ADVERTISEMENT

ಗ್ರಾಮೀಣರ ಕೈಗೆಟುಕಲಿವೆ ಸರ್ಕಾರಿ ಸೇವೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2024, 23:30 IST
Last Updated 1 ಮಾರ್ಚ್ 2024, 23:30 IST
<div class="paragraphs"><p>ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ‘ಪಂಚಮಿತ್ರ’ ಪೋರ್ಟಲ್ ಮತ್ತು ವಾಟ್ಸ್‌ಆ್ಯಪ್ ಚಾಟ್‌ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಇಲಾಖೆ ಆಯುಕ್ತೆ ಪ್ರಿಯಾಂಕ ಮೇರಿ ಫ್ರಾನ್ಸಿಸ್‌, ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳಾದ ಉಮಾಮಹಾದೇವನ್‌ ಮತ್ತು ಅಂಜುಂ ಪರ್ವೇಜ್‌ ಇದ್ದರು.</p></div>

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ‘ಪಂಚಮಿತ್ರ’ ಪೋರ್ಟಲ್ ಮತ್ತು ವಾಟ್ಸ್‌ಆ್ಯಪ್ ಚಾಟ್‌ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಇಲಾಖೆ ಆಯುಕ್ತೆ ಪ್ರಿಯಾಂಕ ಮೇರಿ ಫ್ರಾನ್ಸಿಸ್‌, ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳಾದ ಉಮಾಮಹಾದೇವನ್‌ ಮತ್ತು ಅಂಜುಂ ಪರ್ವೇಜ್‌ ಇದ್ದರು.

   

ಗ್ರಾಮೀಣ ಜನರ ಜತೆ ನೇರ ಸಂಪರ್ಕ ಇರುವ, ಅವರ ಅಹವಾಲುಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳುವತ್ತ ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ಕಂದಾಯ ಇಲಾಖೆಗಳು ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳಲು ಮುಂದಾಗಿವೆ. ಜನರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು 89 ಸೇವೆಗಳು ಆನ್‌ಲೈನ್‌ ಮೂಲಕ ಒದಗಿಸಲಾಗುತ್ತಿದೆ

ಗ್ರಾಮಗಳ ಡಿಜಿಟಲೀಕರಣ: ಹೊಸ ಪೋರ್ಟಲ್‌, ವಾಟ್ಸ್ಆ್ಯಪ್‌ ಚಾಟ್‌ಗೆ ಚಾಲನೆ

ADVERTISEMENT

ಬೆಂಗಳೂರು: ರಾಜ್ಯದ 5,991 ಗ್ರಾಮಗಳನ್ನು ಸಂಪೂರ್ಣ ಡಿಜಿಟಲೀಕರಣ ಮಾಡುವತ್ತ ದಾಪುಗಾಲಿಟ್ಟಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದೇಶದಲ್ಲೇ ಮೊದಲ ಬಾರಿಗೆ ಗ್ರಾಮೀಣ ಜನರಿಗಾಗಿ ಸರ್ಕಾರದ 89 ಸೇವೆಗಳನ್ನು ನೀಡುವ ‘ಪಂಚಮಿತ್ರ’ ಹೆಸರಿನಲ್ಲಿ ಹೊಸ ಪೋರ್ಟಲ್‌ ಮತ್ತು ವಾಟ್ಸ್‌ಆ್ಯಪ್‌ ಚಾಟ್‌ ಡಿಜಿಟಿಲ್ ವೇದಿಕೆಗಳನ್ನು ಆರಂಭಿಸಿದೆ. 

ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಶುಕ್ರವಾರ ‘ಪಂಚಮಿತ್ರ ಪೋರ್ಟಲ್‌’ ಮತ್ತು ‘ಪಂಚ ಮಿತ್ರ ವಾಟ್ಸ್‌ಆ್ಯಪ್‌ ಚಾಟ್‌’ಗೆ ಚಾಲನೆ ನೀಡಿದ ಬಳಿಕ, ಈ ಮಾಹಿತಿ ನೀಡಿದರು.

