ಬೆಂಗಳೂರು: ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದ ಐದು ಗ್ಯಾರಂಟಿಗಳ ಪೈಕಿ ‘ಗೃಹ ಜ್ಯೋತಿ’ ಮತ್ತು ‘ಶಕ್ತಿ’ ಯೋಜನೆಗಳ ಅನುಷ್ಠಾನಕ್ಕೆ ಸೋಮವಾರ ಮಾರ್ಗಸೂಚಿ ಪ್ರಕಟಿಸಲಾಗಿದೆ. ಇದರೊಂದಿಗೆ ನಾಲ್ಕು ಗ್ಯಾರಂಟಿಗಳ ಜಾರಿಗೆ ಮಾರ್ಗಸೂಚಿ ಪ್ರಕಟವಾಗಿದ್ದು, ‘ಗೃಹ ಲಕ್ಷ್ಮಿ’ ಯ ಮಾರ್ಗಸೂಚಿಯಷ್ಟೇ ಬಾಕಿ ಉಳಿದಿದೆ.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಚನೆಯಾದ ಬಳಿಕ ನಡೆದ ಮೊದಲ ಸಂಪುಟ ಸಭೆಯಲ್ಲಿ ಐದೂ ಗ್ಯಾರಂಟಿಗಳ ಅನುಷ್ಠಾನಕ್ಕೆ ತಾತ್ವಿಕ ಒಪ್ಪಿಗೆ ನೀಡಲಾಗಿತ್ತು. ಜೂನ್ 2ರಂದು ನಡೆದ ಸಂಪುಟ ಸಭೆಯಲ್ಲಿ ಐದೂ ‘ಗ್ಯಾರಂಟಿ’ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು.
‘ಅನ್ನ ಭಾಗ್ಯ’ ಮತ್ತು ‘ಯುವ ನಿಧಿ’ ಯೋಜನೆಗಳ ಅನುಷ್ಠಾನಕ್ಕೆ ಶನಿವಾರ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿತ್ತು. ಗೃಹ ಬಳಕೆಗೆ 200 ಯೂನಿಟ್‌ವರೆಗೆ ಉಚಿತವಾಗಿ ವಿದ್ಯುತ್ ಒದಗಿಸುವ ‘ಗೃಹ ಜ್ಯೋತಿ’ ಯೋಜನೆ ಅನುಷ್ಠಾನಕ್ಕೆ ಇಂಧನ ಇಲಾಖೆ ಮತ್ತು ರಾಜ್ಯದಾದ್ಯಂತ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ‘ಶಕ್ತಿ’ ಯೋಜನೆ ಅನುಷ್ಠಾನಕ್ಕೆ ಸಾರಿಗೆ ಇಲಾಖೆ ಸೋಮವಾರ ಮಾರ್ಗಸೂಚಿಗಳನ್ನು ಪ್ರಕಟಿಸಿವೆ.
‘ಗೃಹ ಜ್ಯೋತಿ’ ಯೋಜನೆಯನ್ನು ಷರತ್ತುಗಳೊಂದಿಗೆ ಅನುಷ್ಠಾನಕ್ಕೆ ತರಲಾಗುತ್ತಿದೆ. 2022–23ನೇ ಆರ್ಥಿಕ ವರ್ಷದಲ್ಲಿ ಮಾಸಿಕ ಸರಾಸರಿ ಬಳಕೆಯ ಜತೆಗೆ ಶೇಕಡ 10ರಷ್ಟು ಹೆಚ್ಚಿನ ಮೊತ್ತದ ವಿದ್ಯುತ್ ಅನ್ನು ಉಚಿತವಾಗಿ ಪೂರೈಸಲಾಗುತ್ತದೆ. ಉಚಿತ ವಿದ್ಯುತ್ ಪೂರೈಸಲು ಪ್ರಸ್ತುತ ಚಾಲ್ತಿಯಲ್ಲಿರುವ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಮತ್ತು ಅಮೃತ ಜ್ಯೋತಿ ಯೋಜನೆಗಳ ಫಲಾನುಭವಿಗಳನ್ನೂ ಗೃಹ ಜ್ಯೋತಿ ಯೋಜನೆಯ ವ್ಯಾಪ್ತಿಗೆ ಸೇರಿಸಲಾಗಿದೆ.
ಉಚಿತ ವಿದ್ಯುತ್ ಪೂರೈಕೆಗೆ ತಗಲುವ ವೆಚ್ಚವನ್ನು ಭರಿಸಲು ವಿದ್ಯುತ್ ಸರಬರಾಜು ಕಂಪನಿಗಳಿಗೆ ಮುಂಗಡವಾಗಿ ಅನುದಾನ ಒದಗಿಸಲಾಗುವುದು ಎಂದು ಇಂಧನ ಇಲಾಖೆ ಆದೇಶದಲ್ಲಿ ತಿಳಿಸಿದೆ.
