ADVERTISEMENT

ಜಿಟಿಟಿಸಿ | ನಿಯಮ ಉಲ್ಲಂಘಿಸಿ ಬಡ್ತಿ: ತನಿಖೆಗೆ ಸಚಿವರ ಸೂಚನೆ

ಏಕಕಾಲಕ್ಕೆ ಹಲವರಿಗೆ 3 ರಿಂದ 4 ಬಡ್ತಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 23:30 IST
Last Updated 8 ಅಕ್ಟೋಬರ್ 2024, 23:30 IST
ಡಾ.ಶರಣಪ್ರಕಾಶ ಪಾಟೀಲ
ಡಾ.ಶರಣಪ್ರಕಾಶ ಪಾಟೀಲ   

ಬೆಂಗಳೂರು: ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ (ಜಿಟಿಟಿಸಿ) ವೃಂದ ಮತ್ತು ನೇಮಕಾತಿ ನಿಯಮ ಹಾಗೂ ಸೇವಾ ಹಿರಿತನ ಕಡೆಗಣಿಸಿ ಹಲವು ನೌಕರರಿಗೆ ಏಕಕಾಲಕ್ಕೆ ಮೂರರಿಂದ ನಾಲ್ಕು ಬಡ್ತಿಗಳನ್ನು ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ನಿರ್ದೇಶನ ನೀಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯನಗರ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ಗೋವಿಂದರಾಜ ನಗರ ಶಾಸಕ ಪ್ರಿಯಕೃಷ್ಣ ಮತ್ತು ನೆಲಮಂಗಲ ಶಾಸಕ ಶ್ರೀನಿವಾಸ್‌ ಅವರು ಸಚಿವರಿಗೆ ಪತ್ರ ಬರೆದು ತನಿಖೆಗೆ ಒತ್ತಾಯಿಸಿದ್ದರು.

2020 ರಲ್ಲಿ ಅಂದಿನ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಮತ್ತು ಆಡಳಿತ ವ್ಯವಸ್ಥಾಪಕ ಮುನೀರ್‌ ಖಾತಿಬ್‌ ಸೇರಿ ಅಂದಿನ ನೌಕರರ ಸಂಘದ ಜತೆ ಸೇರಿ ಮಾಡಿಕೊಂಡ ಒಪ್ಪಂದದಿಂದ ದೊಡ್ಡ ಪ್ರಮಾಣದಲ್ಲಿ ನೌಕರರಿಗೆ ಅನ್ಯಾಯವಾಗಿದೆ. ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ, 2000ರ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಸಿಬ್ಬಂದಿ ಸಂಖ್ಯಾ ಬಲವನ್ನು ಪರಿಗಣಿಸದೇ ರೋಸ್ಟರ್‌ ವ್ಯವಸ್ಥೆಯನ್ನೂ ಬದಿಗೊತ್ತಿ ಪೂರ್ವಾನ್ವಯವಾಗುವಂತೆ ಬಡ್ತಿ ನೀಡಲಾಗಿದೆ. ಇದರಿಂದ ಎಲ್ಲ ವೃಂದದ ಜ್ಯೇಷ್ಠತೆ, ಬಡ್ತಿ, ವೇತನ ಶ್ರೇಣಿಗಳಲ್ಲಿ ದೊಡ್ಡ ಪ್ರಮಾಣದ ತಾರತಮ್ಯ ಆಗಿದೆ. ಇದರಿಂದ ಸಂಸ್ಥೆಗೆ ಆರ್ಥಿಕ ನಷ್ಟವೂ ಆಗಿದೆ ಎಂದು ಶಾಸಕರು ಪತ್ರದಲ್ಲಿ ಉಲ್ಲೇಖಿಸಿದ್ದರು. 