ಇನ್ನು ಮುಂದೆ ಎಲ್ಲ ಗ್ರಾಮ ಪಂಚಾಯತಿಗಳ ಎಲ್ಲ ರೀತಿಯ ಸಭೆಗಳನ್ನು ವೆಬ್‌ಕಾಸ್ಟಿಂಗ್‌ ಮಾಡಲಾಗುವುದು. ಈಗಾಗಲೇ 74,902 ಸಭೆಗಳನ್ನು ವೆಬ್‌ಕಾಸ್ಟಿಂಗ್‌ ಮಾಡಲಾಗಿದ್ದು, ಸುಮಾರು 1 ಲಕ್ಷ ಸಭೆಗಳನ್ನು ಷೆಡ್ಯೂಲ್‌ ಮಾಡಲಾಗಿದೆ. ತಿಂಗಳ ಸಭೆ, ಸ್ಥಾಯಿ ಸಮಿತಿ ಸಭೆಗಳನ್ನು ವೆಬ್‌ಕಾಸ್ಟಿಂಗ್‌ ಮೂಲಕ ಸಾರ್ವಜನಿಕರು ವೀಕ್ಷಿಸಬಹುದಾಗಿದೆ. ಸಭೆಗಳ ನಡಾವಳಿ ವರದಿಗಳನ್ನೂ ಆಯಾ ದಿನವೇ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಆಗುತ್ತದೆ ಎಂದರು.

ನಾಗರಿಕರು ಗ್ರಾಮ ಪಂಚಾಯಿತಿಗಳಲ್ಲಿನ ತಮ್ಮ ಕೆಲಸ ಮಾಡಿಕೊಳ್ಳಲು ವೃಥಾ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಮತ್ತು ತ್ವರಿತಗತಿಯಲ್ಲಿ ಸೇವೆ ನೀಡುವ ಹಾಗೂ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಈ ಯೋಜನೆ ಜಾರಿ ಮಾಡಲಾಗಿದೆ. ಗ್ರಾಮಪಂಚಾಯಿತಿಗೆ ಸಂಬಂಧಿಸಿದ 17 ಸೇವೆಗಳು ಮತ್ತು ಇತರ ಇಲಾಖೆಗಳಿಗೆ ಸಂಬಂಧಿಸಿದ 72 ಸೇವೆಗಳು ಈ ಎರಡೂ ಡಿಜಿಟಲ್‌ ವೇದಿಕೆಗಳಲ್ಲಿ ಸಿಗಲಿವೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಮೊಬೈಲ್ ಆಧಾರಿತ ಇಂಟರ್‌ನೆಟ್‌ ಸೇವೆ ಶೇ 96.86ರಷ್ಟು ಲಭ್ಯವಿದೆ. ಶೇ 80ಕ್ಕೂ ಹೆಚ್ಚು ಜನರು ವಾಟ್ಸ್‌ಆ್ಯಪ್‌ ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಜನರಿಗೆ ಈ ಸೇವೆ ಪಡೆಯುವುದು ಕಷ್ಟವಾಗುವುದಿಲ್ಲ. ಯಾರಿಗೆ ಬಳಕೆ ಮಾಡಲು ಗೊತ್ತಾಗುವುದಿಲ್ಲವೋ ಅವರ ಸಹಾಯಕ್ಕಾಗಿ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ತಲಾ ಇಬ್ಬರು ಡೇಟಾ ಆಪರೇಟರ್‌ಗಳನ್ನು ನೇಮಿಸಲಾಗುವುದು ಎಂದು ಪ್ರಿಯಾಂಕ್‌ ಹೇಳಿದರು.

ಗ್ರಾಮೀಣ ಜನರು ಡಿಜಿಟಲ್‌ ವೇದಿಕೆ ಮೂಲಕ ದೂರು ನೀಡುವ ಪ್ರಯೋಗವೂ ನಡೆದಿದೆ. ಸುಮಾರು 95,000 ಜನ ಅಹವಾಲುಗಳನ್ನು ಸಲ್ಲಿಸಿದ್ದಾರೆ. ಗೃಹ ಲಕ್ಷ್ಮಿ ಯೋಜನೆಗೆ 32 ಲಕ್ಷ ಮಹಿಳೆಯರು ಬಾಪೂಜಿ ಸೇವಾಕೇಂದ್ರಗಳ ಮೂಲಕವೇ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಂಡಿರುವುದು ವಿಶೇಷ ಎಂದು ಅವರು ತಿಳಿಸಿದರು.

