ADVERTISEMENT

‘ಶಕ್ತಿ’ ಯೋಜನೆಯ ಬಗ್ಗೆ ಗೊಂದಲ ಸೃಷ್ಟಿಸುವ ಹುನ್ನಾರ: ಸಚಿವ ರಾಮಲಿಂಗಾರೆಡ್ಡಿ ಬೇಸರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ನವೆಂಬರ್ 2024, 10:41 IST
Last Updated 2 ನವೆಂಬರ್ 2024, 10:41 IST
ಸಚಿವ ರಾಮಲಿಂಗಾರೆಡ್ಡಿ
ಸಚಿವ ರಾಮಲಿಂಗಾರೆಡ್ಡಿ   

ಬೆಂಗಳೂರು: ‘ನಾನು ಯಾವುದೇ ಮಾಧ್ಯಮದವರಿಗೂ ಶಕ್ತಿ ಯೋಜನೆ ನಡೆಸಲು ಸಾರಿಗೆ ಇಲಾಖೆಗೆ ಸ್ವಲ್ಪ ಕಷ್ಟವಾಗುತ್ತಿದೆ ಎಂಬ ಹೇಳಿಕೆಯನ್ನೇ ನೀಡಿಲ್ಲ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಶಕ್ತಿ ಯೋಜನೆ ಕುರಿತಂತೆ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿರುವ ಶಕ್ತಿ ಯೋಜನೆಯ ಬಗ್ಗೆ ವಿನಾ ಕಾರಣ ಗೊಂದಲ ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ. ನಾನು ಮಾತನಾಡಿಯೇ ಇಲ್ಲದ ಹೇಳಿಕೆಗಳನ್ನು ಮಾಧ್ಯಮದವರು ಪ್ರಕಟಿಸಿರುವುದು ಸರಿಯಲ್ಲ’ ಎಂದು ಬೇಸರ ಹೊರಹಾಕಿದ್ದಾರೆ.

‘ಶಕ್ತಿ ಯೋಜನೆ ಬಗ್ಗೆ ನನ್ನನ್ನು ಯಾವುದೇ ಮಾಧ್ಯಮದವರು ಸಂರ್ಪಕಿಸಿಯೇ ಇಲ್ಲ. ನಾನು ಯಾರೊಂದಿಗೂ ಮಾತನಾಡಿಯೇ ಇಲ್ಲದಿರುವುದರಿಂದ ಈ ರೀತಿಯ ಹೇಳಿಕೆಗಳನ್ನು ಪ್ರಕಟಿಸುವ ಮುನ್ನ ಮಾಧ್ಯಮದವರು ನನ್ನನ್ನು ಖುದ್ದು ಸಂರ್ಪಕಿಸುವುದು ಉತ್ತಮ’ ಎಂದು ಹೇಳಿದ್ದಾರೆ.

ADVERTISEMENT

ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ‘ಶಕ್ತಿ’ ಯೋಜನೆಯನ್ನು ಮರುಪರಿಶೀಲನೆಗೆ ಒಳಪಡಿಸುವ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಈಚೆಗೆ ಸುಳಿವು ನೀಡಿದ್ದರು. ‘ಶಕ್ತಿ ಯೋಜನೆಯನ್ನು ಮರುಪರಿಶೀಲನೆಗೆ ಒಳಪಡಿಸಬೇಕು ಎಂದು ಹಲವು ಮಹಿಳೆಯರು ಸಾಮಾಜಿಕ ಜಾಲತಾಣ ‘ಎಕ್ಸ್‌ ಹಾಗೂ ಇ–ಮೇಲ್‌ ಮೂಲಕ ಮನವಿ ಮಾಡಿದ್ದಾರೆ’ ಎಂದು ಹೇಳಿದ್ದರು.

‘ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಪ್ರಯಾಣಿಸುವಾಗ ನಾವು ಹಣ ಕೊಡಲು ಮುಂದಾದರೂ ನಿರ್ವಾಹಕರು ನಿರಾಕರಿಸುತ್ತಾರೆ. ಆರ್ಥಿಕವಾಗಿ ಅನುಕೂಲ ಸ್ಥಿತಿಯಲ್ಲಿ ಇರುವ ಕಾರಣ ಟಿಕೆಟ್‌ ತೆಗೆದುಕೊಳ್ಳುವ ಶಕ್ತಿಯಿದ್ದು, ನಮಗೆ ಉಚಿತ ಪ್ರಯಾಣ ಬೇಡವೆಂದು ಶೇ 5ರಿಂದ 10ರಷ್ಟು ಮಹಿಳೆಯರು ಹೇಳುತ್ತಿದ್ದಾರೆ. ಈ ಕುರಿತು ಪ್ರತ್ಯೇಕ ಸಭೆ ಕರೆದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರ ಜತೆ ಚರ್ಚಿಸಲಾಗುವುದು’ ಎಂದಿದ್ದರು.

‘ಶಕ್ತಿ’ ಯೋಜನೆ ಪರಿಷ್ಕರಣೆ ಕುರಿತ ಡಿ.ಕೆ. ಶಿವಕುಮಾರ್ ಮಾತಿಗೆ ಅಸಹನೆ ವ್ಯಕ್ತಪಡಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗೆ ಎಚ್ಚರಿಕೆ ನೀಡಿದ್ದರು. ಈ ಬೆನ್ನಲ್ಲೇ, ವಿರೋಧ ಪಕ್ಷಗಳಾದ ಬಿಜೆಪಿ, ಜೆಡಿಎಸ್ ನಾಯಕರು ಸರ್ಕಾರದ ನಡೆಯ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.