ಹಾವೇರಿ: ಮುಂಗಾರಿನಲ್ಲಿ ಜಿಲ್ಲೆಯ 19 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿತ್ತು. ಇತ್ತೀಚೆಗೆ ಸತತವಾಗಿ ಸುರಿದ ಮಳೆಯಿಂದಾಗಿ ಸುಮಾರು ಒಂದು ಸಾವಿರ ಹೆಕ್ಟೇರ್‌ನಲ್ಲಿ ಬೆಳೆ ಹಾನಿಗೀಡಾಗಿದ್ದು, ರೈತರು ಆತಂಕಗೊಂಡಿದ್ದಾರೆ.
ಜಿಲ್ಲೆಯ ಹಾವೇರಿ, ರಾಣೆಬೆನ್ನೂರು, ಶಿಗ್ಗಾವಿ ಮತ್ತು ಬ್ಯಾಡಗಿ ತಾಲ್ಲೂಕಿನಲ್ಲಿ ರೈತರು ಹೆಚ್ಚಾಗಿ ಶೇಂಗಾ ಬೆಳೆಯುತ್ತಾರೆ. ಈ ವರ್ಷ ಕೊಯ್ಲಿಗೆ ಬಂದ ಸಂದರ್ಭದಲ್ಲಿಯೇ ಮಳೆ ಸುರಿದಿದ್ದರಿಂದ ಬೆಳೆ ನೆಲ ಕಚ್ಚಿದೆ. ಅಳಿದುಳಿದ ಶೇಂಗಾವನ್ನು ಒಣಗಿಸಿ ಮಾರುಕಟ್ಟೆಗೆ ಸಾಗಿಸುತ್ತಿದ್ದಾರೆ.
ಗುಣಮಟ್ಟದ ಶೇಂಗಾ ಬೆಳೆದಿರುವ ರೈತರೂ ಜಿಲ್ಲೆಯಲ್ಲಿದ್ದಾರೆ. ಅವರ ಸಂಖ್ಯೆ ಕಡಿಮೆ ಇದೆ.
ಜಿಲ್ಲೆಯ ಎಪಿಎಂಸಿಗಳಲ್ಲಿ ಪ್ರತಿ ಕ್ವಿಂಟಲ್‌ಗೆ ₹3,000ರಿಂದ ₹6,500 ಬೆಲೆ ಇದೆ. ಟೊಳ್ಳು ಕಾಯಿಗಳಿಗೆ ಬೇಡಿಕೆ ಕಡಿಮೆಯಿದ್ದು, ಬೆಲೆಯೂ ಗಣನೀಯವಾಗಿ ಕುಸಿಯುತ್ತಿದೆ. ಗಟ್ಟಿ ಕಾಯಿಗಳಿಗೆ ಬೇಡಿಕೆಯಿದ್ದು, ಇದಕ್ಕೆ ದರ ಹೆಚ್ಚಿದೆ.
‘ಕೊಯ್ಲು ಹಂತಕ್ಕೆ ಬಂದಿದ್ದ ಶೇಂಗಾ ಕಾಯಿಗಳು ಮಳೆಯಿಂದಾಗಿ ಮೊಳಕೆಯೊಡೆದಿವೆ. ಈ ವರ್ಷ ಶೇಂಗಾ ಬೆಳೆದು ನಷ್ಟ ಅನುಭವಿಸಿದೆವು’ ಎಂದು ಬರದೂರಿನ ರೈತ ಚಂದ್ರಪ್ಪ ಅಳಲು ತೋಡಿಕೊಂಡರು.
‘ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಶೇಂಗಾ ಬೆಳೆಯನ್ನು ರೈತರು ಮಾರುಕಟ್ಟೆಗೆ ಸಾಗಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ತೆರೆಯಲು ಸಿದ್ಧತೆ ನಡೆದಿದೆ’ ಎಂದು ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ತಿಳಿಸಿದರು.
ಧಾರಣೆ ಕುಸಿತ
ಬಳ್ಳಾರಿ: ಇಲ್ಲಿನ ಎಪಿಎಂಸಿಯಲ್ಲಿ ಕಳೆದ 20 ದಿನದ ಅಂತರದಲ್ಲಿ ಶೇಂಗಾ ಬೆಲೆಯು ಕ್ವಿಂಟಲ್‌ಗೆ ₹2,000ದಷ್ಟು ಕುಸಿದಿದೆ.
