ಬೆಂಗಳೂರು: ಚಿಕ್ಕಪೇಟೆಯ ರಂಗನಾಥ ಮ್ಯಾನ್ಷನ್ ಮತ್ತು ಸಕಾಲಾಜಿ ಮಾರ್ಕೆಟ್‍ನ ಸಗಟು ಆಭರಣ ವರ್ತಕರ 23 ಅಂಗಡಿಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಸುಮಾರು ₹ 1.30 ಕೋಟಿ ಜಿಎಸ್‍ಟಿ (ಸರಕು ಮತ್ತು ಸೇವಾ ತೆರಿಗೆ) ಪಾವತಿಸದ 60 ಕೆ.ಜಿ. ಚಿನ್ನಾಭರಣ ಪತ್ತೆ ಹಚ್ಚಿದ್ದಾರೆ.
ಬೆಂಗಳೂರು ದಕ್ಷಿಣ ವಿಭಾಗದ ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ಅಧಿಕಾರಿಗಳು ಫೆ. 25ರಂದು ನಡೆಸಿದ ತಪಾಸಣೆ ವೇಳೆ ಈ ವಂಚನೆ ಗೊತ್ತಾಗಿದೆ. ಹೊರರಾಜ್ಯಗಳಿಂದ ವರ್ತಕರು ಯಾವುದೇ ದಾಖಲೆಗಳಿಲ್ಲದೆ ಚಿಕ್ಕಪೇಟೆಯಲ್ಲಿರುವ ಸ್ಥಳೀಯ ಆಭರಣ ವರ್ತಕರಿಗೆ ಚಿನ್ನಾಭರಣ ನೀಡುತ್ತಿದ್ದ ವಿಷಯ ಬಯಲಾಗಿದೆ. ಈ ಆಭರಣಗಳಿಗೆ ದಂಡ ವಿಧಿಸ
ಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.ತಪಾಸಣೆ ಸಂದರ್ಭದಲ್ಲಿ ದಾಖಲೆಗಳಿಲ್ಲದ 3.5 ಕೆ.ಜಿ ಚಿನ್ನಾಭರಣವನ್ನು ಚೀಲವೊಂದರಲ್ಲಿ ತುಂಬಿಸಿದ ಇಬ್ಬರು ಅದನ್ನು ಬೇರೆಡೆಗೆ ಸಾಗಿಸಲು ಯತ್ನಿಸಿದ್ದರು. ಇದನ್ನು ಗಮನಿಸಿದ ಅಧಿಕಾರಿಗಳು ಇಬ್ಬರನ್ನು ಕರೆದು ವಿಚಾರಿಸಿದಾಗ ಕೃತ್ಯ ಬಯಲಿಗೆ ಬಂದಿದೆ. ಅದಕ್ಕೂ ದಂಡ
ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಎನ್‍ಐಸಿ ಸಿದ್ಧಪಡಿಸಿದ ವಿದ್ಯುನ್ಮಾನ ವ್ಯವಸ್ಥೆಯಲ್ಲಿನ ದತ್ತಾಂಶ ವಿಶ್ಲೇಷಣೆ ಹಾಗೂ ಖಚಿತ ಮಾಹಿತಿ ಆಧರಿಸಿ ಈ ದಾಳಿ ನಡೆಸಲಾಗಿದೆ.
‘ಬಿಲ್ ಇಲ್ಲದಸರಕು ಖರೀದಿ ಸಲ್ಲ’
‘ಅಂತರರಾಜ್ಯ ಚಿನ್ನ ಮತ್ತು ಬೆಳ್ಳಿ ಸಾಗಣೆ ಮೇಲೆ ಜಾರಿ ವಿಭಾಗ ತೀವ್ರ ನಿಗಾ ವಹಿಸಿದೆ. ಅಧಿಕೃತ ಖರೀದಿ ಬಿಲ್ ಇಲ್ಲದ ಸರಕುಗಳನ್ನು ವರ್ತಕರು ಕೊಳ್ಳಬಾರದು’ ಎಂದು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಎಂ.ಎಸ್. ಶ್ರೀಕರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.