ ನೆಪದಲ್ಲಿ ಗ್ರಾಮಸಭೆಗೆ ಇರುವ ಅಧಿಕಾರ ಮೊಟಕುಗೊಳಿಸುವ ಸರ್ಕಾರದ ಪ್ರಸ್ತಾವಕ್ಕೆ ಕರ್ನಾಟಕ ಪಂಚಾಯತ್ ರಾಜ್ ಪರಿಷತ್ತು ಮತ್ತು ಕರ್ನಾಟಕ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ ವಿರೋಧ ವ್ಯಕ್ತಪಡಿಸಿವೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಪತ್ರ ಬರೆದಿರುವ ಪರಿಷತ್ತಿನ ಕಾರ್ಯಾಧ್ಯಕ್ಷ ಸಿ.ನಾರಾಯಣಸ್ವಾಮಿ, ‘ಗ್ರಾಮಸಭೆಗೆ ಇರುವ ಅಧಿಕಾರ ಮೊಟಕುಗೊಳಿಸುವುದು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಗೆ ವಿರುದ್ಧವಾದ ನಡೆ. ಹೀಗಾಗಿ ಈಗಿರುವ ವ್ಯವಸ್ಥೆ ಮುಂದುವರಿಸಬೇಕು. ಲೋಪಗಳನ್ನು ಸರಿಪಡಿಸಲು ಕಾಯ್ದೆಯಲ್ಲೇ ಇರುವ ಅಧಿಕಾರ ಬಳಸಬೇಕು’ ಎಂದು ಒತ್ತಾಯಿಸಿದ್ದಾರೆ.
‘ಗ್ರಾಮಸಭೆಯಲ್ಲಿ ಅಂತಿಮಗೊಳಿಸಿದ ಫಲಾನುಭವಿಗಳ ಪಟ್ಟಿ ಬದಲಿಸುವ ಅಧಿಕಾರ ಇಲ್ಲದಿದ್ದರೂಹಿಡಿತ ಸಾಧಿಸಲು ಶಾಸಕರ ಅಧ್ಯಕ್ಷತೆಯ ಜಾಗೃತಿ ಸಮಿತಿಗಳನ್ನು ರಚಿಸಲಾಗಿದೆ. ಶಾಸಕರ ಒತ್ತಡಕ್ಕೆ ಮಣಿದು ತಾಲ್ಲೂಕು ಮಟ್ಟದಲ್ಲಿ ಅಧಿಕಾರಿಗಳು ಪಟ್ಟಿ ಬದಲಿಸುತ್ತಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಅಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್ ಆರೋಪಿಸಿದ್ದಾರೆ.
‘ಗ್ರಾಮಸಭೆಗೆ ಇರುವ ಪರಮಾಧಿಕಾರವನ್ನು ಕಸಿದುಕೊಳ್ಳುವ ಪ್ರಯತ್ನ ನಡೆಸಿದರೆ ಒಕ್ಕೂಟ ಉಗ್ರ ಹೋರಾಟ ನಡೆಸಲಿದೆ. ಅಲ್ಲದೇ ಕಾನೂನು ಹೋರಾಟಕ್ಕೂ ಮುಂದಾಗಲಿದೆ’ ಎಂದು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.