ಬೆಂಗಳೂರು: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಯಾವ ಗ್ಯಾರಂಟಿಗಳೂ ಇರುವುದಿಲ್ಲ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಗ್ಯಾರಂಟಿ ಕುರಿತು ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯಿಂದ ಮಹಾರಾಷ್ಟ್ರ ಚುನಾವಣೆಯಲ್ಲಿ ಹಿನ್ನಡೆ ಆಗುತ್ತದೆ ಎಂಬ ಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆಯವರು ದೆಹಲಿಯಿಂದ ಓಡೋಡಿ ಬಂದು ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ ಎಂದು ಅವರು ಸುದ್ದಿಗಾರರ ಜತೆ ಮಾತನಾಡಿ ತಿಳಿಸಿದರು.
ಮಹಾರಾಷ್ಟ್ರ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿಗಳನ್ನು ಘೋಷಿಸಿದೆ. ಆದರೆ ಇದೇ ವೇಳೆ ಕರ್ನಾಟಕದಲ್ಲಿ ಸಚಿವರು ಗ್ಯಾರಂಟಿ ಬಗ್ಗೆ ಅಪಸ್ವರ ಎತ್ತುತ್ತಿದ್ದಾರೆ. ಇದರಿಂದ ಮತ ಬ್ಯಾಂಕ್ ಕಿತ್ತುಹೋಗಬಹುದು ಎಂಬ ಭಯ ಎಐಸಿಸಿ ಅಧ್ಯಕ್ಷರನ್ನು ಕಾಡಿದೆ. ಹೀಗಾಗಿ ಏರಿಗೆ ಹೋಗುತ್ತಿದ್ದ ಎತ್ತು ಮತ್ತು ನೀರಿಗೆಳೆಯುತ್ತಿದ್ದ ಕೋಣವನ್ನು ತಮ್ಮ ಅಕ್ಕಪಕ್ಕದಲ್ಲಿ ಕುಳಿತುಕೊಳ್ಳಿಸಿ ಮಾತನಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಯಾವುದೂ ಸರಿಯಾಗಿ ಜನರನ್ನು ತಲುಪುತ್ತಿಲ್ಲ. ಗೃಹಲಕ್ಷ್ಮಿಯ ಹಣ 3 ತಿಂಗಳಿಂದ ಬಂದಿಲ್ಲ. ಬೆಳಗಾವಿಯ ಲಕ್ಷ್ಮಕ್ಕ ಹೇಳುತ್ತಿದ್ದರೂ ಹಣ ಬರುತ್ತಿಲ್ಲ. ಅನ್ನಭಾಗ್ಯವೂ ಇಲ್ಲ. ಸರ್ವರ್ ಡೌನ್, ಇವತ್ತು– ನಾಳೆ ಎನ್ನುತ್ತಾರೆ. ಯುವನಿಧಿ ಯಾರಿಗೆ ಬಂದಿದೆ ಎಂಬುದನ್ನು ಒಬ್ಬರೂ ಹೇಳಿಲ್ಲ. ಈ ಪರಿಸ್ಥಿತಿಯಲ್ಲಿ ಶಕ್ತಿ ಯೋಜನೆಯ ವಾಪಸ್ ಪಡೆಯುವ ಬಗ್ಗೆ ಮಾತನಾಡಿದ್ದಾರೆ ಎಂದರು.
ನಿಮ್ಮ ಬಜೆಟ್ ಗಮನಿಸಿ ಗ್ಯಾರಂಟಿ ಕೊಡಬೇಕಿತ್ತು. ಈಗ ಗುಂಡಿಗಳಿಗೆ ಮಣ್ಣು ಮುಚ್ಚಲೂ ದುಡ್ಡಿಲ್ಲ ಎಂದು ಬಹಿರಂಗವಾಗಿಯೇ ಸರ್ಕಾರದ ವೈಫಲ್ಯವನ್ನು ಎಐಸಿಸಿ ಅಧ್ಯಕ್ಷರು ಒಪ್ಪಿಕೊಂಡಿದ್ದಾರೆ. ಈ ಸರ್ಕಾರದಲ್ಲಿ ದುಡ್ಡಿಲ್ಲ, ಖಜಾನೆ ಖಾಲಿ ಎಂಬ ಸತ್ಯವನ್ನು ಹೇಳಿದ ಖರ್ಗೆ ಅವರಿಗೆ ಧನ್ಯವಾದ ಹೇಳಲೇಬೇಕು ಎಂದು ನಾರಾಯಣಸ್ವಾಮಿ ತಿಳಿಸಿದರು.
ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಮಾತನಾಡಿ, ಗ್ಯಾರಂಟಿಯನ್ನು ನೇರವಾಗಿ ಹಿಂಪಡೆಯುವ ಬದಲಾಗಿ ಸರ್ಕಾರವು ಬಡಜನರ ಬಿಪಿಎಲ್ ಕಾರ್ಡ್‌ಗಳನ್ನು ಹಿಂದಕ್ಕೆ ಪಡೆಯುತ್ತಿದೆ. ಸರ್ಕಾರ ಅನುಕೂಲಗಳಿಂದ ವಂಚಿತರನ್ನಾಗಿ ಮಾಡುತ್ತಿದೆ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.