ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಪೌರ ಕಾರ್ಮಿಕರ ಸೇವೆ ಕಾಯಂ, ವೃತ್ತಿ ಆಧಾರಿತ ಕೋರ್ಸ್‌ಗಳ (ಜೆಒಸಿ) ಅರೆಕಾಲಿಕ ನೌಕರರ ಸೇವೆ ಕಾಯಂ, ಆರೋಗ್ಯ ಇಲಾಖೆಯ ಗುತ್ತಿಗೆ ವೈದ್ಯರ ಸೇವೆ ಕಾಯಂ, ಸ್ಮಶಾನ ಕಾರ್ಮಿಕರ ಸೇವೆ ಕಾಯಂ... ಹೀಗೆ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ, ಅರೆಕಾಲಿಕ ನೌಕರರ ಸೇವೆಯನ್ನು ರಾಜ್ಯ ಸರ್ಕಾರಗಳು ಕಾಯಂ ಮಾಡುವ ಮೂಲಕ ಅವರಿಗೆಲ್ಲ ಸೇವಾ ಭದ್ರತೆ ಒದಗಿಸಿವೆ.
ಆದರೆ, ಉನ್ನತ ಶಿಕ್ಷಣದ ಪ್ರಗತಿಗೆ ಗಣನೀಯ ಕೊಡುಗೆ ನೀಡುತ್ತಿರುವ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸೇವೆ ಕಾಯಂ ವಿಚಾರ ಎರಡು ದಶಕಗಳಿಂದ ಸದ್ದು ಮಾಡುತ್ತಲೇ ಇದೆ. ಅತ್ತ ಸೇವೆ ಕಾಯಮಾತಿಯೂ ಇಲ್ಲದೆ, ಇತ್ತ ಕೈತುಂಬಾ ಗೌರವಧನವೂ ಇಲ್ಲದೆ ಜೀವನ ನಿರ್ವಹಣೆಗೂ ಪರದಾಡಬೇಕಾದ ಸ್ಥಿತಿಯಲ್ಲಿ ಅತಿಥಿ ಉಪನ್ಯಾಸಕರು ಇದ್ದಾರೆ. ಈ ವಿಚಾರ ವಿಧಾನಸಭಾ ಚುನಾವಣೆ ಸಮಯದಲ್ಲಿ ಮುನ್ನಲೆಗೆ ಬಂದು ಚುನಾವಣೆ ಮುಗಿಯುತ್ತಿದ್ದಂತೆ ಮತ್ತೆ ಹಿನ್ನೆಲೆಗೆ ಸರಿಯುತ್ತದೆ. ಪ್ರತಿ ಚುನಾವಣೆಯಲ್ಲೂ ವಿರೋಧ ಪಕ್ಷಗಳು ಸೇವಾ ಭದ್ರತೆಯನ್ನು ಒಂದು ವಿಷಯವಾಗಿ ತೆಗೆದುಕೊಂಡು ಆಡಳಿತ ಪಕ್ಷವನ್ನು ಟೀಕಿಸುತ್ತ ಬರುತ್ತಿವೆ. ಅಧಿಕಾರಕ್ಕೆ ಬಂದ ನಂತರ ‘ಕಾಯಂ’ ಪ್ರಹಸನಗಳಲ್ಲೇ ಸಮಯ ದೂಡುತ್ತವೆ. ಹೀಗೆ ಐದು ಚುನಾವಣೆಗಳು ಮುಗಿದಿವೆ. ಮತ್ತೆ ಈ ಬಾರಿಯೂ ವಿಷಯ ಮುನ್ನಲೆಗೆ ಬಂದಿದೆ.
ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು ಎರಡು ದಶಕಗಳಿಂದ ಅಭದ್ರತೆಯ ಸುಳಿಯಲ್ಲಿದ್ದಾರೆ. ಗೌರವಯುತ– ಘನತೆಯ ಜೀವನ ಸಾಗಿಸಲು ಸಾಕಾಗುವಷ್ಟು ವೇತನವಿಲ್ಲದೇ, ಕಾರ್ಮಿಕರಿಗಿರುವ ಭವಿಷ್ಯ ನಿಧಿ (ಪಿಎಫ್), ಇಎಸ್‌ಐ ಸೌಲಭ್ಯಗಳೂ ಇಲ್ಲದೆ 20–25 ವರ್ಷಗಳಿಂದ ಸರ್ಕಾರಿ ‘ಜೀತದಾಳು’ಗಳಂತೆ ದುಡಿಯುತ್ತಿದ್ದಾರೆ. 500ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಸೇವಾ ಭದ್ರತೆಗೆ ಒತ್ತಾಯಿಸಿ ಹೋರಾಟ ನಡೆಸುತ್ತಲೇ, ಸಹಾಯಕ ಪ್ರಾಧ್ಯಾಪಕರ ಹುದ್ದೆಯ ಅವಕಾಶ ದೊರಕದೇ, ನಿವೃತ್ತಿಯ ವಯಸ್ಸು ದಾಟಿ ಮನೆ ಸೇರಿದ್ದಾರೆ.
ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತಮಗೆ ಸೇವಾ ಭದ್ರತೆ ಒದಗಿಸಬೇಕು. ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಪರಿಗಣಿಸಬೇಕು. ಅದಕ್ಕಾಗಿ ಹೊಸ ಹುದ್ದೆಗಳನ್ನು ಸೃಜಿಸಬೇಕು. ಇಲ್ಲವೇ ಖಾಲಿ ಹುದ್ದೆಗಳನ್ನು ಮೀಸಲಿಡಬೇಕು. ಅಲ್ಲಿಯವರೆಗೂ ವಿಶ್ವ ವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ನಿಯಮಗಳ ಪ್ರಕಾರ ವೇತನ ನೀಡಬೇಕು ಎಂಬ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎರಡು ದಶಕಗಳ ಅವಧಿಯಲ್ಲಿ ನೂರಾರು ಬಾರಿ ಧರಣಿ, ಹೋರಾಟಗಳನ್ನು ನಡೆಸಿದ್ದಾರೆ. ತಮಗೆ ಬರುವ ಸ್ವಲ್ಪ ಮೊತ್ತದ ವೇತನದಲ್ಲೇ ಹೋರಾಟದ ಖರ್ಚು, ವೆಚ್ಚಗಳನ್ನು ಭರಿಸಿಕೊಂಡಿದ್ದಾರೆ. ಅಮೂಲ್ಯ ಸಮಯವನ್ನು ತರಗತಿಗಳಲ್ಲಿ ಪಾಠ ಮಾಡಲು, ಹೋರಾಟಗಳಲ್ಲಿ ತೊಡಗಿಸಿ ಕೊಳ್ಳಲು ಕಳೆದಿದ್ದಾರೆ. ಸೇವಾ ಭದ್ರತೆ ಇಲ್ಲದ ಕಾರಣಕ್ಕೆ ಎಷ್ಟೋ ಉಪನ್ಯಾಸಕರು ಅವಿವಾಹಿತರಾಗಿಯೇ ಉಳಿದಿದ್ದಾರೆ. ಕೆಲವರು ವೃತ್ತಿ ತೊರೆದು ಹಣ್ಣು, ತರಕಾರಿ, ಸೊಪ್ಪು ಮಾರಾಟ ಮಾಡಿಕೊಂಡು, ತಮ್ಮ ವಿದ್ಯಾರ್ಹತೆಗೆ ತಕ್ಕುದಲ್ಲದ ಬೇರೆ ಕೆಲಸ ಹುಡುಕಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸು ತ್ತಿರುವವರಲ್ಲಿ ಅರ್ಹ, ಬೋಧನಾ ಕೌಶಲ ಹೊಂದಿದ ಪ್ರತಿಭಾವಂತರಿದ್ದಾರೆ. ಆದರೆ, ಅವರಿಗೆ ಸಾಮರ್ಥ್ಯಕ್ಕೆ ತಕ್ಕಂತೆ ಶೈಕ್ಷಣಿಕ ಚಟುವಟಿ ಕೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ದೊರೆತಿಲ್ಲ. ಅತ್ಯಂತ ಕಡಿಮೆ ವೇತನ, ಸಮಯಕ್ಕೆ ಸರಿಯಾಗಿ ಸಿಗದ ಗೌರವಧನ, ವರ್ಷವಿಡೀ ಕೆಲಸ ಇಲ್ಲದಿರುವುದು ಈ ಸಮೂಹವನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಸೇವಾ ಭದ್ರತೆ ಇಲ್ಲದ ಅವರ ಬದುಕು ಅಭದ್ರವಾಗಿದೆ.
