ADVERTISEMENT

‘ಗ್ಯಾರಂಟಿ‘ಗಳಿಂದ ಆರ್ಥಿಕ ಸಂಕಷ್ಟ: ಕಾಸಿಗೆ 25 ಸಾವಿರ ಎಕರೆ ಆಸರೆ

ಸಂಪನ್ಮೂಲ ಸಂಗ್ರಹಕ್ಕೆ ಸರ್ಕಾರದ ಹೊಸದಾರಿ

ಭರತ್ ಜೋಶಿ
Published 17 ಜೂನ್ 2024, 23:30 IST
Last Updated 17 ಜೂನ್ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಐದು ‘ಗ್ಯಾರಂಟಿ’ ಯೋಜನೆಗಳ ಅನುಷ್ಠಾನದಿಂದ ಎದುರಾಗಿರುವ ಆರ್ಥಿಕ ಹೊರೆಯನ್ನು ಸರಿದೂಗಿಸಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರವು, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಿಸಿದ ಬೆನ್ನಲ್ಲೇ ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ 25,000 ಎಕರೆ ಜಮೀನನ್ನು ವರಮಾನ ಸಂಗ್ರಹಕ್ಕೆ ಬಳಸಿಕೊಳ್ಳುವ ಚಿಂತನೆ ನಡೆಸಿದೆ.

ರಾಜ್ಯದಲ್ಲಿ ವರಮಾನ ಸಂಗ್ರಹ ಹೆಚ್ಚಳಕ್ಕೆ ಇರುವ ಅವಕಾಶಗಳ ಕುರಿತು ಹಣಕಾಸು ಇಲಾಖೆಗೆ ಸಲಹೆ ನೀಡಲು ಬಾಸ್ಟನ್‌ ಕನ್ಸಲ್ಟಿಂಗ್‌ ಗ್ರೂ‍ಪ್‌ (ಬಿಸಿಜಿ) ಕಂಪನಿಯನ್ನು ನೇಮಿಸಿಕೊಳ್ಳಲಾಗಿದೆ. ಈ ಕಂಪನಿ ಇತ್ತೀಚೆಗೆ ಪ್ರಾಥಮಿಕ ವರದಿಯೊಂದನ್ನು ಸಲ್ಲಿಸಿದ್ದು, ಜಮೀನುಗಳ ನಗದೀಕರಣ ಅಥವಾ ರಾಜ್ಯ ನಿರ್ದೇಶಿತ ನಗರೀಕರಣ ಮಾದರಿಗಳ ಮೂಲಕ ವರಮಾನ ಸಂಗ್ರಹ ಹೆಚ್ಚಿಸಿಕೊಳ್ಳಬಹುದು ಎಂದು ಸಲಹೆ ನೀಡಿದೆ.

ADVERTISEMENT

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಕಳೆದ ಆರ್ಥಿಕ ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ ₹36,000 ಕೋಟಿ ವೆಚ್ಚ ಮಾಡಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ ₹52,009 ಕೋಟಿಯನ್ನು ಮೀಸಲಿಡಲಾಗಿದೆ. ‘ಗ್ಯಾರಂಟಿ’ಗಳ ಹೊರೆಯು ರಾಜ್ಯ ಸರ್ಕಾರವನ್ನು ರಾಜಸ್ವ ಕೊರತೆಯತ್ತ ತಳ್ಳುತ್ತಿದೆ. ಇದರಿಂದಾಗಿ ಹೆಚ್ಚುವರಿ ಸಂಪನ್ಮೂಲಗಳ ಸಂಗ್ರಹ ಮಾಡಲೇಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ.

