ADVERTISEMENT

ಅತಿಥಿ ಉಪನ್ಯಾಸಕರಿಗೆ ಸಂಕ್ರಾಂತಿ ‘ಹುಗ್ಗಿ’: ಕಾರ್ಯಭಾರ 15 ಗಂಟೆಗಳಿಗೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 20:23 IST
Last Updated 14 ಜನವರಿ 2022, 20:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಸುದೀರ್ಘ ಹೋರಾಟಕ್ಕೆ ಮಣಿದಿರುವ ರಾಜ್ಯ ಸರ್ಕಾರ ಅವರ ಗೌರವಧನವನ್ನು ಹೆಚ್ಚಳ ಮಾಡಿದೆ.

ಅತಿಥಿ ಉಪನ್ಯಾಸಕರ ಕಾರ್ಯಭಾರವನ್ನು ವಾರಕ್ಕೆ 8–10 ಗಂಟೆಯಿಂದ 15 ಗಂಟೆಗಳಿಗೆ ಹೆಚ್ಚಿಸಲಾಗಿದೆ. ಸೆಮಿಸ್ಟರ್ ಆಧಾರದಲ್ಲಿ ನೇಮಕಾತಿ ಮಾಡುವುದನ್ನು ನಿಲ್ಲಿಸಿ, ಇನ್ನು ಮುಂದೆ ಇಡೀ ಶೈಕ್ಷಣಿಕ ವರ್ಷಕ್ಕೆ (10 ತಿಂಗಳಿಗೆ) ನೇಮಿಸಲು ಸರ್ಕಾರ ತೀರ್ಮಾನಿಸಿದೆ.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾಹಿತಿ ನೀಡಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು, ಈ ತೀರ್ಮಾನದಿಂದಾಗಿ 430 ಸರ್ಕಾರಿ ಪದವಿ ಕಾಲೇಜುಗಳ 14,564 ಅತಿಥಿ ಉಪನ್ಯಾಸಕರಿಗೆ ಪ್ರಯೋಜನ ಸಿಗಲಿದೆ. ತಿಂಗಳಿಗೆ ₹13 ಸಾವಿರ ಪಡೆಯುತ್ತಿದ್ದವರಿಗೆ ₹32 ಸಾವಿರ, ₹11 ಸಾವಿರ ಪಡೆಯುತ್ತಿದ್ದವರಿಗೆ ₹28 ಸಾವಿರಕ್ಕೆ ಏರಿಕೆ ಮಾಡಿದ್ದು, ಪ್ರತಿ ತಿಂಗಳ 10ನೇ ತಾರೀಖಿನೊಳಗೆ ಗೌರವಧನ ಪಾವತಿ ಮಾಡಲಾಗುವುದು ಎಂದರು.

ADVERTISEMENT

‘ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸುವುದಕ್ಕೆ ಸರ್ಕಾರ ತಿಂಗಳ ಹಿಂದೆ ನಮ್ಮ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿಯೊಂದನ್ನು ರಚಿಸಿ ವರದಿ ನೀಡಲು ಸೂಚಿಸಲಾಗಿತ್ತು. ಸಮಿತಿಯ ಶಿಫಾರಸಿನಂತೆ ತೀರ್ಮಾನ ತೆಗೆದುಕೊಳ್ಳಲಾಗಿದೆ’ ಎಂದರು.

‘2002ರಿಂದಲೂ ಅತಿಥಿ ಉಪನ್ಯಾಸಕರ ಸಮಸ್ಯೆ ಇತ್ತು. ಹಿಂದಿನ ಸರ್ಕಾರಗಳು ಇದನ್ನು ಸರಿಯಾಗಿ ನಿಭಾಯಿಸದೇ ಕಗ್ಗಂಟಾಗಿ ಉಳಿದಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಸಹಾನುಭೂತಿ ಮತ್ತು ಮಾನವೀಯ ನೆಲೆಯಲ್ಲಿ ಪರಿಗಣಿಸಿ, ಕ್ಷಿಪ್ರಗತಿಯಲ್ಲಿ ಸ್ಪಂದಿಸಿದರು. ಇದರಿಂದ ತಿಂಗಳೊಳಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಯಿತು’ ಎಂದರು.

