ADVERTISEMENT

ಕಾಮಗಾರಿಗಳಿಗೆ ಅನುದಾನ ಹಂಚಿಕೆ: ಸರ್ಕಾರದ ಮಾರ್ಗಸೂಚಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2023, 20:33 IST
Last Updated 7 ಜೂನ್ 2023, 20:33 IST
ವಿಧಾನಸೌಧ
ವಿಧಾನಸೌಧ   

ಬೆಂಗಳೂರು: ರಾಜ್ಯದಲ್ಲಿ ಅನುಷ್ಠಾನವಾಗುತ್ತಿರುವ ಎಲ್ಲ ರೀತಿಯ ನಿರ್ಮಾಣ ಮತ್ತು ಸಿವಿಲ್‌ ಕಾಮಗಾರಿಗಳ ಪೈಕಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಮುಂದುವರಿಸಲು ಅನುದಾನ ಹಂಚಿಕೆ ಮಾಡುವ ಸಂಬಂಧ ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.

ಈಗಾಗಲೇ ಅನುಮೋದನೆಗೊಂಡ ಕಾಮಗಾರಿಗಳಲ್ಲಿ ಬಾಕಿ ಉಳಿದಿರುವ ಕೆಲಸಗಳಿಗೆ, ಆಯವ್ಯಯದಲ್ಲಿ ಒದಗಿಸಿದ ಮೊತ್ತಕ್ಕಿಂತ ಕಡಿಮೆ ಇದ್ದಲ್ಲಿ ಮುಂದುವರೆದ ಕಾಮಗಾರಿಗಳಿಗೆ ಎಷ್ಟು ಪ್ರಮಾಣದ ಅನುದಾನ ಹಂಚಿಕೆ ಮಾಡಬೇಕು ಎಂಬ ವಿವರವನ್ನು ನೀಡಿದೆ.

ಆ ಪ್ರಕಾರ, ಕಾಮಗಾರಿಗಳ ಬಾಕಿ ಕಾರ್ಯಭಾರದ ಮೊತ್ತವು ಆಯವ್ಯಯದಲ್ಲಿ ನಿಗದಿಯಾದ ಅನುದಾನದ ಶೇ 50 ಕ್ಕಿಂತ ಕಡಿಮೆ ಇದ್ದಲ್ಲಿ ಪೂರ್ಣ ಮೊತ್ತವನ್ನು ಹಂಚಿಕೆ ಮಾಡಬೇಕು.

ADVERTISEMENT

ಒಂದು ವೇಳೆ ಆಯವ್ಯಯದಲ್ಲಿ ಒದಗಿಸಿದ ಅನುದಾನದ ಶೇ 50 ಕ್ಕಿಂತ ಹೆಚ್ಚಿಗೆ ಇದ್ದು ಶೇ 100 ಕ್ಕಿಂತ ಕಡಿಮೆ ಇದ್ದಲ್ಲಿ ಆಯವ್ಯಯದ ಅನುದಾನದಲ್ಲಿ ಕನಿಷ್ಠ ಶೇ 60 ರಷ್ಟು ಮೊತ್ತವನ್ನು ಹಂಚಿಕೆ ಮಾಡಬೇಕು.

ಆಯವ್ಯಯದಲ್ಲಿ ಒದಗಿಸಿದ ಅನುದಾನಕ್ಕಿಂತ ಅಧಿಕವಾಗಿದ್ದಲ್ಲಿ ಆಯವ್ಯಯದ ಅನುದಾನದಲ್ಲಿ ಕನಿಷ್ಠ ಶೇ 80 ರಷ್ಟು ಮೊತ್ತವನ್ನು ಮುಂದುವರೆದ ಕಾಮಗಾರಿಗಳಿಗೆ ಹಂಚಿಕೆ ಮಾಡಬೇಕು. ಅಲ್ಲದೇ, ಮುಂದುವರೆದ ಕಾಮಗಾರಿಗಳಿಗೆ ಅನುದಾನ ಹಂಚಿಕೆ ಮಾಡುವಾಗ, ಅದೇ  ವರ್ಷದಲ್ಲಿ ಮುಕ್ತಾಯಗೊಳ್ಳಬೇಕು ಎಂದು ಕಾಲಾವಕಾಶ ನಿಗದಿ ಮಾಡಿದ್ದರೆ, ಪೂರ್ಣ ಮೊತ್ತವನ್ನು ಆದ್ಯತೆ ಮೇಲೆ ಕಾಯ್ದಿರಿಸಬೇಕು.

₹10 ಕೋಟಿ ಮೊತ್ತದವರೆಗಿನ ಕಾಮಗಾರಿಗಳಿಗೆ ಪೂರ್ಣ ಅನುದಾನ ಒಂದೇ ಆರ್ಥಿಕ ವರ್ಷದಲ್ಲಿ ಒದಗಿಸಬೇಕು. ₹10 ಕೋಟಿ ಮೀರಿದ ಮತ್ತು ₹100 ಕೋಟಿವರೆಗಿನ ಕಾಮಗಾರಿಗಳಿಗೆ ಮೊದಲನೇ ಆರ್ಥಿಕ ವರ್ಷದಲ್ಲಿ ಶೇ 40, ಎರಡನೇ ಆರ್ಥಿಕ ವರ್ಷದಲ್ಲಿ ಶೇ 60 ರಷ್ಟು ಮೊತ್ತವನ್ನು ಹಂಚಿಕೆ ಮಾಡಬೇಕು. 

₹100 ಕೋಟಿ ಮೊತ್ತ ಮೀರಿದ ಎಲ್ಲ ಕಾಮಗಾರಿಗಳಿಗೆ ಮೊದಲನೇ ಅರ್ಥಿಕ ವರ್ಷದಲ್ಲಿ ಶೇ 30, ಎರಡನೇ ಆರ್ಥಿಕ ವರ್ಷದಲ್ಲಿ ಶೇ 40, ಮೂರನೇ ಆರ್ಥಿಕ ವರ್ಷದಲ್ಲಿ ಶೇ 30 ರಷ್ಟು ಅನುದಾನ ಒದಗಿಸಬೇಕು ಎಂದು ಆಯಾ ಇಲಾಖೆಗಳಿಗೆ ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.