ಯುಜಿಸಿ ನಿಯಮಾವಳಿ ಪ್ರಕಾರ, ಅರ್ಹತೆ ಹೊಂದಿದವರಿಗೆ ಪ್ರತಿ ತಿಂಗಳು ₹ 50 ಸಾವಿರ ವೇತನ ನೀಡಬೇಕು. ಆದರೆ, ರಾಜ್ಯ ಸರ್ಕಾರ ಅದಕ್ಕೆ ಸಿದ್ಧವಿಲ್ಲ. ಕಾಯಂ ಉಪನ್ಯಾಸಕರಿಗೆ ತಿಂಗಳಿಗೆ ಸುಮಾರು ₹ 1 ಲಕ್ಷದಿಂದ ₹ 2.5 ಲಕ್ಷದವರೆಗೆ ವೇತನವಿದೆ. ರಾಜ್ಯದಲ್ಲಿ ಈಚೆಗೆ ತೆಗೆದುಕೊಂಡ ನಿರ್ಧಾರದಂತೆ ವಾರಕ್ಕೆ 15 ತಾಸು ಕಾರ್ಯಭಾರ ನಿಗದಿಪಡಿಸಿ, ಎಲ್ಲ ಅರ್ಹತೆ ಇರುವವರಿಗೆ ಗರಿಷ್ಠ ₹ 32 ಸಾವಿರ ಗೌರವಧನ ನೀಡಲಾಗುತ್ತಿದೆ. ಅದೂ ಮೂರ್ನಾಲ್ಕು ತಿಂಗಳಿಗೆ ಒಮ್ಮೆ ಪಾವತಿಯಾಗುತ್ತಿದೆ.
‘2003ರಿಂದ ಹೆಚ್ಚುವರಿ ಕಾರ್ಯಭಾರಕ್ಕೆ ನೇಮಿಸಿಕೊಳ್ಳುವ ಉಪನ್ಯಾಸಕರನ್ನು ‘ಅತಿಥಿ ಉಪನ್ಯಾಸಕರು’ ಎಂದು ಕರೆಯಲಾಗುತ್ತಿದೆ. ಇವರು ಅರೆಕಾಲಿಕ ಅಥವಾ ಗುತ್ತಿಗೆ ನೌಕರರು ಅಲ್ಲ. ಅವರಿಗೆ ಹಂಚಿಕೆ ಮಾಡುವ ಕಾರ್ಯಭಾರವನ್ನು ಆಯಾ ಕಾಲೇಜುಗಳ ಶೈಕ್ಷಣಿಕ ವೇಳಾಪಟ್ಟಿಯ ಅನ್ವಯ ತೆಗೆದುಕೊಳ್ಳಲಾಗುತ್ತದೆ. ಹೀಗಾಗಿ ಅವರಿಗೆ ಸೇವಾ ಭದ್ರತೆ ಒದಗಿಸುವ ಪ್ರಶ್ನೆಯೇ ಇಲ್ಲ’ ಎನ್ನುವುದು ‘ಕಾಯಂ’ ಪ್ರಕ್ರಿಯೆಗಳಿಗೆ ಚಾಲನೆ ದೊರೆತಾಗಲೆಲ್ಲ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿ, ಸಚಿವರಿಗೆ ನೀಡಿರುವ ಸಮಜಾಯಿಷಿ.
ಅರೆಕಾಲಿಕ ‘ಅತಿಥಿ’ಯಾದ ಬಗೆ
ಸುಪ್ರೀಂ ಕೋರ್ಟ್ ಆದೇಶದಂತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 1995–96ರವರೆಗೆ ಕೆಲಸ ಮಾಡಿದ್ದ ಅರೆಕಾಲಿಕ ಉಪನ್ಯಾಸಕರನ್ನು ಕಾಯಂ ಮಾಡಲು ಅಂದಿನ ಸರ್ಕಾರ ನಿರ್ಧಾರ ತೆಗೆದುಕೊಂಡಿತ್ತು. ‘ಅರೆಕಾಲಿಕ’ ಪದನಾಮದ ಮೇಲೆ ಸೇವಾ ಭದ್ರತೆ ಒತ್ತಾಯಿಸಿ ಮತ್ತೆ ಕೋರ್ಟ್ ಮೊರೆ ಹೋಗಬಹುದು ಎಂಬ ದೂರದೃಷ್ಟಿಯಿಂದ 2003ರಲ್ಲಿ ‘ಅರೆಕಾಲಿಕ’ ಪದನಾಮ ಬದಲಾಯಿಸಿ ‘ಅತಿಥಿ’ ಎಂದು ತಿದ್ದುಪಡಿ ಮಾಡಲಾಯಿತು.