ಅತಿಥಿ ಉಪನ್ಯಾಸಕರ ಸುಗಮ ನೇಮಕಾತಿಗೆ ಆನ್‌ಲೈನ್‌ ಪೋರ್ಟಲ್ ಸಹ ಅಭಿವೃದ್ಧಿಪಡಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಇದರ ಮೂಲಕ ಜ.17 ರಿಂದ ಅರ್ಜಿ ಹಾಕಬಹುದು.

ಇದಕ್ಕೆ ಒಂದು ವಾರ ಕಾಲಾವಕಾಶ ಇದೆ. ಅಭ್ಯರ್ಥಿಗಳು ತಮ್ಮ ಇಚ್ಛೆಯ 5 ಸರ್ಕಾರಿ ಕಾಲೇಜುಗಳನ್ನು ಸೂಚಿಸಲು ಅವಕಾಶ ಮಾಡಿಕೊಡಲಾಗಿದೆ. ಇದರೊಂದಿಗೆ ಅವರಿಗೆ ಸೂಕ್ತ ಕಾರ್ಯಭಾರಇರುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಗೌರವಧನ ಹೆಚ್ಚಳದ ವಿವರ

*ಯುಜಿಸಿ ನಿಗದಿಪಡಿಸಿದ ಅರ್ಹತೆ ಹೊಂದಿದ್ದು, 5 ವರ್ಷಕ್ಕಿಂತ ಹೆಚ್ಚು ಅವಧಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿದ ಅನುಭವ ಇರುವವರಿಗೆ ₹32,000

*ಯುಜಿಸಿ ನಿಗದಿಪಡಿಸಿದ ಅರ್ಹತೆ ಹೊಂದಿದ್ದು, 5 ವರ್ಷಕ್ಕಿಂತ ಕಡಿಮೆ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿದ ಅನುಭವ ಹೊಂದಿರುವವರಿಗೆ ₹30,000

*ಯುಜಿಸಿ ನಿಗದಿಪಡಿಸಿದ ಅರ್ಹತೆ ಇಲ್ಲದ, 5 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿದ ಅನುಭವ ಇರುವವರಿಗೆ ₹28,000

*ಯುಜಿಸಿ ನಿಗದಿಪಡಿಸಿದ ಅರ್ಹತೆ ಇಲ್ಲದ, 5 ವರ್ಷಕ್ಕಿಂತ ಕಡಿಮೆ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿದ ಅನುಭವ ಇರುವವರಿಗೆ ₹26,000

ಆದೇಶದ ಇತರ ಅಂಶಗಳು:

* ಅತಿಥಿ ಉಪನ್ಯಾಸಕರಾಗಿ ಹೆಚ್ಚಿನ ಅವಧಿಗೆ ಸೇವೆ ಸಲ್ಲಿಸಿದವರಿಗೆ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಪ್ರಾಧಾನ್ಯತೆ ನೀಡಲಾಗುವುದು. ಇದಕ್ಕೆ ಸಂಬಂಧಪಟ್ಟಂತೆ ಈಗ ಇಲಾಖೆಯಲ್ಲಿ ಅನುಸರಿಸುತ್ತಿರುವ ಮಾನದಂಡಗಳ ಅನ್ವಯ ಆಯ್ಕೆ ಪಟ್ಟಿ ತಯಾರಿಸಲಾಗುವುದು.

* ಅತಿಥಿ ಉಪನ್ಯಾಸಕರಿಗೆ ಸಂಬಂಧಪಟ್ಟ ಕಾಲೇಜಿನಲ್ಲಿ ಗರಿಷ್ಠ 15 ಗಂಟೆ ಕಾರ್ಯಭಾರ ಲಭ್ಯವಿಲ್ಲದಿದ್ದರೆ ಅಂತಹ ಅತಿಥಿ ಉಪನ್ಯಾಸಕರಿಗೆ ಕಾರ್ಯಭಾರವಿರುವ ಇತರೆ ಸರ್ಕಾರಿ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸಲು ಸೂಚಿಸುವುದು. ಇದರ ಹೊರತಾಗಿ 15 ಗಂಟೆಗಳಿಗಿಂತ ಕಡಿಮೆ ಕಾರ್ಯಭಾರವಿದ್ದಲ್ಲಿ ಎಷ್ಟು ಗಂಟೆಗಳ ಕಾರ್ಯಭಾರ ಲಭ್ಯವಿದೆಯೋ ಅದಕ್ಕೆ ಅನುಗುಣವಾಗಿ ಗೌರವಧನ ನೀಡಲಾಗುವುದು.

* ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದ ಅತಿಥಿ ಉಪನ್ಯಾಸಕರಿಗೆ ನಿಗದಿತ ವಿದ್ಯಾರ್ಹತೆಯನ್ನು ಹೊಂದಲು 3 ವರ್ಷಗಳ ಕಾಲಾವಧಿ ನೀಡುವುದು. 3 ವರ್ಷಗಳ ನಂತರ ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದ ಅತಿಥಿ ಉಪನ್ಯಾಸಕರ ನೇಮಕಾತಿಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗುವುದು.

‘ಒಡೆದಾಳುವ ನೀತಿಯ ಆದೇಶ’

‘ಈ ಆದೇಶದಿಂದ ತೃಪ್ತಿಯಾಗಿಲ್ಲ. ಸರ್ಕಾರವು ಒಡೆದಾಳುವ ನೀತಿ ಅನುಸರಿಸಿದೆ. ಇದು ಸಂಕ್ರಾಂತಿಯ ಸಿಹಿ ಅಲ್ಲ, ಉಪನ್ಯಾಸಕರ ಪಾಲಿಗೆ ಕಹಿ ಆದೇಶವಾಗಿದ್ದು, ಅದನ್ನು ತಿರಸ್ಕರಿಸುತ್ತೇವೆ’ ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯಾಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ತಿಳಿಸಿದ್ದಾರೆ.

ಸರ್ಕಾರ ಉಪನ್ಯಾಸಕರ ಕಾರ್ಯಭಾರವನ್ನು 15 ಗಂಟೆಗೆ ಹೆಚ್ಚಿಸಿರುವುದರಿಂದ ಶೇ 50 ರಷ್ಟು ಅಂದರೆ 7 ಸಾವಿರ ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ. 8 ರಿಂದ 10 ಗಂಟೆಗಳ ಕಾರ್ಯಭಾರ ಇದ್ದಾಗ ಹೆಚ್ಚಿನ ಅತಿಥಿ ಉಪನ್ಯಾಸಕರಿಗೆ ಅವಕಾಶ ಸಿಗುತ್ತಿತ್ತು. ಒಂದು ಗಂಟೆಗೆ ₹450 ಇದ್ದದ್ದು ₹500 ಕ್ಕೆ ಹೆಚ್ಚಳವಾಗಿದೆ. ಗೌರವಧನದಲ್ಲಿ ಹೇಳಿಕೊಳ್ಳುವಷ್ಟು ಹೆಚ್ಚಳ ಆಗಿಲ್ಲ. ಇದರ ಬದಲಿಗೆ ರಾಜ್ಯದ್ದೇ ಆದ ಪ್ರತ್ಯೇಕ ವೇತನ ಶ್ರೇಣಿಯನ್ನು(ಸ್ಟೇಟ್‌ ಸ್ಕೇಲ್) ಅನುಷ್ಠಾನಗೊಳಿಸಬೇಕಿತ್ತು ಎಂದರು. ಯುಜಿಸಿ ಪ್ರಕಾರ ವಿದ್ಯಾರ್ಹತೆ ಹೊಂದಿದವರು, ಯುಜಿಸಿ ವಿದ್ಯಾರ್ಹತೆ ಹೊಂದಿಲ್ಲದವರು ಎಂಬ ತಾರತಮ್ಯ ಮಾಡಲಾಗಿದೆ. ಇದು ಸರಿಯಲ್ಲ. ಅಲ್ಲದೆ, 10 ತಿಂಗಳ ಬದಲಿಗೆ ಪೂರ್ಣಾವಧಿ ಎಂದು ನೇಮಕ ಮಾಡಿಕೊಂಡು, ರಜೆ ಅವಧಿಗೂ ಗೌರವಧನ ನೀಡಬೇಕಾಗಿತ್ತು ಎಂದಿದ್ದಾರೆ.

ಅತಿಥಿ ಉಪನ್ಯಾಸಕರ ಬಹುದಿನಗಳ ಬೇಡಿಕೆ ಈಡೇರಿಸಲು ಸರ್ಕಾರ ಒಪ್ಪಿದೆ. ಸಮಿತಿ ನೀಡಿದ ಶಿಫಾರಸುಗಳ ಜಾರಿಗೆ ಹಣಕಾಸಿನ ಅನುಮೋದನೆ ನೀಡಲಾಗಿದೆ.

- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.