‘ಪ್ರಜಾವಾಣಿ’ಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ನಂದಗುಡಿಯಲ್ಲಿರುವ 15,000 ಎಕರೆ ಮತ್ತು ಬಿಡದಿಯಲ್ಲಿರುವ 9,800 ಎಕರೆ ಜಮೀನುಗಳನ್ನು ವರಮಾನ ಸಂಗ್ರಹಕ್ಕೆ ಬಳಸಿಕೊಳ್ಳಲು ರಾಜ್ಯ ಸರ್ಕಾರ ಪ್ರಾಥಮಿಕ ಹಂತದಲ್ಲಿ ಗುರುತಿಸಿದೆ. ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ (ಬಿಎಂಆರ್‌ಡಿಎ) ವ್ಯಾಪ್ತಿಯಲ್ಲಿ 73 ಸ್ಥಳಗಳಲ್ಲಿ ಇರುವ 300ರಿಂದ 400 ಎಕರೆ ಜಮೀನುಗಳನ್ನೂ ಈ ಉದ್ದೇಶಕ್ಕೆ ಬಳಸಿಕೊಳ್ಳುವ ಯೋಚನೆ ಇದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಸ್ವಾಧೀನದಲ್ಲಿದ್ದು, ಬಳಕೆಯಾಗದೇ ಇರುವ ಜಮೀನುಗಳನ್ನೂ ವರಮಾನ ಸಂಗ್ರಹಕ್ಕೆ ಬಳಸಿಕೊಳ್ಳುವ ಪ್ರಸ್ತಾವವಿದೆ.

‘₹5,000 ಕೋಟಿ ಹೆಚ್ಚುವರಿ ಸಂಗ್ರಹ’

‘ಬಳಕೆಯಾಗದ ವರಮಾನ ಮೂಲಗಳಿಂದ ಪ್ರತಿ ಆರ್ಥಿಕ ವರ್ಷದಲ್ಲಿ ₹5,000 ಕೋಟಿಯಷ್ಟು ಹೆಚ್ಚುವರಿ ವರಮಾನ ಸಂಗ್ರಹಿಸಲು ಸರ್ಕಾರ ಬಯಸಿದೆ’ ಎಂದು ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌.ಕೆ. ಅತೀಕ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಸ್ತಿಗಳ ನಗದೀಕರಣವೂ ಸೇರಿದಂತೆ ಸರ್ಕಾರಿ– ಖಾಸಗಿ ಸಹಭಾಗಿತ್ವದ ಯೋಜನೆಗಳು ಮತ್ತು ರಾಜ್ಯ ನಿರ್ದೇಶಿತ ನಗರೀಕರಣ ಯೋಜನೆಗಳಿಗೆ ನಾವು ಆದ್ಯತೆ ನೀಡುತ್ತಿದ್ದೇವೆ. ವಿತ್ತೀಯ ಸುಸ್ಥಿರತೆಗಾಗಿ ಬಳಕೆಯಾಗದ ವರಮಾನ ಮೂಲಗಳಿಂದ ರಾಜಸ್ವ ಸಂಗ್ರಹ ಮಾಡುವುದು ಮತ್ತು ಸರ್ಕಾರದ ಆದ್ಯತೆಗಳಿಗೆ ಧಕ್ಕೆಯಾಗದಂತೆ ವೆಚ್ಚವನ್ನು ತಗ್ಗಿಸುವುದು ನಮ್ಮ ಯೋಚನೆ’ ಎಂದು ವಿವರಿಸಿದರು. ‘ಬಿಡಿಎಗೆ ಸೇರಿದ ಭಾರಿ ಸಂಖ್ಯೆಯ ಆಸ್ತಿಗಳು ಯಾವತ್ತೂ ಬಳಕೆಯಾಗದೆ ಉಳಿದಿವೆ. ಪಾರದರ್ಶಕವಾದ ಕ್ರಮಗಳ ಮೂಲಕ ಅವುಗಳನ್ನು ಬಳಸಿಕೊಂಡು ವರಮಾನ ಸಂಗ್ರಹಿಸಬಹುದು. ಇದರಿಂದ ಬರುವ ಆದಾಯವನ್ನು ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ವಿನಿಯೋಗಿಸಬಹುದು’ ಎಂದು ಅತೀಕ್‌ ವಿವರಿಸಿದರು.

