ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಕೌನ್ಸೆಲಿಂಗ್‌ಗೆ ಹಾಜರಾಗದೆ 2024–25ನೇ ಶೈಕ್ಷಣಿಕ ಸಾಲಿನಲ್ಲೂ ಅದೇ ಸ್ಥಳಗಳಲ್ಲಿ ಮುಂದುವರಿಯಬಹುದು.
2023–24ನೇ ಸಾಲಿನ ಅವಧಿ ಬಹುತೇಕ ಕಾಲೇಜುಗಳಲ್ಲಿ ಮುಕ್ತಾಯವಾಗಿದ್ದು, ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ಮುಂದಿನ ಶೈಕ್ಷಣಿಕ ಸಾಲಿಗೆ ಮತ್ತೆ ಅವರು ಅರ್ಜಿ ಸಲ್ಲಿಸಬೇಕಿದ್ದರೂ, ಈಗಾಗಲೇ ಕೆಲಸ ಮಾಡುತ್ತಿರುವ ಕಾಲೇಜುಗಳಲ್ಲೇ ಮುಂದುವರಿಯಲು ಇಚ್ಚಿಸುವವರು ತಾವು ಸಲ್ಲಿಸುವ ಅರ್ಜಿಯಲ್ಲೇ ಹಾಲಿ ಕೆಲಸ ಮಾಡುತ್ತಿರುವ ಸ್ಥಳ ನಮೂದಿಸಿದರೆ ಸಾಕು. ಅಂಥವರು ಕೌನ್ಸೆಲಿಂಗ್‌ನಲ್ಲಿ ಭಾವಹಿಸುವ ಅಗತ್ಯವಿಲ್ಲ ಎಂದು ಕಾಲೇಜು ಶಿಕ್ಷಣ ಇಲಾಖೆ ಹೇಳಿದೆ.
ವಿವಿಧ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವವರು ಆ ಕಾಲೇಜು ತೊರೆದು ಬೇರೆ ಕಾಲೇಜುಗಳಿಗೆ ಹೋಗುವುದಾದರೆ, ಕಾಯಂ ಅಧ್ಯಾಪಕರು ನೇಮಕವಾಗಿ, ವರ್ಗಾವಣೆಗೊಂಡು ಬಂದಾಗ ಬೋಧನಾ ಅವಧಿ ಕಡಿಮೆಯಾದರೆ ಅಂತಹ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರು ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಿ, ಬೋಧನಾ ಅವಧಿ ಲಭ್ಯವಿರುವ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಇದೇ ಆ. 6ಕ್ಕೆ ಅತಿಥಿ ಉಪನ್ಯಾಸಕರ 10 ತಿಂಗಳ ಅವಧಿ ಮುಕ್ತಾಯವಾಗಿತ್ತು. ಎಲ್ಲರನ್ನೂ ಆ. 7ರಂದು ಬಿಡುಗಡೆ ಮಾಡಲಾಗಿತ್ತು. ಆದರೆ, ಬಹುತೇಕ ವಿಶ್ವವಿದ್ಯಾಲಯಗಳ ವ್ಯಾಪ್ತಿಯ ಕಾಲೇಜುಗಳಲ್ಲಿ ಎರಡು, ನಾಲ್ಕು ಹಾಗೂ ಆರನೇ ಸೆಮಿಸ್ಟರ್‌ಗಳು ಪೂರ್ಣಗೊಳ್ಳದ ಕಾರಣ ಅಂತಹ ಕಾಲೇಜುಗಳಲ್ಲಿ ಮತ್ತೆ ಆ. 8ರಿಂದ ಕೆಲಸಕ್ಕೆ ವರದಿ ಮಾಡಿಸಿಕೊಳ್ಳಲಾಗಿದೆ. ಉಳಿದವರ ಮರು ಪ್ರವೇಶಕ್ಕೆ ಮುಂದಿನ ವಾರ ಸುತ್ತೋಲೆ ಹೊರಡಿಸಲಾಗುತ್ತದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಪ್ರಸ್ತುತ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರು ಆಯ್ಕೆ ಮಾಡಿಕೊಂಡ ನಂತರವೂ ಬೋಧನಾ ಅವಧಿ ಉಳಿದರೆ ಮಾತ್ರ ಅಂತಹ ಕಾಲೇಜುಗಳಿಗೆ ಹೊಸಬರು ಕೌನ್ಸಿಲಿಂಗ್‌ನಲ್ಲಿ ಭಾಗವಹಿಸಿ ಸ್ಥಳ ಆಯ್ಕೆ ಮಾಡಿಕೊಳ್ಳಬಹುದು.
1,242 ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಒಂದೆರಡು ತಿಂಗಳಲ್ಲಿ ಅವರಿಗೆ ಸ್ಥಳ ನಿಯೋಜನೆ ಆದೇಶ ದೊರೆಯಲಿದೆ. ನಿಯಮದಂತೆ ಸೇವೆಗೆ ಸೇರಿದ ನಂತರ ಗ್ರಾಮೀಣ ಪ್ರದೇಶದ ಕಾಲೇಜುಗಳಲ್ಲಿ (‘ಇ’ ವಿಭಾಗ) ಕೆಲಸ ಮಾಡಬೇಕು. ಅವರಿಗೆ ಆದೇಶ ನೀಡಿದರೆ ಅಂತಹ ಕಾಲೇಜುಗಳಲ್ಲಿನ 1,500ರಷ್ಟು ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳಲಿದ್ದಾರೆ.
ಕಾಯಂ ನೇಮಕಾತಿಯಾದಾಗ ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳುತ್ತಾರೆ. 60 ವಿದ್ಯಾರ್ಥಿಗಳಿಗೆ ಒಂದು ತರಗತಿ, ಐಚ್ಛಿಕ ವಿಷಯಗಳಿಗೆ ಆರು ಗಂಟೆ ಬೋಧನಾ ಅವಧಿ ನಿಗದಿ ಮಾಡಬೇಕು.–ಸೋಮಶೇಖರ್ ಶಿಮೊಗ್ಗಿ, ಅಧ್ಯಕ್ಷ, ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ.
ಸೇವಾ ಭದ್ರತೆ ಒದಗಿಸುವ ಮೊದಲ ಹೆಜ್ಜೆಯಾಗಿ ಈಗಾಗಲೇ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರನ್ನು ಕೌನ್ಸೆಲಿಂಗ್ ಹೊರತಾಗಿ ಅದೇ ಸ್ಥಳದಲ್ಲಿ ಮುಂದುವರಿಸಲಾಗುತ್ತಿದೆ.–ಡಾ.ಎಂ.ಸಿ. ಸುಧಾಕರ್, ಉನ್ನತ ಶಿಕ್ಷಣ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.