ADVERTISEMENT

ಕುಲಪತಿ ನೇಮಕ: ರಾಜ್ಯಪಾಲರ ಅಧಿಕಾರ ಮೊಟಕು?

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2024, 23:30 IST
Last Updated 18 ಸೆಪ್ಟೆಂಬರ್ 2024, 23:30 IST
ರಾಜಭವನ-ಸಂಗ್ರಹ ಚಿತ್ರ
ರಾಜಭವನ-ಸಂಗ್ರಹ ಚಿತ್ರ   

ಬೆಂಗಳೂರು: ವಿಶ್ವವಿದ್ಯಾಲಯಗಳ ಕುಲಪತಿ ಮತ್ತು ವಿವಿಧ ನೇಮಕಾತಿಗಳಲ್ಲಿ ರಾಜ್ಯಪಾಲರ ಅಧಿಕಾರವನ್ನು ಮೊಟಕು ಮಾಡುವತ್ತ ಗಂಭೀರ ಚಿಂತನೆ ನಡೆಸಿರುವ ರಾಜ್ಯ ಸರ್ಕಾರ, ಇದಕ್ಕಾಗಿ ‘ಗುಜರಾತ್‌ ಮಾದರಿ’ ಅಳವಡಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದೆ.

‘ಕಲಬುರಗಿಯಲ್ಲಿ ಮಂಗಳವಾರ ನಡೆದ ಸಂಪುಟ ಸಭೆಯಲ್ಲಿ ಕುಲ‍ಪತಿ ನೇಮಕಕ್ಕೆ ಸಂಬಂಧಿಸಿದ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ಚರ್ಚೆಯಾಗಿದೆ. ಗುಜರಾತ್‌ ಮಾದರಿ ಅಳವಡಿಸಿಕೊಳ್ಳುವಂತೆ ಸಲಹೆ ಬಂದಿದೆ’ ಎಂದು ಸರ್ಕಾರದ ಮೂಲಗಳು ಹೇಳಿವೆ.

‘ಗುಜರಾತ್ ಸರ್ಕಾರವು ಇಂತಹ ಬದಲಾವಣೆಗಳನ್ನು ತಂದಾಗ, ಅದರ ವಿರುದ್ಧ ಹಲವು ಬಾರಿ ಸುಪ್ರೀಂ ಕೋರ್ಟ್‌ಗೆ ಹೋಗಲಾಗಿತ್ತು. ಆದರೆ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿತ್ತು. ಹೀಗಾಗಿ ಗುಜರಾತ್‌ ಮಾದರಿಯನ್ನು ಅಳವಡಿಸಿಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ’ ಎಂದು ಮೂಲಗಳು ಹೇಳಿವೆ.

ADVERTISEMENT

ಗುಜರಾತ್ ವಿಶ್ವವಿದ್ಯಾಲಯಗಳ ಕಾಯ್ದೆ ಪ್ರಕಾರ, ಕುಲಪತಿ, ಪ್ರಭಾರ ಕುಲಪತಿ, ಕುಲಾಧಿಪತಿ ನೇಮಕಾತಿಯಲ್ಲಿ ರಾಜ್ಯಪಾಲರಿಗಿಂತ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಅಧಿಕಾರವಿದೆ. ಕುಲಸಚಿವ, ಮೌಲ್ಯಮಾಪನ ಕುಲಸಚಿವ, ಹಣಕಾಸು ಅಧಿಕಾರಿ, ಸಿಂಡಿಕೇಟ್‌ ಸದಸ್ಯರ ನೇಮಕಾತಿಯಲ್ಲೂ ರಾಜ್ಯ ಸರ್ಕಾರಕ್ಕೇ ಹೆಚ್ಚಿನ ಅಧಿಕಾರವಿದೆ.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕನಿಷ್ಠ 10 ವರ್ಷ ಬೋಧನೆ ಮಾಡಿದ ಅನುಭವ ಇರುವವರನ್ನು ಮಾತ್ರ ಕುಲಪತಿ ಹುದ್ದೆಗೆ ನೇಮಕ ಮಾಡಬೇಕು ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗದ ಮಾರ್ಗಸೂಚಿಗಳು ಹೇಳುತ್ತವೆ. ಈ ನಿಯಮವನ್ನು ಅಳವಡಿಸಿಕೊಳ್ಳುವ ಬಗ್ಗೆ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಸಂಘರ್ಷಕ್ಕೆ ದಾರಿ?:

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿಚಾರಣೆ ನಡೆಸಲು ಅನುಮತಿ ನೀಡಿದ ವಿಷಯ ಈಗಾಗಲೇ, ರಾಜಭವನ ಮತ್ತು ಸರ್ಕಾರದ ಮಧ್ಯೆ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ. ಅದರ ಬೆನ್ನಲ್ಲೇ, ಕ್ರಿಮಿನಲ್ ಮೊಕದ್ದಮೆ ದಾಖಲೆ ಹಾಗೂ ದೋಷಾರೋಪ ಪಟ್ಟಿ ಸಲ್ಲಿಕೆಗೆ ಅನುಮತಿ ಕೋರಿ ಲೋಕಾಯುಕ್ತ ಸಂಸ್ಥೆ ಸಲ್ಲಿಸಿರುವ ಎಷ್ಟು ಪ್ರಸ್ತಾವನೆಗಳು ಸರ್ಕಾರದ ಮುಂದಿವೆ ಎಂಬ ವಿವರಣೆ ಕೇಳಿ, ರಾಜ್ಯಪಾಲರು ಸರ್ಕಾರಕ್ಕೆ ಪತ್ರ ಬರೆದಿದ್ದರು. 

ಈ ಬೆಳವಣಿಗೆಯ ಮಧ್ಯೆಯೇ, ರಾಜ್ಯಪಾಲರ ಅಧಿಕಾರವನ್ನೇ ಮೊಟಕು ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.