ಅಂದು ಮಾಸಿಕ ₹ 1,200 ಗೌರವಧನ ಪಡೆಯುತ್ತಿದ್ದ ಅತಿಥಿ ಉಪನ್ಯಾಸಕರು ಸೇವಾ ಭದ್ರತೆಗೆ ಆಗ್ರಹಿಸಿ ಮತ್ತೆ ಹೋರಾಟ ಆರಂಭಿಸಿದ್ದರು. ಹೋರಾಟ ತೀವ್ರಗೊಂಡಾಗಲೆಲ್ಲ ಸರ್ಕಾರ ಸ್ವಲ್ಪಸ್ವಲ್ಪವೇ ಗೌರವಧನ ಹೆಚ್ಚಳ ಮಾಡುತ್ತಾ ಬಂದಿತು. 2013ರ ಚುನಾವಣೆಯ ನಂತರ ಅಸ್ತಿತ್ವಕ್ಕೆ ಬಂದ ಸರ್ಕಾರ ಅತಿಥಿ ಉಪನ್ಯಾಸಕರ ಸೇವಾ ವಿಲೀನ ಕುರಿತು ಅಭಿಪ್ರಾಯ ನೀಡುವಂತೆ ಉನ್ನತ ಶಿಕ್ಷಣ ಇಲಾಖೆಗೆ ಸೂಚಿಸಿತ್ತು. ‘ಸೇವಾ ಭದ್ರತೆ ಸಾಧ್ಯವಿಲ್ಲ’ ಎಂದು ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ವರದಿ ನೀಡಿದ್ದರು. ಅತಿಥಿ ಉಪನ್ಯಾಸಕರ ಸೇವಾ ವಿಲೀನ, ಸೇವಾಭದ್ರತೆ ಮತ್ತು ಶಾಶ್ವತ ನಿಯಮಾವಳಿ ರಚನೆ ಮಾಡಲು ಒತ್ತಾಯಿಸಿ ಸಕಾ೯ರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ 2017ರಲ್ಲಿ ಧರಣಿ ಆರಂಭಿಸಿದ ನಂತರ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಲಾಯಿತು. ಸೇವಾ ಭದ್ರತೆಗೆ ಶಾಶ್ವತ ನಿಯಮಾವಳಿ ರಚನೆ ಸಕಾ೯ರದ ಕಾಯ೯ನೀತಿ ವಿಷಯ. ಹಾಗಾಗಿ, ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಮಿತಿ ಸಲಹೆ ನೀಡಿತ್ತು. ಆದರೆ, ನಂತರ ಬಂದ ಸರ್ಕಾರಗಳು ಸೇವಾ ಭದ್ರತೆಗೆ ಆದ್ಯತೆ ನೀಡಲೇ ಇಲ್ಲ.
ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಕುಮಾರ್ ನಾಯ್ಕ ಸಮಿತಿ ಶಿಫಾರಸಿನಂತೆ ಈಗಿನ ಸರ್ಕಾರ ಬೋಧನಾ ಅವಧಿಯನ್ನು ವಾರಕ್ಕೆ 8 ಗಂಟೆಯಿಂದ 15 ಗಂಟೆಯವರೆಗೆ ಹೆಚ್ಚಿಸಿ, ₹ 13,000 ಇದ್ದ ಗೌರವಧನವನ್ನು ಕನಿಷ್ಠ ₹ 26,000 ದಿಂದ ಗರಿಷ್ಠ ₹ 32,000ಕ್ಕೆ ಏರಿಸಿತು. ಉನ್ನತ ಶಿಕ್ಷಣ ಇಲಾಖೆಯ ಈ ನಿರ್ಧಾರದಿಂದಾಗಿ 10,600 ಮಂದಿ ಪುನರಾಯ್ಕೆಯಾದರು. ಆದರೆ ಕಾರ್ಯಭಾರ ಹೆಚ್ಚಳದಿಂದ 5 ಸಾವಿರಕ್ಕೂ ಹೆಚ್ಚು ‘ಅತಿಥಿ’ಗಳು ಶಾಶ್ವತವಾಗಿ ಕೆಲಸ ಕಳೆದುಕೊಂಡರು.
