ಬೆಂಗಳೂರು: ‘ರಾಜ್ಯದಲ್ಲಿ ಪರಿಸರಸ್ನೇಹಿ ಇಂಧನ (ಗ್ರೀನ್ ಎನರ್ಜಿ) ಕ್ಷೇತ್ರದಲ್ಲಿ ಹೂಡಿಕೆಗೆ ಹೆಚ್ಚಿನ ಅವಕಾಶವಿದ್ದು, ಇಂಧನ ಇಲಾಖೆಯ ಜತೆಗೂಡಿ ಸೂಕ್ತ ನೀತಿ ರೂಪಿಸಲಾಗುವುದು. ಈ ಉದ್ದೇಶದಿಂದ ಇಂಧನ ಸಚಿವ ಕೆ.ಜೆ. ಜಾರ್ಜ್ ಜತೆ ಉದ್ಯಮಿಗಳು ಮತ್ತು ಆಸಕ್ತ ಹೂಡಿಕೆದಾರರ ಸಭೆಯನ್ನು ಶೀಘ್ರ ಏರ್ಪಡಿಸಲಾಗುವುದು’ ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಖನಿಜ ಭವನದಲ್ಲಿ ಮಂಗಳವಾರ ನಡೆದ ಗ್ರೀನ್ ಎನರ್ಜಿ ಮತ್ತು ಕೋರ್ ಮ್ಯಾನುಫ್ಯಾಕ್ಚರಿಂಗ್ ವಲಯಗಳಿಗೆ ಸಂಬಂಧಪಟ್ಟ ‘ವಿಷನ್ ಗ್ರೂಪ್’ಗಳ ಮೊದಲ ಸಭೆಯಲ್ಲಿ ಅವರು ಈ ವಿಷಯ ಹಂಚಿಕೊಂಡರು.
ಸಭೆಯಲ್ಲಿದ್ದ ಉದ್ಯಮಿಗಳು ಗ್ರೀನ್ ಎನರ್ಜಿ ಕ್ಷೇತ್ರದಲ್ಲಿರುವ ಸಾಧ್ಯತೆ, ಅಗತ್ಯ, ಬೇಡಿಕೆ, ನೀತಿ ನಿರೂಪಣೆ, ರಿಯಾಯಿತಿ ಇತ್ಯಾದಿ ಕುರಿತು ಸಲಹೆ-ಸೂಚನೆ ನೀಡಿದರು.
‘ಅವಾಡಾ’ ಕಂಪನಿಯ ಸಿಇಒ ಕಿಶೋರ್ ನಾಯರ್, ‘ಗ್ರೀನ್ ಹೈಡ್ರೋಜನ್ ಉತ್ಪಾದನೆಗಾಗಿ ರಾಜ್ಯ ಸರ್ಕಾರದ ಜತೆ ನಾವು ₹45 ಸಾವಿರ ಕೋಟಿ ಹೂಡಿಕೆಯ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಸೂಕ್ತ ಪ್ರೋತ್ಸಾಹಕ ಭತ್ಯೆ ಮತ್ತು ನೀತಿ ಜಾರಿಗೆ ತಂದರೆ ನಾವು ಎಲೆಕ್ಟ್ರೋಲೈಟ್ ಮತ್ತು ಬ್ಯಾಟರಿ ಉತ್ಪಾದನೆಯ ಕಡೆಗೂ ಗಮನ ಹರಿಸಬಹುದು’ ಎಂದರು.
‘ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಇದರಿಂದ, ಪರಿಸರಸ್ನೇಹಿ ಮೆಥನಾಲ್ ಮತ್ತು ಜಲಜನಕದ (ಗ್ರೀನ್ ಹೈಡ್ರೋಜನ್) ಉತ್ಪಾದನೆಗೂ ಆದ್ಯತೆ ನೀಡಬಹುದು. ರಾಜಸ್ಥಾನ ಮತ್ತು ಮಹಾರಾಷ್ಟ್ರ ಸರ್ಕಾರಗಳು ಈಗಾಗಲೇ ಈ ಸಂಬಂಧ ನೀತಿಗಳನ್ನು ಜಾರಿಗೆ ತಂದಿವೆ’ ಎಂದರು.
ಇದಕ್ಕೆ ಸ್ಪಂದಿಸಿದ ಸಚಿವರು, ‘ಉದ್ಯಮಿಗಳು 5-6 ದಶಲಕ್ಷ ಡಾಲರ್ ಹಣ ಮತ್ತು 5 ಗಿಗಾವ್ಯಾಟ್ ವಿದ್ಯುತ್ತಿನ ಅಗತ್ಯದ ಬಗ್ಗೆ ಗಮನಸೆಳೆದಿದ್ದಾರೆ. ಇದಕ್ಕೆ ಮಂಗಳೂರು ಬಂದರಿನ ಸುತ್ತಮುತ್ತಲಿನ 20 ಕಿ.ಮೀ. ಪ್ರದೇಶ ಸೂಕ್ತ ತಾಣ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಿದೆ’ ಎಂದರು.
ಸಭೆಯಲ್ಲಿ ರೆನ್ಯೂ ಪವರ್ ಅಧ್ಯಕ್ಷ ವಿವೇಕ್ ಸಿಂಘ್ಲಾ, ಎಮ್ವೀ ಸೋಲಾರ್‌ನ ಸ್ಥಾಪಕ ಡಿ.ವಿ. ಮಂಜುನಾಥ, ಆ್ಯಮ್-ಪ್ಲಸ್ ಸಿಇಒ ಶರದ್ ಪುಂಗಾಲಿಯಾ ಭಾಗವಹಿಸಿದ್ದರು.
ಸಿಮೆಂಟ್ ಉಕ್ಕು ವಲಯದತ್ತ ಗಮನ’
‘ಕೋರ್ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ‘ವಿಷನ್ ಗ್ರೂಪ್’ ಸಭೆ ನಡೆಸಿದ ಸಚಿವರು ರಾಜ್ಯದಲ್ಲಿ ಉಕ್ಕು ಮತ್ತು ಸಿಮೆಂಟ್ ಉತ್ಪಾದನೆಗೆ ಇರುವ ಅವಕಾಶಗಳ ಬಗ್ಗೆಯೂ ಚರ್ಚಿಸಿದರು. ಈ ಸಭೆಯಲ್ಲಿ ಬಲ್ದೋಟ ಸಮೂಹದ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಕುಮಾರ್ ಸಂಡೂರು ಮ್ಯಾಂಗನೀಸ್ ಆ್ಯಂಡ್ ಐರನ್ ಓರ್ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಬಹಿರಜಿ ಘೋರ್ಷಡೆ ಅಲ್ಟ್ರಾಟೆಕ್ ಮುಖ್ಯಸ್ಥ ರಾಜನಾರಾಯಣನ್ ಜಿಂದಾಲ್ ಸ್ಟೀಲ್ ವರ್ಕ್ಸ್ ಸಿಇಒ ಜಯಂತ್ ಆಚಾರ್ಯ ಭಾಗವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.