ಗ್ರಾಮ ಪಂಚಾಯಿತಿ ಸೇವೆಗಳಿಗೆ ಅರ್ಜಿ ಸಲ್ಲಿಸಿದ ಬಳಿಕ, ಅರ್ಜಿಗಳ ಸ್ಥಿತಿಗತಿಯನ್ನು ಪರಿಶೀಲಿಸಲೂ ಅವಕಾಶವಿದೆ. ಗ್ರಾಮೀಣ ಜನರು ಕುಡಿಯುವ ನೀರು, ರಸ್ತೆ, ಸೇತುವೆ ದುರಸ್ತಿ, ನರೇಗಾ ಯೋಜನೆ ಮತ್ತು ಪಂಚಾಯತ್‌ ರಾಜ್‌ ವಿಷಯಗಳಿಗೆ ಸಂಬಂಧಿಸಿದ 39 ರೀತಿಯ ಕುಂದುಕೊರತೆಗಳನ್ನು ಗುರುತಿಸಲಾಗಿದೆ. ಪೋರ್ಟಲ್‌ ಅಥವಾ ವಾಟ್ಸ್‌ಆ್ಯಪ್‌ ಮೂಲಕ ಅಹವಾಲು ಸಲ್ಲಿಸಿ ಪರಿಹಾರ ಪಡೆದುಕೊಳ್ಳಬಹುದು.

10 ಸಾವಿರ ಗ್ರಾಮ ಲೆಕ್ಕಿಗರಿಗೆ ಲ್ಯಾಪ್‌ಟಾಪ್‌ ಗ್ರಾಮ ಲೆಕ್ಕಿಗರು ತಮ್ಮ ಕಚೇರಿಯಲ್ಲೇ ಇದ್ದು ಎಲ್ಲ ಕೆಲಸಗಳನ್ನು ಮಾಡಲು ಮತ್ತು ಪ್ರತಿ ನಿತ್ಯ ತಾಲ್ಲೂಕು ಕಚೇರಿಗಳಿಗೆ ಹೋಗುವುದನ್ನು ತಪ್ಪಿಸಲು 10 ಸಾವಿರ ಗ್ರಾಮ ಲೆಕ್ಕಿಗರಿಗೆ ಲ್ಯಾಪ್‌ಟಾಪ್‌ ವಿತರಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಗ್ರಾಮ ಲೆಕ್ಕಿಗರು ಕಡತಗಳನ್ನು ತಾಲ್ಲೂಕು ಕಚೇರಿಗೆ ಒಯ್ಯುತ್ತಾರೆ. ಇದರಿಂದಾಗಿ ಪಂಚಾಯಿತಿ ಕಚೇರಿಗಳಲ್ಲಿ ಅವರು ಇರುವುದಿಲ್ಲ. ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ. ಆದ್ದರಿಂದ ಗ್ರಾಮ ಲೆಕ್ಕಿಗರು ಎಲ್ಲಿ ಇರುತ್ತಾರೋ ಅಲ್ಲಿಂದಲೇ ಕೆಲಸ ಮಾಡಲು ಮತ್ತು ಕಡತಗಳನ್ನು ಆನ್‌ಲೈನ್‌ ಮೂಲಕ ಕಳುಹಿಸಲು ಅವರಿಗೆ ಇ–ಆಫೀಸ್‌ ಲಾಗ್‌ಇನ್‌ ವ್ಯವಸ್ಥೆಯನ್ನೂ ಮಾಡಿಕೊಡಲಾಗುವುದು ಎಂದರು. ಸರ್ವೇ ರೋವರ್‌: ಸರ್ವೇ ಕೆಲಸವನ್ನು ವೇಗವಾಗಿ ಮುಗಿಸುವ ಉದ್ದೇಶದಿಂದ ಆಧುನಿಕ ‘ಸರ್ವೇ ರೋವರ್‌’ ಉಪಕರಣಗಳನ್ನು ಖರೀದಿಸಲಾಗುವುದು. ₹18 ಕೋಟಿ ವೆಚ್ಚದಲ್ಲಿ ಎಲ್ಲಾ ತಾಲ್ಲೂಕುಗಳಿಗೂ 372 ಸರ್ವೇ ರೋವರ್‌ ಒದಗಿಸಲು ಟೆಂಡರ್‌ ಕರೆಯಲು ನಿರ್ಧರಿಸಲಾಗಿದೆ. ‘ಸರ್ವೇ ರೋವರ್‌’ನಿಂದ ಸರ್ವೇ ಕೆಲಸ ನಿಖರವಾಗಿ ಮತ್ತು ತ್ವರಿತವಾಗಿ ಮಾಡಲು ಸಾಧ್ಯ ಎಂದು ಹೇಳಿದರು.