ಸಂಘಟಿತರಾಗದ ಅತಿಥಿ ಶಿಕ್ಷಕರು
ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಸೇವಾ ಭದ್ರತೆಗಾಗಿ ನಿರಂತರ ಹೋರಾಟ ನಡೆಸಿದರೆ, ರಾಜ್ಯದ ಪ್ರಾಥಮಿಕ, ಪ್ರೌಢಶಾಲೆಗಳ ಅತಿಥಿ ಶಿಕ್ಷಕರು ಹೋರಾಟಕ್ಕಾಗಿ ಸಂಘಟಿತರಾಗೇ ಇಲ್ಲ. ಕಳೆದ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳ 17 ಸಾವಿರ ಸೇರಿ ಒಟ್ಟು 25 ಸಾವಿರ ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸಿದ್ದಾರೆ.
ಮೊರಾರ್ಜಿ ವಸತಿ ಶಾಲೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ 465 ಶಿಕ್ಷಕರನ್ನು 2011ರಲ್ಲಿ ಕಾಯಂ ಮಾಡಲಾಯಿತು. ಪ್ರಾಥಮಿಕ ಶಾಲೆಗಳ ಶಿಕ್ಷಕರಿಗೆ 1983 ಹಾಗೂ 1992ರಲ್ಲಿ ಸೇವಾ ಭದ್ರತೆ ಒದಗಿಸಲಾಗಿತ್ತು. ಪದವಿ ಹಾಗೂ ಪಿಯು ಕಾಲೇಜುಗಳ ಅರೆಕಾಲಿಕ ಉಪನ್ಯಾಸಕರನ್ನು 2002–03ನೇ ಸಾಲಿನಲ್ಲಿ ಕಾಯಂ ಮಾಡಲಾಗಿತ್ತು. ನಂತರ 2007ರಲ್ಲಿ ‘ಕೃಪಾಂಕ’ ನೀಡಿ ಒಂದಷ್ಟು ಅತಿಥಿ ಉಪನ್ಯಾಸಕರಿಗೆ ಅನುಕೂಲ ಮಾಡಿಕೊಡಲಾಗಿತ್ತು.
‘ಸರ್ಕಾರ ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ’
ದೆಹಲಿ ಸರ್ಕಾರ ವಿಶೇಷ ನಿಯಮ ರೂಪಿಸಿ 16 ಸಾವಿರ ‘ಅತಿಥಿ’ ಶಿಕ್ಷಕರ ಸೇವೆಯನ್ನು ಕಾಯಂ ಮಾಡಿತ್ತು. ಹರಿಯಾಣ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳು ಸೇವೆ ಕಾಯಂ ಮಾಡಿವೆ. ಅದೇ ರೀತಿ ಕನಾ೯ಟಕ ನಾಗರಿಕ ಸೇವಾ ನಿಯಮಗಳಡಿ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದು ಸೇವಾ ಭದ್ರತೆ ಒದಗಿಸಲು ಅವಕಾಶವಿದೆ. ಆದರೆ, ಅಧಿಕಾರಕ್ಕೆ ಬಂದ ಯಾವ ಪಕ್ಷಗಳೂ ನಮ್ಮ ನೋವು ಆಲಿಸಲಿಲ್ಲ.
