ಮೈಸೂರು: ಕೆಎಸ್‌ಆರ್‌ಟಿಸಿ ಬಸ್‌ವೊಂದರಲ್ಲಿ ಪ್ರಯಾಣಿಸಿದ ಅಜ್ಜಿ–ಮೊಮ್ಮಗಳಿಗೆ ‘ಶಕ್ತಿ’ ಯೋಜನೆಯಲ್ಲಿ ಉಚಿತ ಟಿಕೆಟ್ ನೀಡಿದ ನಿರ್ವಾಹಕ, ಅವರು ತಂದಿದ್ದ 2 ಜೊತೆ ಗಿಳಿಗಳಿಗೆ (ಲವ್ ಬರ್ಡ್ಸ್) ₹ 444 ಪ್ರಯಾಣದರ ಪಡೆದಿದ್ದಾರೆ.
ಅವರು ನೀಡಿದ ಹಾಗೂ ಅಜ್ಜಿ–ಮೊಮ್ಮಗಳು ಗಿಳಿಗಳೊಂದಿಗೆ ಸಂಚರಿಸಿದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಬುಧವಾರ ಹಬ್ಬಿವೆ. ಇವರು ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸಿದ್ದಾರೆ.
ಗಿಳಿಗಳಿಗೆ ಮಕ್ಕಳಿಗೆ ಪಡೆಯುವಷ್ಟು ಪ್ರಯಾಣದರವನ್ನು (ಅಂದರೆ ತಲಾ ₹111) ನಿರ್ವಾಹಕ ಪಡೆದಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
‘ಗಿಳಿಗಳನ್ನು ಪಂಜರದಲ್ಲಿಟ್ಟು ಒಂದೇ ಸೀಟಿನಲ್ಲಿ ಇಟ್ಟುಕೊಂಡು ಕುಳಿತಿದ್ದೆವು. ಆದಾಗ್ಯೂ ಪ್ರಯಾಣದರ ಪಡೆಯಬೇಕೆಂದಿದ್ದರೆ ಒಂದು ಸೀಟಿನದ್ದು (ಒಬ್ಬರಿಗೆ ಆಗುವಷ್ಟು) ತೆಗೆದುಕೊಳ್ಳಬೇಕಿತ್ತು. ಅದರ ಬದಲಿಗೆ ನಾಲ್ಕೂ ಗಿಳಿಗಳಿಗೆ ಪ್ರತ್ಯೇಕವಾಗಿ ಪರಿಗಣಿಸಿದರು. ಇದು ಸರಿಯೇ?’ ಎಂದು ಮಹಿಳೆ ಪ್ರಶ್ನಿಸಿದರು ಎಂದು ತಿಳಿದುಬಂದಿದೆ.
ಹಕ್ಕಿಗಳನ್ನು ಮಕ್ಕಳೆಂದು ಪರಿಗಣಿಸಿ ಟಿಕೆಟ್ ಕೊಟ್ಟಿದ್ದಕ್ಕೆ ಸಹ ಪ್ರಯಾಣಿಕರು ಕೂಡ ಅಸಮಾಧಾನ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ನಿರ್ವಾಹಕರು, ನಿಮಮದಂತೆಯೇ ಪ್ರಯಾಣದರ ತೆಗೆದುಕೊಂಡಿದ್ದೇನೆ ಎಂದು ವಾದಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಯಾಣಿಸಿದವರ ವಿವರ ಗೊತ್ತಾಗಿಲ್ಲ. ಪ್ರತಿಕ್ರಿಯೆಗೆ ವಿಭಾಗೀಯ ನಿಯಂತ್ರಣಾಧಿಕಾರಿ ಲಭ್ಯವಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.