‘ರಾಜಸ್ವ ಸ್ವೀಕೃತಿ ಹೆಚ್ಚಳ ಅನಿವಾರ್ಯ’

‘ಕರ್ನಾಟಕ ಸರ್ಕಾರವು ತನ್ನ ರಾಜಸ್ವ ಸ್ವೀಕೃತಿಯನ್ನು ಹೆಚ್ಚಿಸಿಕೊಳ್ಳುವುದು ಅನಿವಾರ್ಯ’ ಎಂದು ಬಾಸ್ಟನ್‌ ಕನ್ಸಲ್ಟಿಂಗ್‌ ಗ್ರೂಪ್‌ ತನ್ನ ಪ್ರಾಥಮಿಕ ವರದಿಯಲ್ಲಿ ಹೇಳಿದೆ.

ಕರ್ನಾಟಕ ಸರ್ಕಾರದ ರಾಜಸ್ವ ಸ್ವೀಕೃತಿಯು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (ಜಿಎಸ್‌ಡಿಪಿ) ಶೇಕಡ 9ರಷ್ಟಿದೆ. ಮಹಾರಾಷ್ಟ್ರದಲ್ಲಿ ಶೇ 12, ತೆಲಂಗಾಣದಲ್ಲಿ ಶೇ 13ರಷ್ಟು ಮತ್ತು ತಮಿಳುನಾಡಿನಲ್ಲಿ ಶೇ 10ರಷ್ಟಿದೆ. ರಾಜಸ್ವ ಸ್ವೀಕೃತಿಯ ಪ್ರಮಾಣ ಹೆಚ್ಚಾಗಿರುವ ಕಾರಣದಿಂದ ಮಹಾರಾಷ್ಟ್ರ ಮತ್ತು ತಮಿಳುನಾಡು ಸರ್ಕಾರಗಳ ಬಜೆಟ್‌ ಗಾತ್ರವು ಜಿಎಸ್‌ಡಿಪಿಯ ಶೇಕಡಾವಾರು ಪ್ರಮಾಣದಲ್ಲಿ ಕರ್ನಾಟಕಕ್ಕಿಂತ ಹೆಚ್ಚಾಗಿದೆ ಎಂಬ ಉಲ್ಲೇಖ ವರದಿಯಲ್ಲಿದೆ. ವೆಚ್ಚ ತಗ್ಗಿಸುವ ವಿಚಾರದಲ್ಲಿ ಇಂಧನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌, ಜಲ ಸಂಪನ್ಮೂಲ, ನಗರಾಭಿವೃದ್ಧಿ ಮತ್ತು ಲೋಕೋಪಯೋಗಿ ಇಲಾಖೆಗಳನ್ನು ಆದ್ಯತೆಯ ಇಲಾಖೆಗಳನ್ನಾಗಿ ಗುರುತಿಸಲಾಗಿದೆ. ಇಂಧನ ಇಲಾಖೆಯಲ್ಲಿ ನೀರಾವರಿ ಪಂಪ್‌ಸೆಟ್‌ಗಳು ಮತ್ತು ಗೃಹ ಜ್ಯೋತಿ ಯೋಜನೆಯಡಿ ನೀಡುತ್ತಿರುವ ಸಹಾಯಧನವು ಶೇ 97ರಷ್ಟಿದೆ. ಈ ಇಲಾಖೆಯಲ್ಲಿ ವೆಚ್ಚ ತಗ್ಗಿಸಲು ಅವಕಾಶಗಳಿವೆ ಎಂದು ಅಂದಾಜಿಸಲಾಗಿದೆ.

ಉದ್ದೇಶಿತ ಜಮೀನುಗಳು ಎಲ್ಲಿವೆ?

* ಹೊಸಕೋಟೆ ತಾಲ್ಲೂಕಿನ ನಂದಗುಡಿಯಲ್ಲಿ 15,000 ಎಕರೆ

* ಬಿಡದಿ ಕೈಗಾರಿಕಾ ಪ್ರದೇಶದ ಬಳಿ 9,800 ಎಕರೆ

* ಬಿಎಂಆರ್‌ಡಿಎ ವ್ಯಾಪ್ತಿಯಲ್ಲಿ 300ರಿಂದ 400 ಎಕರೆ

* ಬಳಕೆಯಾಗದೆ ಉಳಿದ ಬಿಡಿಎ ಆಸ್ತಿಗಳು

ಸರ್ಕಾರಿ ಭೂಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.