ಡಾ.ಸೋಮಶೇಖರ್ ಶಿಮೊಗ್ಗಿ, ಅಧ್ಯಕ್ಷ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ
‘ನಿರುದ್ಯೋಗಿಗಳಾದ ಸಹೋದ್ಯೋಗಿಗಳು’
ಗೌರವಧನ ಹೆಚ್ಚಳದ ನೆಪದಲ್ಲಿ ಮೊದಲು 8 ಗಂಟೆ ಇದ್ದ ಕೆಲಸದ ಅವಧಿಯನ್ನು 15 ಗಂಟೆಗೆ ಹೆಚ್ಚಳ ಮಾಡಲಾಯಿತು. ಇಬ್ಬರು ಕಾಯ೯ ನಿವ೯ಹಿಸುವ ಜಾಗದಲ್ಲಿ ಒಬ್ಬರಿಗೆ ಮಾತ್ರ ಅವಕಾಶ ದೊರೆಯಿತು. ಇದರಿಂದ 5 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಶಾಶ್ವತ ನಿರುದ್ಯೋಗಿಗಳಾದರು. ಸಂಘಟನೆಯ ಕೆಲವರು ಸರ್ಕಾರದ ಜತೆ ಸೇರಿಕೊಂಡು ಹೋರಾಟವನ್ನೇ ವ್ಯವಸ್ಥಿವಾಗಿ ದಿಕ್ಕು ತಪ್ಪಿಸಿದರು. ಜತೆಗೆ, ಮೂರು ವಷ೯ಗಳಲ್ಲಿ ಯುಜಿಸಿ ನಿಗದಿಪಡಿಸಿದ ವಿದ್ಯಾಹ೯ತೆ ಪಡೆಯದವರನ್ನು ನೇಮಕಾತಿಯಿಂದ ಸಂಪೂಣ೯ವಾಗಿ ನಿಬ೯ಂಧಿಸುವುದಾಗಿ ಹೇಳಿರುವುದು ಮತ್ತಷ್ಟು ಅಭದ್ರತೆ ಮೂಡಿಸಿದೆ.
ಸುಮಾರು 4 ಸಾವಿರ ಮಹಿಳಾ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ನಮಗೆ ಯಾವುದೇ ರೀತಿಯ ವೈದ್ಯಕೀಯ ಸೌಲಭ್ಯ, ಪಿಎಫ್ ಸೌಲಭ್ಯಗಳಿಲ್ಲ, ತಿಂಗಳಿಗೆ ಒಂದು ರಜೆಯ ಸೌಲಭ್ಯವೂ ಇಲ್ಲ. ಹೆರಿಗೆ ರಜೆಗೂ ಅವಕಾಶ ನೀಡಿಲ್ಲ.
ಎಂ.ಆರ್.ರೂಪಾ, ಮಹಿಳಾ ಸಂಯೋಜಕರು, ಅತಿಥಿ ಉಪನ್ಯಾಸಕರ ಸಂಘ
‘ನಿಯಮಗಳ ಮಾರ್ಪಾಡು ಅಗತ್ಯ’
ಅತಿಥಿ ಶಿಕ್ಷಕರು ಒಂದು ಸೀಮಿತ ಅವಧಿಗೆ ಕೆಲಸ ಮಾಡುತ್ತಾರೆ. ಪ್ರತಿ ವರ್ಷವೂ ಮಕ್ಕಳು ಮತ್ತು ಶಿಕ್ಷಕರ ಅನುಪಾತದ ಆಧಾರದಲ್ಲಿ ಅಗತ್ಯವಿರುವ ಅತಿಥಿ ಶಿಕ್ಷಕರನ್ನು ಸ್ಥಳೀಯವಾಗಿ ನೇಮಿಸಿಕೊಳ್ಳಲಾಗುತ್ತದೆ. ಅವರ ಗೌರವಧನವನ್ನು ಎಸ್‌ಡಿಎಂಸಿ ಸೇರಿದಂತೆ ಶಿಕ್ಷಣ ಇಲಾಖೆಯ ಬೇರೆಬೇರೆ ವಿಭಾಗಗಳಿಂದ ಭರಿಸಲಾಗುತ್ತದೆ. ಇದರಿಂದ ಸೇವಾ ಭದ್ರತೆ ಒದಗಿಸಲು ನಿಯಮಗಳಲ್ಲಿ ಅವಕಾಶವಿಲ್ಲ. ಈ ನಿಯಮಗಳನ್ನು ಮಾರ್ಪಡಿಸಬೇಕಾದ ಅಗತ್ಯವಿದೆ.
ಚಂದ್ರಶೇಖರ ನುಗ್ಲಿ, ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
****
430
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು
10,600
ಅತಿಥಿ ಉಪನ್ಯಾಸಕರು
5,000
ಕಾರ್ಯಭಾರ ಹೆಚ್ಚಳದಿಂದ ಕೆಲಸ ಕಳೆದುಕೊಂಡ ‘ಅತಿಥಿ’ಗಳು
47,483
ಸರ್ಕಾರಿ ಶಾಲೆಗಳು
25,000
ಅತಿಥಿ ಶಿಕ್ಷಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.