ಗುಜರಾತ್‌ನಲ್ಲಿ ಈ ವರ್ಷ ಶೇಂಗಾ ಫಸಲು ಸಮೃದ್ಧವಾಗಿದೆ. ಈ ಸರಕು ಮಾರುಕಟ್ಟೆಗೆ ಬಂದಿರುವುದರಿಂದ ಸ್ಥಳೀಯ ಶೇಂಗಾದ ಬೆಲೆ ಇಳಿಕೆಯಾಗಿದೆ. ಅಲ್ಲದೆ, ಕಳೆದ ಮೂರು ವಾರದಿಂದ ಬಳ್ಳಾರಿ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ. ಇದರಿಂದ ಕಡಲೆಕಾಯಿ ಫಸಲು ಹಾಳಾಗಿದೆ. ಹೀಗಾಗಿ, ದರ ಇಳಿಕೆಯಾಗಿದೆ ಎಂದು ವರ್ತಕರು ಹೇಳುತ್ತಾರೆ.
ಇಲ್ಲಿನ ಎಪಿಎಂಸಿಗೆ ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಸೇರಿ ಆಂಧ್ರಪ್ರದೇಶದ ಕರ್ನೂಲು, ಅನಂತಪುರ ಜಿಲ್ಲೆಯಿಂದಲೂ ಶೇಂಗಾ ಪೂರೈಕೆಯಾಗುತ್ತದೆ. ದಿನವೊಂದಕ್ಕೆ 6 ಸಾವಿರದಿಂದ 12 ಸಾವಿರ ಚೀಲ ಆವಕವಾಗುತ್ತದೆ.
ಒಣಗಿಸಲು ಆಗದೆ ಅಸಹಾಯಕತೆ
ಮಳೆಯಿಂದಾಗಿ ಗದಗ ಜಿಲ್ಲೆಯ ಶೇಂಗಾ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಯಿ ಒಣಗಿಸಲು ಸಾಧ್ಯವಾಗುತ್ತಿಲ್ಲ.
ಲಕ್ಷ್ಮೇಶ್ವರ ತಾಲ್ಲೂಕಿನ ರೈತರು ಈ ಬಾರಿ ಬಂಪರ್ ಇಳುವರಿಯ ನಿರೀಕ್ಷೆಯಲ್ಲಿದ್ದರು. ಒಂದು ಬಳ್ಳಿಯಲ್ಲಿ 70–80 ಕಾಯಿ ಬಿಟ್ಟಿವೆ. ಆದರೆ, ಸುರಿಯುತ್ತಿರುವ ಮಳೆಯು ಅವರಲ್ಲಿ ಆತಂಕ ಹೆಚ್ಚಿಸಿದೆ. ಮಳೆಯಿಂದ ಶೇಂಗಾ ಬಳ್ಳಿಯೂ ಕೊಳೆಯಲಿದೆ ಎಂದು ಹೇಳುತ್ತಾರೆ.
‘ಸ್ಥಳೀಯ ಮಾರುಕಟ್ಟೆಯಲ್ಲಿ ಬಳ್ಳಿ ಶೇಂಗಾ ಬೆಲೆಯು ಕ್ವಿಂಟಲ್‌ಗೆ ₹6,000 ಇದೆ. ಮಳೆ ಕಡಿಮೆಯಾದರೆ ಹರಗಲು ಅನುಕೂಲವಾಗುತ್ತದೆ. ಇಲ್ಲದಿದ್ದರೆ ಕಷ್ಟವಾಗಲಿದೆ’ ಎಂದು ಬಾಲೆಹೊಸೂರು ಗ್ರಾಮದ ರೈತ ಕೇಶವ ಕಟ್ಟಿಮನಿ ತಿಳಿಸಿದರು.