ADVERTISEMENT

ಈ ರೀತಿ ಬಡ್ತಿ ಪಡೆದವರಲ್ಲಿ ಕೆಲವು ವೇತನ ರಹಿತವಾಗಿ ರಜೆಯಲ್ಲಿದ್ದವರು, ಗೈರು ಹಾಜರಾದವರಿಗೂ ಬಡ್ತಿ ಮತ್ತು ವೇತನ ಬಾಕಿ ನೀಡಲಾಗಿದೆ. ಇದರಿಂದ ಜಿಟಿಟಿಸಿಗೆ ಆರ್ಥಿಕ ನಷ್ಟವುಂಟಾಗಿದೆ. ಅಟೆಂಡರ್‌ ಆಗಿ ಸೇರಿದವರು ಫೋರ್‌ಮನ್‌ ಶ್ರೇಣಿಗೆ ಬಡ್ತಿ ಪಡೆದಿದ್ದಾರೆ. ಫೋರ್‌ಮನ್‌ ಹುದ್ದೆ ಅಧಿಕಾರಿ ಹುದ್ದೆಗಿಂತ ಒಂದು ಹಂತ ಕೆಳಗಿನದು. ನ್ಯಾಷನಲ್‌ ಅಪ್ರೆಂಟಿಶಿಪ್‌ ಸರ್ಟಿಫಿಕೇಟ್‌(ಎನ್‌ಎಸಿ) ಪಡೆದು ಕೆಲಸ ಸೇರಿದವರಿಗೆ ಡಿಪ್ಲೊಮಾಗೆ ಸರಿಸಮಾನವೆಂದು ಪರಿಗಣಿಸಿ ಬಡ್ತಿ ನೀಡಲಾಗಿದೆ. ಸಂಸ್ಥೆಯ ನಿಯಮದ ಪ್ರಕಾರ, ಎನ್‌ಎಸಿಯನ್ನು ಡಿಪ್ಲೊಮಾಗೆ ಸಮಾನವಾಗಿ ಪರಿಗಣಿಸುವುದು ತಪ್ಪು ಎಂದು ಆಡಳಿತ ಮಂಡಳಿ ಸಭೆ ನಿರ್ಣಯಿಸಿದೆ. ಇದನ್ನೂ ಉಲ್ಲಂಘಿಸಲಾಗಿದೆ ಎಂದು ದೂರಿದ್ದಾರೆ.

ಆರಂಭಗೊಳ್ಳದ ತನಿಖೆ:ಬಡ್ತಿ ಆಗಿರುವ ಲೋಪಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸಚಿವ ಶರಣ ಪ್ರಕಾಶ್ ಪಾಟೀಲ ಅವರು ಸೂಚನೆ ನೀಡಿದ್ದರೂ ಇಲಾಖೆ ಹಾಗೂ ಜಿಟಿಟಿಸಿ ಇನ್ನೂ ತನಿಖೆ ಆರಂಭಿಸಿಲ್ಲ ಎಂದು ಮೂಲಗಳು ತಿಳಿಸಿವೆ. 

‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ 2000 ದ ವೃಂದ ಮತ್ತು ನೇಮಕಾತಿ ನಿಯಮ ಮತ್ತು ಸೇವಾ ಹಿರಿತನವನ್ನು ಪರಿಗಣಿಸಿ ಆಗಿರುವ ತಪ್ಪುಗಳನ್ನು ಸರಿಪಡಿಸಬೇಕು. ಅಕ್ರಮವಾಗಿ ನೀಡಿರುವ ಮತ್ತು ಒಬ್ಬರಿಗೆ ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಬಡ್ತಿ ನೀಡಿರುವುದನ್ನು ರದ್ದುಪಡಿಸಬೇಕು’ ಎಂದು ಜಿಟಿಟಿಸಿ ನೌಕರರ ಸಂಘದ ಪ್ರಧಾನಕಾರ್ಯದರ್ಶಿ ಎಚ್‌.ಎನ್‌.ದೇವರಾಜು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೂಲಂಕಶ ತನಿಖೆ ನಡೆಸಿ ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ಉಲ್ಲಂಘನೆ ಆಗಿದ್ದರೆ ಶಿಸ್ತು ಕ್ರಮ ತೆಗೆದುಕೊಂಡು ಅವಕಾಶ ವಂಚಿತರಿಗೆ ಮುಂಬಡ್ತಿ ನೀಡುವ ಕುರಿತು ಅನುಪಾಲನಾ ವರದಿ ಸಲ್ಲಿಸಲು ಸೂಚಿಸಲಾಗಿದೆ.
- ಡಾ.ಶರಣ್ ಪ್ರಕಾಶ್‌ ಪಾಟೀಲ, ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.