ಬೆಂಗಳೂರು: ಪದವಿ ಮತ್ತು ವಿಶ್ವವಿದ್ಯಾಲಯಗಳಲ್ಲಿರುವ ಅತಿಥಿ ಉಪನ್ಯಾಸಕರಿಗೆ ಯುಜಿಸಿ ನಿಗದಿಪಡಿಸಿರುವ ವೇತನ ಮತ್ತು ಸೇವಾ ಭದ್ರತೆ ನೀಡಲು ಸಿದ್ಧವಿರುವುದಾಗಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಭರವಸೆ ನೀಡಿದರು.
ಉನ್ನತ ಶಿಕ್ಷಣ ಇಲಾಖೆ ವ್ಯಾಪಿಗೆ ಬರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕುಂದು ಕೊರತೆಗಳ ಬಗ್ಗೆ ಚರ್ಚಿಸಲು ಕರೆದಿದ್ದ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.
‘ಅತಿಥಿ ಉಪನ್ಯಾಸಕರು ಕಡಿಮೆ ವೇತನದಲ್ಲಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ಮಾತ್ರ ಅತಿಥಿ ಉಪನ್ಯಾಸಕರಿಗೆ ₹ 25 ಸಾವಿರ ವೇತನ ನೀಡುತ್ತಿದೆ. ಉಳಿದ ವಿಶ್ವವಿದ್ಯಾಲಯಗಳು ₹11 ಸಾವಿರದಿಂದ ₹14 ಸಾವಿರ ನೀಡುತ್ತಿವೆ. ಇವರಿಗೆ ಸೇವಾ ಭದ್ರತೆಯೂ ಇಲ್ಲ’ ಎಂದು ವಿಧಾನಪರಿಷತ್ ಸದಸ್ಯರು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸೇವಾ ಹಿರಿತನ ಪರಿಗಣಿಸಿ, ಕನಿಷ್ಠ ₹25 ಸಾವಿರ ವೇತನ ನಿಗದಿ ಮಾಡುವುದರ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಒಪ್ಪಿಗೆ ಪಡೆದು ಅನುಷ್ಠಾನ ಮಾಡುವುದಾಗಿ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.