ಡಿಜಿಟಲ್ ಪಾವತಿ ಮೂಲಕ ₹490 ಕೋಟಿ ಆದಾಯ ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್‌ ಪಾವತಿ ಪ್ರಮಾಣ ಹೆಚ್ಚಾಗಿದೆ. ವಿವಿಧ ರೀತಿಯ ತೆರಿಗೆಗಳು ಶುಲ್ಕಗಳನ್ನು ಡಿಜಿಟಲ್‌ ಪಾವತಿ ಮೂಲಕ ಸಂಗ್ರಹಿಸಲಾಗುತ್ತಿದೆ. ಈ ವರ್ಷ ₹490 ಕೋಟಿ ಆದಾಯ ಸಂಗ್ರಹಿಸಲಾಗಿದೆ ಎಂದು ಪ್ರಿಯಾಂಕ್‌ ಖರ್ಗೆ ತಿಳಿಸಿದರು. ಪಾಯಿಂಟ್‌ ಆಫ್‌ ಸೇಲ್‌ (ಪಿಒಎಸ್‌) ಗೂಗಲ್ ಪೇಟಿಎಂ ಮತ್ತು ಇತರ ಆನ್‌ಲೈನ್‌ ಪಾವತಿ ವಿಧಾನಗಳ ಮೂಲಕ ಜನರ ಹಣ ಪಾವತಿ ಮಾಡುತ್ತಿದ್ದಾರೆ ಎಂದರು.

‘ಪಂಚಮಿತ್ರ’ ವಾಟ್ಸ್‌ಆ್ಯಪ್‌ ಸಿಗುವ ಸೇವೆಗಳು:
ಸಾರ್ವಜನಿಕರು ಈ ಕೆಳಗಿನ ಸೇವೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಸೇವೆ ಪಡೆಯಬಹುದು– *ಕಟ್ಟಡ ನಿರ್ಮಾಣ ಪರವಾನಗಿ *ಹೊಸ ನೀರು ಸರಬರಾಜು ಸಂಪರ್ಕ *ನೀರು ಸರಬರಾಜಿನ ಸಂಪರ್ಕ ಕಡಿತ * ಕುಡಿಯುವ ನೀರಿನ ನಿರ್ವಹಣೆ *ಬೀದಿ ದೀಪದ ನಿರ್ವಹಣೆ *ಗ್ರಾಮ ನೈರ್ಮಲ್ಯ ನಿರ್ವಹಣೆ *ವ್ಯಾಪಾರ ಪರವಾನಗಿ *ಸ್ವಾಧೀನ ಪ್ರಮಾಣ ಪತ್ರ *ರಸ್ತೆ ಅಗೆಯುವುದಕ್ಕಾಗಿ ಅನುಮತಿ *ಕೈಗಾರಿಕೆ ಕೃಷಿ ಆಧಾರಿತ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮತಿ *ನಿರಾಕ್ಷೇಪಣಾ ಪತ್ರ *ಎಂನರೇಗಾ ಅಡಿ ಕಾರ್ಮಿಕರಿಗೆ ಜಾಬ್‌ ಕಾರ್ಡ್‌ ವಿತರಣೆ * ಕಾರ್ಮಿಕರಿಗೆ ಉದ್ಯೋಗ ಒದಗಿಸುವುದು *ಹೊಸ/ ಅಸ್ತಿತ್ವದಲ್ಲಿರುವ ದೂರಸಂಪರ್ಕ ಮೂಲಸೌಕರ್ಯ ಗೋಪುರಕ್ಕೆ ಅನುಮತಿ ನಿಯಮಿತಗೊಳಿಸುವಿಕೆ *ಹೊಸ/ ಅಸ್ತಿತವದಲ್ಲಿರುವ ಓವರ್‌ ಗ್ರೌಂಡ್ ಕೇಬಲ್‌ ಮೂಲಸೌಕರ್ಯ/ಭೂಗತ ಕೇಬಲ್ ಮೂಲ ಸೌಕರ್ಯಕ್ಕಾಗಿ ಅನುಮತಿ ನಿಯಮಿತಗೊಳಿಸುವಿಕೆ *ನಮೂನೆ 9/11ಎ *ನಮೂನೆ11 ಬಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.