ಬೆಂಗಳೂರು: ʼಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಆರೋಪಗಳ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನೇಮಿಸಿರುವ ರಾಜ್ಯ ಸರ್ಕಾರದ ತೀರ್ಮಾನವನ್ನು ಸ್ವಾಗತಿಸುತ್ತೇನೆʼಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಹೇಳಿದರು.
ಭಾನುವಾಋ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಅವರು, ʼಏನು ನಡೆದಿದೆ ಎಂಬುದು ನನಗೆ ಗೊತ್ತಿಲ್ಲ. ಸಿಐಡಿ, ಎಸ್‌ಐಟಿ ಎಲ್ಲವೂ ಸರ್ಕಾರದ ಕೈಯಲ್ಲಿ ಇದೆ. ತನಿಖೆಯಿಂದ ಸತ್ಯ ಹೊರಬರಲಿʼ ಎಂದರು.
ಚುನಾವಣೆ ಸಂದರ್ಭದಲ್ಲಿ ಎದುರಾಳಿಗಳನ್ನು ಸೋಲಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ನಾವು ಹೆಣ್ಣು ಮಕ್ಕಳ ಬಗ್ಗೆ ಅಪಾರ ಗೌರವ ಹೊಂದಿದ್ದೇವೆ ಎಂದು ಹೇಳಿದರು.
ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನವನ್ನು ಯಾರೂ ಮಾಡುವುದಿಲ್ಲ. ನನ್ನ ಮಗ ಮಾಡಲಿ, ಅಣ್ಣ, ತಮ್ಮ ಯಾರೇ ಮಾಡಲಿ, ತಪ್ಪು ತಪ್ಪೆ. ತಪ್ಪು ನಡೆದಿಲ್ಲ ಎಂದು ವಾದಿಸುವುದಿಲ್ಲ ಎಂದರು.
ʼಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗುತ್ತದೆಯೆʼ ಎಂಬ ಪ್ರಶ್ನೆಗೆ ʼಪಕ್ಷದ ವರಿಷ್ಠರು ಕುಳಿತು ಚರ್ಚಿಸಿ ಈ ಕುರಿತು ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಖಂಡಿತವಾಗಿಯೂ ಸೂಕ್ತ ಕ್ರಮ ಆಗುತ್ತದೆʼ ಎಂದರು.
ಪ್ರಜ್ವಲ್ ವಿದೇಶಕ್ಕೆ ಪರಾರಿಯಾಗಿರುವ ಬಗ್ಗೆ ಕೇಳಿದಾಗ, ʼಭವಾನಿ ರೇವಣ್ಣ ಅವರು ಶನಿವಾರ ಕೆ.ಆರ್. ನಗರಕ್ಕೆ ಬಂದು ಹೋಗಿದ್ದರು. ಏನು ಆಗಿದೆ ಎಂಬುದು ಗೊತ್ತಿಲ್ಲ. ತನಿಖೆಯಲ್ಲಿ ಎಲ್ಲವೂ ಹೊರಬರಲಿʼ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.