ADVERTISEMENT

ಅತಿಥಿ ಉಪನ್ಯಾಸಕರ ಗೌರವಧನ ₹5 ಸಾವಿರ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2023, 10:45 IST
Last Updated 29 ಡಿಸೆಂಬರ್ 2023, 10:45 IST
<div class="paragraphs"><p>ಅತಿಥಿ ಉಪನ್ಯಾಸಕರು– ಸಾಂದರ್ಭಿಕ ಚಿತ್ರ</p></div>

ಅತಿಥಿ ಉಪನ್ಯಾಸಕರು– ಸಾಂದರ್ಭಿಕ ಚಿತ್ರ

   

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಗೌರವಧನ ₹5 ಸಾವಿರ ಹೆಚ್ಚಳ ಮಾಡಿದ್ದು, ಜ.1ರಿಂದಲೇ ಹೆಚ್ಚಳದ ಪ್ರಯೋಜನ ದೊರೆಯಲಿದೆ.

ಅತಿಥಿ ಉಪನ್ಯಾಸಕರ ಸಂಘಟನೆಗಳ ಮುಖಂಡರ ಜತೆ ಶುಕ್ರವಾರ ನಡೆದ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌, ವಿದ್ಯಾರ್ಹತೆ, ಅನುಭವದ ಆಧಾರದ ಮೇಲೆ ಅತಿಥಿ ಉಪನ್ಯಾಸಕರ ಗೌರವಧನ ಪ್ರಸ್ತುತ ₹26,000ದಿಂದ ₹ 32,000 ಇದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 10,600 ಅತಿಥಿ ಉಪನ್ಯಾಸಕರಿಗೂ ವೇತನ ಹೆಚ್ಚಳದ ಲಾಭ ಸಮಾನವಾಗಿ ದೊರಕಲಿದೆ. ಇದರಿಂದ ಸರ್ಕಾರಕ್ಕೆ ವಾರ್ಷಿಕ ₹55 ಕೋಟಿ ಹೆಚ್ಚುವರಿ ಹೊರೆಯಾಗಲಿದೆ ಎಂದರು.

ADVERTISEMENT

ನಿವೃತ್ತರಿಗೆ ₹5ಲಕ್ಷ ಧನ ಸಹಾಯ:

ಅತಿಥಿ ಉಪನ್ಯಾಸಕರಾಗಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿ, 60 ವರ್ಷಕ್ಕೆ ನಿವೃತ್ತರಾಗುವ ವೇಳೆ ವರ್ಷಕ್ಕೆ ₹50 ಸಾವಿರದಂತೆ ಲೆಕ್ಕಹಾಕಿ ₹5 ಲಕ್ಷ ಧನಸಹಾಯ ನೀಡಲಾಗುವುದು. ಅದಕ್ಕಾಗಿ ₹72 ಕೋಟಿ ನಿಗದಿ ಮಾಡಲಾಗಿದೆ ಎಂದರು.

ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರು, ಕಾಯಂ ಸಿಬ್ಬಂದಿ ಅತಿಥಿ ಉಪನ್ಯಾಸಕರನ್ನು ಗೌರವದಿಂದ ಕಾಣಬೇಕು. ತಾರತಮ್ಯ ಮಾಡಬಾರದು, ಅವರ ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು. ಒಮ್ಮೆ ಕೌನ್ಸೆಲಿಂಗ್‌ನಲ್ಲಿ ಆಯ್ಕೆಯಾದವರಿಗೆ ಕೆಲಸದ ಅವಧಿ ಕಡಿಮೆಯ ಕಾರಣ ನೀಡಿ ತೆಗೆದುಹಾಕುವಂತಿಲ್ಲ. 10 ತಿಂಗಳು ಗೌರವಧನ ನೀಡುವುದು ಕಡ್ಡಾಯ. ಪ್ರತಿ ತಿಂಗಳು ಒಂದು ವೇತನ ಸಹಿತ ರಜೆ ನೀಡಲು ಸಮ್ಮತಿಸಲಾಗಿದೆ. ಪ್ರತಿ ವರ್ಷ ಕೌನ್ಸೆಲಿಂಗ್‌ಗೆ ಹಾಜರಾಗುವುದು ಕಡ್ಡಾಯವಿದ್ದರೂ, ಒಮ್ಮೆ ದಾಖಲೆ ಸಲ್ಲಿಸಿದವರು ಮತ್ತೆ ಸಲ್ಲಿಸುವ ಅಗತ್ಯವಿಲ್ಲ. ಅದಕ್ಕಾಗಿ ಹೊಸ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ ಎಂದರು.  