ಲೈಂಗಿಕ ಅಲ್ಪಸಂಖ್ಯಾತರಿಗೂ ಸೌಲಭ್ಯ: ‘ಶಕ್ತಿ’ ಯೋಜನೆಯಡಿ ಮಹಿಳೆಯರ ಜತೆಗೆ ಲೈಂಗಿಕ ಅಲ್ಪಸಂಖ್ಯಾತರಿಗೂ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕದ ನಿವಾಸಿಗಳಷ್ಟೇ ಈ ಯೋಜನೆಯ ಪ್ರಯೋಜನ ಪಡೆಯಬಹುದು.
ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಸೌಲಭ್ಯ ಪಡೆಯಬೇಕಾದರೆ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು
2022–23ನೇ ಆರ್ಥಿಕ ವರ್ಷದಲ್ಲಿ ತಿಂಗಳಿಗೆ ಸರಾಸರಿ 200 ಯೂನಿಟ್‌ಗಳಿಗಿಂತ ಹೆಚ್ಚು ವಿದ್ಯುತ್ ಬಳಸಿರುವ ಕುಟುಂಬಗಳು ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ. ಅವರು ಬಿಲ್‌ನ ಪೂರ್ಣ ಮೊತ್ತ ಪಾವತಿಸಬೇಕು
ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಯೋಜನೆ ಅನ್ವಯ. ವಾಣಿಜ್ಯ ಉದ್ದೇಶದ ವಿದ್ಯುತ್ ಬಳಕೆಗೆ ಅನ್ವಯಿಸುವುದಿಲ್ಲ
ಪ್ರತಿ ತಿಂಗಳು ಮೀಟರ್ ರೀಡಿಂಗ್ ಮಾಡಿದಾಗ ಒಟ್ಟು ವಿದ್ಯುತ್ ಬಳಕೆಯ ಪ್ರಮಾಣಕ್ಕೆ ಬಿಲ್ ನಮೂದಿಸಬೇಕು
ಅರ್ಹ (2022–23ರಲ್ಲಿನ ತಿಂಗಳ ಸರಾಸರಿ ಬಳಕೆ ಮತ್ತು ಶೇ 10ರಷ್ಟು ಹೆಚ್ಚಿನ ಮೊತ್ತ) ಪ್ರಮಾಣದ ವಿದ್ಯುತ್‌ನ ಬಿಲ್ ಮೊತ್ತವನ್ನು ಕಡಿತಗೊಳಿಸಿ, ಉಳಿದ ಮೊತ್ತಕ್ಕೆ ಗ್ರಾಹಕರಿಗೆ ಬಿಲ್ ನೀಡಲಾಗುವುದು. ಈ ಮೊತ್ತವನ್ನು ಗ್ರಾಹಕರು ಪಾವತಿಸಬೇಕು
ಅರ್ಹ ಮೊತ್ತಕ್ಕಿಂತ ಕಡಿಮೆ ಪ್ರಮಾಣದ ವಿದ್ಯುತ್ ಬಳಕೆಯಾಗಿದ್ದರೆ ಗ್ರಾಹಕರಿಗೆ ಶೂನ್ಯ ಮೊತ್ತಕ್ಕೆ ಬಿಲ್ ನೀಡಬೇಕು
ಪ್ರತಿ ಫಲಾನುಭವಿ ಕಡ್ಡಾಯವಾಗಿ ತನ್ನ ಗ್ರಾಹಕರ ಗುರುತಿನ ಸಂಖ್ಯೆ (ಕಸ್ಟಮರ್ ಐಡಿ)/ ಖಾತೆಯ ಗುರುತಿನ ಸಂಖ್ಯೆಯನ್ನು (ಅಕೌಂಟ್ ಐಡಿ) ಆಧಾರ್ ಜತೆ ಜೋಡಣೆ ಮಾಡಬೇಕು
ಜೂನ್ 30ಕ್ಕೆ ಕೊನೆಗೊಂಡಂತೆ ಜುಲೈ ತಿಂಗಳಲ್ಲಿ ನೀಡುವ ಬಿಲ್‌ನಲ್ಲಿರುವ ಬಾಕಿ ಮೊತ್ತವನ್ನು ಮೂರು ತಿಂಗಳೊಳಗೆ ಪಾವತಿಸಬೇಕು. ನಿಗದಿತ ಅವಧಿಯೊಳಗೆ ಬಾಕಿ ಪಾವತಿಸದಿದ್ದರೆ ಅಂತಹ ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ
ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮೀಟರ್ ಅಳವಡಿಕೆ ಮತ್ತು ಮೀಟರ್ ಓದುವುದು ಕಡ್ಡಾಯ
ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಲು ‘ಶಕ್ತಿ ಸ್ಮಾರ್ಟ್ ಕಾರ್ಡ್’ ಪಡೆಯಬೇಕು. ಅದು ಸಿಗುವವರೆಗೆ ಕೇಂದ್ರ–ರಾಜ್ಯ ಸರ್ಕಾರ ನೀಡಿದ ಯಾವುದಾದರೂ ಗುರುತಿನ ಚೀಟಿ ಬಳಸಬಹುದು
ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಗಳನ್ನು ಪಡೆದು, ‘ಶಕ್ತಿ ಸ್ಮಾರ್ಟ್ ಕಾರ್ಡ್’ ವಿತರಿಸುವ ಪ್ರಕ್ರಿಯೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸಬೇಕು
‘ಶಕ್ತಿ’ ಸ್ಮಾರ್ಟ್ ಕಾರ್ಡ್ ವಿತರಿಸುವವರೆಗೂ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಇಲಾಖೆ, ಸರ್ಕಾರಿ ಸ್ವಾಮ್ಯದ ಕಚೇರಿಗಳಿಂದ ವಿತರಿಸಿರುವ ಭಾವಚಿತ್ರ ಹಾಗೂ ವಾಸದ ವಿಳಾಸವಿರುವ ಗುರುತಿನ ಚೀಟಿಗಳನ್ನು ಪರಿಗಣಿಸಿ ಶೂನ್ಯ ಟಿಕೆಟ್ ನೀಡುವುದು
ರಾಜ್ಯದ ಒಳಗಿನ ಪ್ರಯಾಣಕ್ಕೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ. ಎಲ್ಲ ಅಂತರರಾಜ್ಯ ಸಾರಿಗೆ ಟ್ರಿಪ್‌ಗಳು ಯೋಜನೆಯಿಂದ ಹೊರಕ್ಕೆ
ನಗರ ಸಾರಿಗೆ, ಸಾಮಾನ್ಯ ಮತ್ತು ವೇಗದೂತ ಬಸ್‌ಗಳಲ್ಲಿ ಮಾತ್ರ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ
ರಾಜಹಂಸ, ನಾನ್ ಎ.ಸಿ.– ಸ್ಲೀಪರ್, ವಜ್ರ, ವಾಯು ವಜ್ರ, ಐರಾವತ, ಐರಾವತ ಕ್ಲಬ್ ಕ್ಲಾಸ್, ಐರಾವತ ಗೋಲ್ಡ್ ಕ್ಲಾಸ್, ಅಂಬಾರಿ, ಅಂಬಾರಿ ಡ್ರೀಮ್ ಕ್ಲಾಸ್, ಅಂಬಾರಿ ಉತ್ಸವ್, ಫ್ಲೈ ಬಸ್, ಇವಿ ಪವರ್ ಪ್ಲಸ್‌ಗಳಲ್ಲಿ ಶಕ್ತಿ ಯೋಜನೆ ಅನ್ವಯವಾಗುವುದಿಲ್ಲ
ಬಿಎಂಟಿಸಿ ಹೊರತುಪಡಿಸಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳ ಎಲ್ಲ ಬಸ್‌ಗಳಲ್ಲಿ (ಅಂತರ ರಾಜ್ಯ, ಹವಾ ನಿಯಂತ್ರಿತ ಮತ್ತು ಐಷಾರಾಮಿ ಹೊರತುಪಡಿಸಿ) ಶೇಕಡ 50ರಷ್ಟು ಆಸನಗಳನ್ನು ಪುರುಷರಿಗೆ ಮೀಸಲಿಡುವುದು
ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಈ ಯೋಜನೆಯಡಿ ತಗಲುವ ವೆಚ್ಚವನ್ನು ಶೂನ್ಯ ಟಿಕೆಟ್ ಮತ್ತು ಶಕ್ತಿ ಸ್ಮಾರ್ಟ್ ಕಾರ್ಡ್ ದತ್ತಾಂಶದ ಆಧಾರದಲ್ಲಿ ಸಾರಿಗೆ ಇಲಾಖೆ ಭರಿಸಲಿದೆ
ಲೈಂಗಿಕ ಅಲ್ಪಸಂಖ್ಯಾತರಿಗೂ ಸೌಲಭ್ಯ: ‘ಶಕ್ತಿ’ ಯೋಜನೆಯಡಿ ಮಹಿಳೆಯರ ಜತೆಗೆ ಲೈಂಗಿಕ ಅಲ್ಪಸಂಖ್ಯಾತರಿಗೂ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕದ ನಿವಾಸಿಗಳಷ್ಟೇ ಈ ಯೋಜನೆಯ ಪ್ರಯೋಜನ ಪಡೆಯಬಹುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.