ADVERTISEMENT

ಗ್ರಾ.ಪಂ. ಸಿಬ್ಬಂದಿ, ಸದಸ್ಯರ ಬೇಡಿಕೆ ಈಡೇರಿಸಿ: ಸಿ.ಎಂ, ಸಚಿವರಿಗೆ ಗೂಳಿಗೌಡ ಪತ್ರ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 16:32 IST
Last Updated 8 ಅಕ್ಟೋಬರ್ 2024, 16:32 IST
ದಿನೇಶ್‌ ಗೂಳಿಗೌಡ
ದಿನೇಶ್‌ ಗೂಳಿಗೌಡ   

ಬೆಂಗಳೂರು: ‘ಗ್ರಾಮ ಪಂಚಾಯತಿ ಅಧಿಕಾರಿ, ಸಿಬ್ಬಂದಿ ಮತ್ತು ಸದಸ್ಯರ ಬೇಡಿಕೆಗಳನ್ನು ಪರಿಶೀಲಿಸಿ ವರದಿ ಸಲ್ಲಿಸಲು ತಜ್ಞರ ತಂಡ ರಚಿಸಬೇಕು’ ಎಂದು ಒತ್ತಾಯಿಸಿ ವಿಧಾನ ಪರಿಷತ್ ಕಾಂಗ್ರೆಸ್‌ ಸದಸ್ಯ ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಪಂಚಾಯತ್ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ.

‘ಅಧಿಕಾರ ವಿಕೇಂದ್ರೀಕರಣ ಸಾಧ್ಯವಾಗುತ್ತಿರುವುದು ಗ್ರಾಮ ಪಂಚಾಯತಿಗಳಿಂದ. ವಸತಿ ಯೋಜನೆ, ಕುಡಿಯುವ ನೀರು, ಬೀದಿ ದೀಪಗಳು ಮತ್ತು ನೈರ್ಮಲ್ಯ ನಿರ್ವಹಣೆ ಜತೆಗೆ ಸರ್ಕಾರದ ವಿವಿಧ 29 ಸೇವೆಗಳನ್ನು ಗ್ರಾಮ ಪಂಚಾಯತಿಗಳು ನೀಡುತ್ತಿವೆ. ಗ್ರಾಮ ಪಂಚಾಯತಿಗಳ ಮೇಲೆ ಕಾರ್ಯದೊತ್ತಡ ಹೆಚ್ಚು ಇದೆ. ಇದನ್ನು ನಿರ್ವಹಿಸುವ ಸಿಬ್ಬಂದಿಯ ಬೇಡಿಕೆಗಳನ್ನು ಈಡೇರಿಸುವುದು ಅತ್ಯಗತ್ಯ’ ಎಂದು ಪತ್ರದಲ್ಲಿ ಹೇಳಿದ್ದಾರೆ.

‘ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಧಿಕಾರಿಗಳು, ಸಿಬ್ಬಂದಿ ಮತ್ತು ಸದಸ್ಯರು ನಾಲ್ಕು ದಿನಗಳಿಂದ ಕೆಲಸ ಸ್ಥಗಿತಗೊಳಿಸಿ ಧರಣಿ ನಡೆಸುತ್ತಿದ್ದಾರೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಎರಡು ದಿನಗಳಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಬೇಡಿಕೆಗಳು ನ್ಯಾಯಯುತವಾಗಿದ್ದು, ಅವುಗಳ ಈಡೇರಿಕೆಗೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ADVERTISEMENT

‘ಗ್ರಾಮ ಪಂಚಾಯತಿಗಳಲ್ಲಿ ನಾಲ್ಕು ದಿನಗಳಿಂದ ಎಲ್ಲ ಸ್ವರೂಪದ ಕೆಲಸ ಸ್ಥಗಿತವಾಗಿವೆ. ಜನರಿಗೆ ತೊಂದರೆಯಾಗುತ್ತಿದೆ. ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಗ್ರಾಮ ಪಂಚಾಯತ್ ರಾಜ್‌ ಸದಸ್ಯರ ಒಕ್ಕೂಟ, ಪಿಡಿಒ ಕ್ಷೇಮಾಭಿವೃದ್ಧಿ ಒಕ್ಕೂಟ ಮತ್ತು ನೌಕರರ ಸಂಘಗಳ ಪದಾಧಿಕಾರಿಗಳನ್ನು ಕರೆದು ತಕ್ಷಣವೇ ಸಭೆ ನಡೆಸಬೇಕು’ ಎಂದು ಕೋರಿದ್ದಾರೆ.

ಪ್ರತಿಭಟನಾನಿರತರ ಕೆಲ ಬೇಡಿಕೆಗಳು

  • ಗ್ರಾಮ ಪಂಚಾಯತಿ ನೌಕರರಿಗೆ ಪಂಚಾಯತ್ ರಾಜ್‌ ಇಲಾಖೆಯಿಂದಲೇ ವೇತನ ಪಾವತಿಸಬೇಕು. ಇಎಸ್‌ಐ ಇಲ್ಲವೇ ₹5 ಲಕ್ಷದ ಆರೋಗ್ಯ ವಿಮೆ ಮತ್ತು ಪಿಎಫ್‌ ಸವಲತ್ತು ಒದಗಿಸಬೇಕು ‌

  • ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ಇತರ ಅಧಿಕಾರಿ ಸಿಬ್ಬಂದಿಯ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು. ಕಚೇರಿ ನಿರ್ವಹಣಾ ಕೈಪಿಡಿ ರಚಿಸಬೇಕು

  • ರಾಜ್ಯ ಸರ್ಕಾರದ ಲಾಂಛನ ಬಳಸಬಾರದು ಎಂಬ ಆದೇಶ ಇರುವ ಕಾರಣ ಪಂಚಾಯತ್ ರಾಜ್‌ ಸಂಸ್ಥೆಗಳಿಗೆ ಪ್ರತ್ಯೇಕ ಲಾಂಛನ ರಚಿಸಬೇಕು

  • ಗ್ರಾಮ ಪಂಚಾಯತಿ ಸದಸ್ಯರ ಗೌರವಧನವನ್ನು ₹10000ಕ್ಕೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಗೌರವಧನವನ್ನು ₹15000 ಮತ್ತು ₹12000ಕ್ಕೆ ಹೆಚ್ಚಿಸಬೇಕು. ಸದಸ್ಯರ ಸಭಾ ಭತ್ಯೆಯನ್ನು ₹1000ಕ್ಕೆ ಏರಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.