ಗುಣಮಟ್ಟ ಕುಸಿತ
ವಿಜಯನಗರ ಜಿಲ್ಲೆಯಲ್ಲಿ ಅಧಿಕ ಮಳೆಯಿಂದಾಗಿ ಸುಮಾರು 30 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಶೇಂಗಾ ಬೆಳೆ ನಾಶವಾಗಿದೆ. ಶೇಂಗಾ ಗುಣಮಟ್ಟವೂ ಕುಸಿಯುವಂತಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶರಣಪ್ಪ ಮುದುಗಲ್ ತಿಳಿಸಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಕೊಟ್ಟೂರು ಎಪಿಎಂಸಿಯಲ್ಲಿ ಶೇಂಗಾ ಧಾರಣೆಯು ಕ್ವಿಂಟಲ್‌ಗೆ ₹7,200 ಇತ್ತು. ಸದ್ಯ ₹6,710ಕ್ಕೆ ಕುಸಿದಿದೆ.
ಉದುರಿದ ಕಾಯಿ
ಧಾರವಾಡ: ಮುಂಗಾರಿನಲ್ಲಿ ಜಿಲ್ಲೆಯ 16,450 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿತ್ತು. ಮಳೆಯಿಂದಾಗಿ ಆರು ಸಾವಿರ ಹೆಕ್ಟೇರ್‌ಗೂ ಹೆಚ್ಚು ಶೇಂಗಾ ಬೆಳೆ ಹಾನಿಯಾಗಿದೆ.
ಕುಂದಗೋಳ, ಹುಬ್ಬಳ್ಳಿ, ಧಾರವಾಡ ತಾಲ್ಲೂಕಿನಲ್ಲಿ ಹೆಚ್ಚು ಬಿತ್ತನೆ ಮಾಡಲಾಗಿತ್ತು.
‘ನಾಲ್ಕು ಎಕರೆಯಲ್ಲಿ ಶೇಂಗಾ ಬೆಳೆದಿದ್ದೆ. ಫಸಲು ಚೆನ್ನಾಗಿತ್ತು. ಮಳೆಯಿಂದಾಗಿ ಕಾಯಿ ಉದುರಿ ಸ್ವಲ್ಪ ನಷ್ಟವಾಯಿತು. 60 ಕ್ವಿಂಟಲ್ ಫಸಲು ಬರಬೇಕಾಗಿತ್ತು. ಕೇವಲ, 40 ಕ್ವಿಂಟಲ್ ಫಸಲು ಸಿಕ್ಕಿದೆ’ ಎಂದು ಧಾರವಾಡ ತಾಲ್ಲೂಕಿನ ಬ್ಯಾಹಟ್ಟಿಯ ಬೆಳೆಗಾರ ದ್ಯಾವನಗೌಡ ಹುಯಿಲಗೋಳ ‘ಪ್ರಜಾವಾಣಿ’ಗೆ ತಿಳಿಸಿದರು.
ನೀರುಗಾಯಿ ಸೃಷ್ಟಿಸಿದ ಸಂಕಟ
ಚಿತ್ರದುರ್ಗ: ಕೊಯ್ಲಿನ ವೇಳೆ ಸುರಿದ ಮಳೆಯಿಂದಾಗಿ ಶೇಂಗಾದ ಗುಣಮಟ್ಟ ಕುಸಿದಿದೆ. ಶೇಂಗಾ ಬೀಜ ನೀರುಗಾಯಿ ಆಗಿದೆ. ಇದರಿಂದ ಕನಿಷ್ಠ ಬೆಂಬಲ ಬೆಲೆಯಡಿ ತೆರೆದಿರುವ ಖರೀದಿ ಕೇಂದ್ರದಲ್ಲಿನ ಗುಣಮಟ್ಟದ ಪರಿಶೀಲನೆ ವೇಳೆ ತಿರಸ್ಕೃತಗೊಳ್ಳುತ್ತಿದೆ. ಜಿಲ್ಲೆಯಾದ್ಯಂತ ಈ ಬಾರಿ 1.07 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಲಾಗಿದೆ. ಚಳ್ಳಕೆರೆ ಚಿತ್ರದುರ್ಗ ಮೊಳಕಾಲ್ಮುರು ಭಾಗದಲ್ಲಿ ಅತಿಹೆಚ್ಚು ಬಿತ್ತನೆಯಾಗಿದೆ. ಮಳೆಯಿಂದಾಗಿ ಕಾಯಿ ಕೊಳೆತಂತಾಗಿ ಬಣ್ಣ ಸೇರಿದಂತೆ ಗುಣಮಟ್ಟ ಕಳೆದುಕೊಂಡಿದೆ. ಕೆಲವೆಡೆ ಕೊಯ್ಲು ಮಾಡಿದಾಗ ಗಿಡ ಮಾತ್ರ ಬರುತ್ತಿದ್ದು ಕಾಯಿಗಳು ಭೂಮಿಯಲ್ಲೇ ಉಳಿಯುತ್ತಿವೆ. ರೈತರು ಮುಕ್ತ ಮಾರುಕಟ್ಟೆಯಲ್ಲಿ ಗುಣಮಟ್ಟಕ್ಕೆ ಅನುಗುಣವಾಗಿ ಕ್ವಿಂಟಲ್‌ಗೆ ₹2000ದಿಂದ ₹5000ವರೆಗೂ ಮಾರಾಟ ಮಾಡುತ್ತಿದ್ದಾರೆ.
