ಬೆಂಗಳೂರು: ‘ಗೃಹಜ್ಯೋತಿ’ ಯೋಜನೆಯಡಿ ಅರ್ಜಿ ಸಲ್ಲಿಸಲು ಇದೇ 26 ರವರೆಗೆ ಅವಕಾಶ ಇದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ವಿಧಾನಸಭೆಯಲ್ಲಿ ಬುಧವಾರ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಎತ್ತಿದ ಪ್ರಶ್ನೆಗೆ ಸಮಜಾಯಿಷಿ ನೀಡಿದರು.
ಜುಲೈ ತಿಂಗಳ ಬಿಲ್ ಆಗಸ್ಟ್‌ಗೆ ಬರಲಿದೆ. ಈವರೆಗೆ 2.14 ಕೋಟಿ ಗ್ರಾಹಕರ ಪೈಕಿ 1.3 ಕೋಟಿ ಗ್ರಾಹಕರು ಅರ್ಜಿ ಹಾಕಿದ್ದಾರೆ. ಕುಟೀರ ಜ್ಯೋತಿ, ಅಮೃತಭಾಗ್ಯ ಉಚಿತ ವಿದ್ಯುತ್ ಯೋಜನೆಗಳ ಫಲಾನುಭವಿಗಳು ಸುಮಾರು 40 ಲಕ್ಷ ಮಂದಿ ಇದ್ದಾರೆ. ಅವರೂ ಇದೇ ತಿಂಗಳ 26, 27ರ ಒಳಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.
‘ಅರ್ಜಿ ಸಲ್ಲಿಕೆಗೆ ಕಟ್ ಆಫ್ ದಿನಾಂಕ ಇಲ್ಲ. ಅರ್ಜಿ ಸಲ್ಲಿಸುವಂತೆ ಯಾರಿಗೂ ಒತ್ತಾಯ ಮಾಡಿಲ್ಲ. ಎಲ್ಲ ಅರ್ಹರಿಗೂ ಉಚಿತ ವಿದ್ಯುತ್ ಕೊಡಲು ಪ್ರಯತ್ನಿಸುತ್ತೇವೆ. ಗೃಹಜ್ಯೋತಿ ಅಡಿ ಅರ್ಜಿ ಸಲ್ಲಿಸದವರಿಗೆ ಅದಾಲತ್ ಮೂಲಕ ಅರ್ಜಿ ಸಲ್ಲಿಕೆಗೆ ವ್ಯವಸ್ಥೆ ಮಾಡುತ್ತೇವೆ’ ಎಂದು ಜಾರ್ಜ್ ತಿಳಿಸಿದರು.
‘ಚುನಾವಣೆ ವೇಳೆ ಎಲ್ಲರಿಗೂ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವುದಾಗಿ ಹೇಳಿದ್ದೀರಿ. ಚುನಾವಣೆ ಗೆದ್ದ ಮೇಲೆ 200 ಯೂನಿಟ್‌ವರೆಗೆ ಎಂದು ಹೇಳಲಾರಂಭಿಸಿದ್ದೀರಿ. ಆದೇಶ ಹೊರಡಿಸಿದಾಗ ವಾರ್ಷಿಕ ಸರಾಸರಿ ಅನ್ವಯ ನೀಡುವುದಾಗಿ ಷರತ್ತು ವಿಧಿಸಿದ್ದೀರಿ. ನೀವು 200 ಯೂನಿಟ್ ಉಚಿತ ಕೊಡುತ್ತೀರಿ ಎಂದು ಜನ ಫ್ರಿಡ್ಜು , ಎಇಎಚ್, ಎಸಿ ಇತ್ಯಾದಿ ಉಪಕರಣಗಳನ್ನು ಖರೀದಿಸಲು ಆಲೋಚನೆ ಮಾಡಿದ್ದರು. ಆದರೆ, ನೀವು ವಾರ್ಷಿಕ ಸರಾಸರಿ ನಿಗದಿ ಮಾಡಿದ್ದರಿಂದ, ಅವರು ಆ ಯಾವುದೇ ಉಪಕರಣಗಳನ್ನು ಖರೀದಿಸಲು ಸಾಧ್ಯವಾಗಲಿಲ್ಲ’ ಎಂದು ಕುಮಾರಸ್ವಾಮಿ ಹೇಳಿದರು.
ಯತ್ನಾಳ್ ಅವರೇ ನೀವು ತಿಂಗಳಿಗೆ 100, 110 ಯೂನಿಟ್ ವಿದ್ಯುತ್ ಸರಾಸರಿ ಬಳಸುತ್ತಿದ್ದೀರಿ ಅಂದುಕೊಳ್ಳಿ, ಒಂದು ವರ್ಷದಿಂದ ಬಳಸುತ್ತಿದ್ದರೇ ಸರಾಸರಿ ಅಷ್ಟೇ ಬರುತ್ತದೆ. ಹಾಗಾಗಿ ನಿಮಗೆ 200 ಯೂನಿಟ್ ವಿದ್ಯುತ್ ಕೊಡೋ ಅಗತ್ಯ ಇದೆಯಾ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.