ಆರೋಗ್ಯ ವಿಮೆ

₹5 ಲಕ್ಷದವರೆಗೆ ಉಚಿತ ಚಿಕಿತ್ಸೆ ಸಿಗುವಂತಹ ಆರೋಗ್ಯವಿಮೆ ಕಲ್ಪಿಸಲಾಗುತ್ತಿದೆ. ಅತಿಥಿ ಉಪನ್ಯಾಸಕರು ಮಾಸಿಕ ₹400 ಭರಿಸಬೇಕು. ಉಳಿದ ಹಣವನ್ನು ಸರ್ಕಾರ ತುಂಬಲಿದೆ. ಅದಕ್ಕಾಗಿ ₹5 ಕೋಟಿ ವ್ಯಯಿಸಲಾಗುತ್ತಿದೆ. ತಾಂತ್ರಿಕ ಶಿಕ್ಷಣ ಇಲಾಖೆ ಅಧೀನದಲ್ಲಿರುವ ಎಂಜಿನಿಯರಿಂಗ್‌, ಪಾಲಿಟೆಕ್ನಿಕ್‌ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೂ ಈ ಎಲ್ಲ ಸೌಲಭ್ಯಗಳೂ ಅನ್ವಯವಾಗಲಿವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀಕರ್, ಆಯುಕ್ತ ಜಿ.ಜಗದೀಶ್‌ ಉಪಸ್ಥಿತರಿದ್ದರು.

ನೇಮಕಾತಿಗೆ 15 ಕೃಪಾಂಕ
ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡುವ ಕುರಿತು ಕಾನೂನು ತಜ್ಞರು, ಆರ್ಥಿಕ ಇಲಾಖೆ ಜತೆ ಚರ್ಚಿಸಲಾಗಿದೆ. ಕಾಯಂ ಮಾಡಲು ಕಾನೂನು ತೊಡಕುಗಳಿವೆ. ಹಾಗಾಗಿ, ಪದವಿ ಕಾಲೇಜುಗಳ 6 ಸಾವಿರ ಸಹಾಯಕ ಪ್ರಾಧ್ಯಾಪಕರ ನೇಮಕ ಮಾಡಿಕೊಳ್ಳುವಾಗ 5ವರ್ಷದಿಂದ 10 ವರ್ಷಗಳು ಕೆಲಸ ಮಾಡಿದವರಿಗೆ ವರ್ಷಕ್ಕೆ ಶೇ 3 ಅಂಕಗಳಂತೆ ಗರಿಷ್ಠ 15 ಕೃಪಾಂಕ ನೀಡಲಾಗುವುದು. ವಯೋಮಿತಿ ಸಡಿಲಿಕೆ ಕುರಿತು ಶೀಘ್ರ ನಿರ್ಧಾರ ಪ್ರಕಟಿಸಲಾಗುವುದು ಎಂದು ಸುಧಾಕರ್‌ ಹೇಳಿದರು. ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಿಂದ ಖಾಲಿಯಾಗುವ ಕೆಲಸದ ಅವಧಿ ಸರಿದೂಗಿಸಲು ಹೆಚ್ಚುವರಿ ಕೋರ್ಸ್‌ಗಳನ್ನು ಪರಿಚಯಿಸಲಾಗುತ್ತಿದೆ. ಇದರಿಂದ ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳುವ ಭೀತಿ ಇರದು ಎಂದರು.

ಮರಳದಿದ್ದರೆ ಪರ್ಯಾಯ ವ್ಯವಸ್ಥೆ

ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಿದೆ. ನ.23ರಿಂದ ನಡೆಸುತ್ತಿರುವ ಹೋರಾಟದಿಂದ ಮಕ್ಕಳ ಪಾಠಕ್ಕೆ ತೊಂದರೆಯಾಗಿದೆ. ಹೋರಾಟ ಕೈಬಿಟ್ಟು ಕೆಲಸಕ್ಕೆ ಮರಳುವಂತೆ ಸಂಘಟನೆಗಳ ಮುಖಂಡರಿಗೆ ಮನವಿ ಮಾಡಲಾಗಿದೆ ಎಂದು ಸುಧಾಕರ್ ಹೇಳಿದರು.

ಒಂದು ವೇಳೆ ಕಾಲೇಜುಗಳಿಗೆ ಮರಳದಿದ್ದರೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರ ಪರ್ಯಾಯ ಮಾರ್ಗ ಕಂಡುಕೊಳ್ಳಲಿದೆ. ಹಿಂದೆ 30 ಸಾವಿರ ಅಭ್ಯರ್ಥಿಗಳು ಕೌನ್ಸೆಲಿಂಗ್‌ಗೆ ಹಾಜರಾಗಿದ್ದರು. ಅಂದು ಆಯ್ಕೆಯಾಗದವರಿಗೆ ಅವಕಾಶ ನೀಡಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.