- 3 ಖರೀದಿ ಕೇಂದ್ರ
ಕೊಪ್ಪಳ: ಜಿಲ್ಲೆಯಲ್ಲಿ 6000 ಹೆಕ್ಟೇರ್‌ನಲ್ಲಿ ಶೇಂಗಾ ಬೆಳೆಯಲಾಗಿದೆ. ಪ್ರತಿ ಎಕರೆಗೆ ಮೂರರಿಂದ ನಾಲ್ಕು ಕ್ವಿಂಟಲ್ ಇಳುವರಿ ಬಂದಿದೆ. ‘ಜಿಲ್ಲೆಯಲ್ಲಿ ಮೂರು ಕಡೆ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ಆರಂಭಿಸಲಾಗಿದ್ದರೂ ಖರೀದಿ ಕಡಿಮೆಯಾಗುವ ಆತಂಕವಿದೆ. 90 ದಿನದವರೆಗೆ ಕಾಲಾವಕಾಶ ಇದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ತಿಳಿಸಿದರು. ಕೆಲವಡೆ ಹಾನಿ: ರಾಯಚೂರು ಜಿಲ್ಲೆಯ ರಾಯಚೂರು ಹಾಗೂ ದೇವದುರ್ಗ ತಾಲ್ಲೂಕಿನಲ್ಲಿ ಕೆಲವೆಡೆ ಶೇಂಗಾ ಬೆಳೆಯಲಾಗಿದೆ. ಮಳೆಯಿಂದಾಗಿ ಕೆಲವು ಪ್ರದೇಶದಲ್ಲಿ ಬೆಳೆ ಹಾಳಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ಕನಿಷ್ಠ ₹3285 ಹಾಗೂ ಗರಿಷ್ಠ ₹4155ರ ವರೆಗೆ ಮಾರಾಟವಾಗುತ್ತಿದೆ.
₹6783 ಬೆಂಬಲ ಬೆಲೆ ನಿಗದಿ
ಬೆಂಗಳೂರು: ಪ್ರತಿ ಕ್ವಿಂಟಲ್ ಶೇಂಗಾಕ್ಕೆ ₹6783 ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಒಬ್ಬ ರೈತರಿಂದ ಪ್ರತಿ ಎಕರೆಗೆ ಮೂರು ಕ್ವಿಂಟಲ್‌ನಂತೆ ಗರಿಷ್ಠ 15 ಕ್ವಿಂಟಲ್ ಖರೀದಿಸಲಾಗುತ್ತದೆ. ಬೆಳೆಗಾರರಿಂದ ಖರೀದಿಸುವುದಕ್ಕೂ ಮೊದಲು ‘ಫ್ರೂಟ್’ ತಂತ್ರಾಂಶದಲ್ಲಿ ಅವರ ಹೆಸರು ನೋಂದಾಯಿಸಿಕೊಳ್ಳಬೇಕಿದೆ. ರೈತರ ಹೆಸರು ನೋಂದಣಿಗೆ 45 ದಿನದ ಕಾಲಾವಕಾಶ ನೀಡಲಾಗಿದೆ. ನೋಂದಣಿಯಾದ ಬಳಿಕ 90 ದಿನದವರೆಗೆ ಖರೀದಿ ಮಾಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.